ದಾವಣಗೆರೆ: ಹಾಲಿನ ದರವನ್ನು ಇಂದು ರಾಜ್ಯ ಸರ್ಕಾರ ಏರಿಸಿದೆ. ಸರ್ಕಾರದ ವಿರುದ್ಧ ದಾವಣಗೆರೆಯ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ದರ ಇಳಿಸುವಂತೆ ಗೃಹಿಣಿಯರು ಒತ್ತಾಯಿಸಿದ್ದಾರೆ.
"ಹಾಲಿನ ದರ ಏರಿಸಿರುವುದರಿಂದ ನಮಗೆ ಬೇಜಾರಾಗಿದೆ. ಕಾಳು, ಆಹಾರ ಧಾನ್ಯಗಳ ಬೆಲೆಗಳೂ ಏರಿಕೆಯಾಗಿವೆ. ಇದರಿಂದ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತಿದೆ. ಮಕ್ಕಳಿಗೆ, ವಯಸ್ಸಾದವರಿಗೆ ಹಾಲು ಕೊಡುವುದು ಕಷ್ಟವಾಗುತ್ತಿದೆ. ಇದೇ ರೀತಿಯಲ್ಲಿ ತುಪ್ಪ, ಮೊಸರಿನ ದರ ಏರಿಸಿದರೆ ಮಕ್ಕಳಿಗೆ ಹೇಗೆ ಪ್ರೋಟಿನ್ ಕೊಡಲು ಆಗುತ್ತದೆ?. ಮನೆ ನಿಭಾಯಿಸುವವರು ಹೆಂಗಸರು. ದರ ಏರಿಕೆ ಮಾಡಿಸಿದ್ರೆ ಮನೆ ಹೇಗೆ ನಿಭಾಯಿಸಬೇಕು ಹೇಳಿ" ಎಂದು ರಾಜೇಶ್ವರಿ ಕೇಶವ್ ಎಂಬವರು ಪ್ರಶ್ನಿಸಿದರು.
"ಇದ್ದಕ್ಕಿದ್ದಂತೆ ಹಾಲಿನ ದರ ಏರಿಕೆ ಮಾಡಿದ್ರೆ ಕಷ್ಟ ಆಗುತ್ತೆ. ನಾವು ಟೀ ತಯಾರಿಸಲು ದಿನಕ್ಕೆ 5-6 ಲೀಟರ್ ಹಾಲು ಬಳಸುತ್ತೇವೆ. ಸರ್ಕಾರ ದರ ಏರಿಕೆ ಮಾಡಿರುವುದರಿಂದ ಕಷ್ಟ ಆಗುತ್ತದೆ. ನಾವು ಟೀ ದರ ಏರಿಸಿದರೆ ಗ್ರಾಹಕರು ಟೀ ಕೊಳ್ಳಲು ಹಿಂದೇಟು ಹಾಕುತ್ತಾರೆ" ಎಂದು ಹೋಟೆಲ್ ಮಾಲೀಕ ಹನುಮಂತು ತಿಳಿಸಿದರು.
ಸ್ಥಳೀಯ ನಿವಾಸಿ ಮಹಾಂತೇಶ್ ಎಂಬವರು ಮಾತನಾಡುತ್ತಾ, ''ಹಾಲಿನ ದರ ಏರಿಕೆಯಂದಾಗಿ ಬಡವರು, ಕೂಲಿ ಕಾರ್ಮಿಕರಿಗೆ ಬಹಳಷ್ಟು ಹೊರೆ ಆಗುತ್ತದೆ. ಪ್ರತಿಯೊಂದು ವಸ್ತುವಿನ ಬೆಲೆಯೂ ಈ ದಿನಗಳಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ, ಜೀವನ ಮಾಡುವುದೇ ಕಷ್ಟವಾಗಿದೆ. ಹೋಟೆಲ್ಗಳಲ್ಲಿ ಕಾಫಿ, ಟೀ ಬೆಲೆ ಜಾಸ್ತಿಯಾಗಿದೆ. ಹೀಗಾಗಿ ಹಾಲಿನ ದರ ಕಡಿಮೆ ಮಾಡಲಿ'' ಎಂದು ಒತ್ತಾಯಿಸಿದರು.
ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಶಾಕ್: ಹಾಲಿನ ದರ ಪ್ರತಿ ಲೀಟರ್ಗೆ 2 ರೂ. ಹೆಚ್ಚಳ! - MILK PRICE HIKE