ದಾವಣಗೆರೆ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾರ್ಡ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ರೋಗಿಗಳ ಮೇಲೆ ಮೇಲ್ಛಾವಣಿ ಕುಸಿದು ಬಿದ್ದಿರುವ ಘಟನೆ ಮಂಗಳವಾರ ತಡರಾತ್ರಿ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಇಲ್ಲಿಯ ವಾರ್ಡ್ ಸಂಖ್ಯೆ 71-72ರಲ್ಲಿ ಮಲಗಿದ್ದ ರೋಗಿಗಳ ಮೇಲೆ ಏಕಾಏಕಿ ಸಿಮೆಂಟ್ ಮಿಶ್ರಿತ ಮೇಲ್ಛಾವಣಿಯ ಚಕ್ಕೆಗಳು ಕುಸಿದು ಬಿದ್ದಿವೆ. ಘಟನೆಯಿಂದ ಕೆಲ ರೋಗಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೇಲ್ಛಾವಣಿ ಬೀಳುತ್ತಿದ್ದಂತೆ ಭಯಭೀತರಾದ ವಾರ್ಡ್ನಲ್ಲಿದ್ದ ರೋಗಿಗಳು ಹೊರಗೆ ಓಡಿ ಬಂದಿದ್ದಾರೆ. ಜಿಲ್ಲಾಸ್ಪತ್ರೆಯ ವ್ಯವಸ್ಥೆ ಬಗ್ಗೆ ರೋಗಿಗಳು ಹಾಗೂ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.
ಈ ಹಿಂದೆ ಕೂಡ ಈ ರೀತಿಯ ಘಟನೆ ನಡೆದಿತ್ತು. ನಂತರ ಕುಸಿದ ಗೋಡೆಗೆ ಪ್ಲಾಸ್ಟಿಂಗ್ ಮಾತ್ರ ಮಾಡಲಾಗಿತ್ತು. ಇದೀಗ ಮತ್ತೆ ಘಟನೆ ಮರುಕಳಿಸಿದೆ ಎಂದು ಅಧಿಕಾರಿಗಳ ವಿರುದ್ಧ ರೋಗಿಗಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಪ್ರತಿಕ್ರಿಯೆ ನೀಡಿದ್ದು, ಕಳೆದ ರಾತ್ರಿ ಈ ಘಟನೆ ನಡೆದಿದೆ. ರೋಗಿಗಳ ಮೇಲೆ ಮೇಲ್ಛಾವಣಿಯ ಕೆಲ ಸಿಮೆಂಟ್ ಮಿಶ್ರಿತ ಚಕ್ಕೆಗಳು ಬಿದ್ದಿವೆ. ಯಾವುದೇ ಪ್ರಾಣಾಪಾಯವಾಗಿಲ್ಲ, ರೋಗಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಚಿಕಿತ್ಸೆ ನೀಡಲಾಗಿದೆ. ಮೇಲ್ಛಾವಣಿ ಪ್ಲಾಸ್ಟರಿಂಗ್ ಮಾಡಿಸಲು ಹೇಳಿದ್ದೇವೆ. ಅವ್ಯವಸ್ಥೆ ನಿವಾರಿಸಲು ಸರ್ಕಾರದಿಂದ ಅನುದಾನ ಬಂದಿದೆ. ಕಾಮಗಾರಿ ಆರಂಭಿಸುತ್ತೇವೆ. ರೋಗಿಗಳಿಗೆ ತೊಂದರೆ ಆಗದಂತೆ ಬಂದೋಬಸ್ತ್ ಮಾಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಾಕು ನಾಯಿ ಬೊಗಳಿದ್ದಕ್ಕೆ ಕುಟುಂಬಸ್ಥರ ಮೇಲೆ ಹಲ್ಲೆ ಆರೋಪ: ಆರೋಪಿ ಬಂಧನ