ದಾವಣಗೆರೆ : ಈ ಬಾರಿ ಯುವಜನೋತ್ಸವಕ್ಕೆ ದಾವಣಗೆರೆ ಜಿಲ್ಲೆ ಆಯ್ಕೆಯಾಗಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಜರುಗುವ ಉತ್ಸವ ರಂಗೇರಲಿದೆ. ಹೊಸ ವರ್ಷಕ್ಕೆ ಅಂದರೆ ಜ. 05 ಮತ್ತು 06 ರಂದು ನಡೆಯುವ ಉತ್ಸವದಲ್ಲಿ 2500 ಸ್ಪರ್ಧಿಗಳು ಭಾಗಿಯಾಗಲಿದ್ದಾರೆ. ಅಲ್ಲದೆ ಬೆಣ್ಣೆ ನಗರಿಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ಸ್ಪರ್ಧಿಗಳು ಕಲೆಯ ರಸದೌತಣ ಉಣಬಡಿಸಲಿದ್ದಾರೆ.
ಯುವಜನೋತ್ಸವಕ್ಕೆ ದಾವಣಗೆರೆ ಜಿಲ್ಲಾಡಳಿತ ಕೂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜನವರಿ 05 ರಂದು ನಗರದ ಎಂಬಿಎ ಮೈದಾನದಲ್ಲಿ ಜರುಗುವ ಯುವಜನೋತ್ಸವ ಕಾರ್ಯಕ್ರಮವವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಇದರಲ್ಲಿ ಸಾಕಷ್ಟು ಜನ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಸ್ಪರ್ಧಿಗಳಿಗೆ ಉಳಿದುಕೊಳ್ಳಲು ಹಾಸ್ಟೆಲ್ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಗಂಗಾಧರ್ ಸ್ವಾಮಿ ಮಾಹಿತಿ ; ಎಂಬಿಎ ಗ್ರೌಂಡ್ನಲ್ಲಿ ಐದು ಸಾವಿರ ಜನ ಕೂರಲು ಜರ್ಮನ್ ಟೆಂಟ್ ಹಾಕಲಾಗಿದೆ. 2000-2500 ಸ್ಪರ್ಧಾರ್ಥಿಗಳು ಭಾಗಿಯಾಗಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಸ್ಪರ್ಧಿಗಳಿಗಾಗಿ ದಾವಣಗೆರೆಯ ಬೆಣ್ಣೆದೋಸೆ, ಮಾಲ್ದಿ, ಇನ್ನಿತರ ಖಾದ್ಯಗಳನ್ನು ತಯಾರಿಸಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಜನಪದ ನೃತ್ಯ, ಜನಪದ ಗೀತೆ, ವಿಜ್ಞಾನ ವಸ್ತು ಪ್ರದರ್ಶನ, ಕಥೆ ಬರೆಯುವ ಕಾರ್ಯಕ್ರಮ, ಚಿತ್ರಕಲೆ, ವಾಕ್ಚಾತುರ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರಿಗೆ ಸಮಿತಿ, ವಸತಿ ಸಮಿತಿ, ಸ್ವಾಗತ ಸಮಿತಿ, ಜಾಹೀರಾತು ಸಮಿತಿ, ಆಹಾರ ಸಮಿತಿ ಮಾಡಲಾಗಿದೆ. ಶಾಂತಿ ಕಾಪಾಡಲು ಭದ್ರತೆಗಾಗಿ ಪೊಲೀಸ್ ಇಲಾಖೆ ಸಕಲ ವ್ಯವಸ್ಥೆ ಮಾಡಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಸ್ಪರ್ಧಿಗಳಿಗೆ ಊಟ ಕೊಡುವ ಮುನ್ನ ತಯಾರಿಸಿದ ಆಹಾರವನ್ನು ಪರಿಶೀಲನೆ ನಡೆಸಿ ಬಳಿಕ ಊಟ ಕೊಡಲಾಗುವುದೆಂದು ಅವರು ಮಾಹಿತಿ ನೀಡಿದರು.
ಸರ್ಕಾರ ಈ ಬಾರಿ ಯುವಜನೋತ್ಸವ ಆಚರಣೆಗೆ ದಾವಣಗೆರೆ ಆಯ್ಕೆ ಆಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಉದ್ಘಾಟನೆ ವೇಳೆ ಐದು ಸಾವಿರ ಯುವಕರು ಬರಲಿದ್ದಾರೆ. ಕದ್ರಿ ಮಣಿಕಂಠ ತಂಡದಿಂದ ಸಂಸ್ಕೃತ ಕಲಾ ಸಂಜೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಏಳು ಕಡೆ ಸಮಾನಾಂತರ ವೇದಿಕೆ ಮಾಡಿಕೊಂಡಿದ್ದೇವೆ. ಆಯಾ ಭಾಗದಲ್ಲಿ ಯುವ ಜನರಿಗಾಗಿ ನಾಲ್ಕು ಬಸ್ಗಳು ನಿರಂತರವಾಗಿ ಸುತ್ತು ಹೊಡೆಯುತ್ತಿರುತ್ತವೆ. ಬೇಕಾದವರು ಎಲ್ಲಿಯಾದರೂ ಹತ್ತಿ ಇಳಿಯಬಹುದು. ಯುವಜನೋತ್ಸವಕ್ಕೆ ಸರ್ಕಾರ 75 ಲಕ್ಷ ರೂ. ಅನುದಾನ ಕೊಟ್ಟಿದೆ. ಹೆಚ್ಚುವರಿ 50 ಲಕ್ಷ ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಪಾಲಿಕೆ, ಗ್ರಾ.ಪಂ.ಗಳಿಂದ ಸಂಪನ್ಮೂಲವನ್ನು ಕ್ರೋಢೀಕರಿಸಲಾಗುತ್ತಿದೆ ಎಂದು ತಿಳಿಸಿದರು.
ರಾತ್ರಿ ಬಾಡೂಟ ಆಯೋಜನೆ : ಯುವಜನೋತ್ಸವ ಉದ್ಘಾಟನೆ ದಿನ ರಾತ್ರಿ ಜ.05 ರಂದು ಶಿಬಿರಾರ್ಥಿಗಳಿಗೆ ಮಾಂಸಹಾರ ವ್ಯವಸ್ಥೆ ಮಾಡಿಸಲಾಗುವುದು. ಎಂಬಿಎ ಕಾಲೇಜು ಮೈದಾನದಲ್ಲಿ ಮುಖ್ಯ ವೇದಿಕೆ ಇರಲಿದ್ದು, ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ನಡೆಯಲಿದೆ. ಎಂಬಿಎ ಕಾಲೇಜು ಸಭಾಂಗಣದಲ್ಲಿ ಚಿತ್ರಗೀತೆಗಳ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಚಿತ್ರಕಲೆ ಮತ್ತು ವಾಕ್ಚಾತುರ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಗೆದ್ದ ಸ್ಪರ್ಧಿಗಳಿಗೆ ಬಹುಮಾನ : ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿ ಗೆದ್ದವರಿಗೆ ಜಿಲ್ಲಾಡಳಿತ ಬಹುಮಾನ ಕೊಡಲಿದೆ. ಮೊದಲ ಬಹುಮಾನ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ., ಮೂರನೇ ಬಹುಮಾನ ₹10 ಸಾವಿರ ನಿಗದಿ ಮಾಡಲಾಗಿದೆ. ಅಲ್ಲದೆ ಪ್ರಶಸ್ತಿ ಕೊಟ್ಟು ಗೌರವಿಸಲಾಗುತ್ತದೆ. ಇಲ್ಲಿ ಗೆದ್ದ ಸ್ಪರ್ಧಿಗಳು ದೆಹಲಿಯಲ್ಲಿ ಜರುಗುವ ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಸ್ಪರ್ಧೆಯಲ್ಲಿ ತೀರ್ಪು ನೀಡಲು 30 ಜನ ನುರಿತ ತೀರ್ಪುಗಾರರನ್ನ ಕರೆಸಲಾಗುತ್ತಿದೆ ಎಂದು ವಿವರಿಸಿದರು.
ಇದನ್ನೂ ಓದಿ : ಮತದಾರರ ಆಶೀರ್ವಾದದಿಂದ ನಾನು ಆರೋಗ್ಯವಾಗಿರುವೆ: ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ