ಬೆಂಗಳೂರು: ಪಿಯುಸಿ ಫಲಿತಾಂಶದ ಕುರಿತು ಆರಂಭವಾದ ಜಗಳದಲ್ಲಿ ತಾಯಿಯೇ ತನ್ನ ಮಗಳನ್ನು ಹತ್ಯೆಗೈದಿರುವ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಸ್ತ್ರಿನಗರದಲ್ಲಿ ನಡೆದಿದೆ. ಸಾಹಿತಿ (19) ತನ್ನ ತಾಯಿಯಿಂದಲೇ ಹತ್ಯೆಯಾಗಿರುವ ಯುವತಿ. ಘಟನೆಯಲ್ಲಿ ತಾಯಿ ಪದ್ಮಜಾ (60) ಸಹ ಚಾಕು ಇರಿತಕ್ಕೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಿಯು ಫಲಿತಾಂಶದ ಕುರಿತು ಫೈಟ್: ಮನೆಯಲ್ಲಿ ಹತ್ಯೆಯಾದ ಸಾಹಿತಿ ಹಾಗೂ ಆಕೆಯ ತಾಯಿ ಪದ್ಮಜಾ ಮಾತ್ರ ವಾಸವಿದ್ದರು. ಇತ್ತೀಚೆಗೆ ಪ್ರಕಟವಾದ ಮಗಳ ಪಿಯುಸಿ ಫಲಿತಾಂಶ ತಾಯಿ ಪದ್ಮಜಾಗೆ ತೃಪ್ತಿ ತಂದಿರಲಿಲ್ಲ. ಇನ್ನು ಮಗಳು, ಎರಡು ವಿಷಯಗಳ ಪರೀಕ್ಷೆಗೆ ಹಾಜರಾಗಿಲಿಲ್ಲ. ಇದರಿಂದ ಫೇಲ್ ಆಗಿದ್ದರು. ಇದೇ ವಿಚಾರವಾಗಿ ತಾಯಿ - ಮಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಇದೇ ವಿಚಾರವಾಗಿ ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿದಾಗ ಇಬ್ಬರೂ ಸಹ ಪರಸ್ಪರ ಚಾಕು ಇರಿದುಕೊಂಡಿದ್ದಾರೆ.
ಇರಿತದಿಂದ ತೀವ್ರ ರಕ್ತಸ್ರಾವ ಉಂಟಾಗಿ ಮನೆಯಲ್ಲಿಯೇ ಮಗಳು ಸಾಹಿತಿ ಸಾವನ್ನಪ್ಪಿದ್ದಾಳೆ. ಮಗಳಿಂದ ದೇಹದ ನಾಲ್ಕೈದು ಕಡೆ ಇರಿತಕ್ಕೊಳಗಾಗಿರುವ ಪದ್ಮಜಾ ಸಹ ಗಂಭೀರ ಗಾಯಗೊಂಡಿದ್ದು, ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿರುವುದಾಗಿ ದಕ್ಷಿಣ ವಿಭಾಗದ ಡಿಸಿಪಿ ಲೊಕೇಶ್ ಭರಮಪ್ಪ ಜಗಲ್ಸಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಗದಗ: ಸ್ಥಳ ಮಹಜರು ವೇಳೆ ಪೊಲೀಸ್ ಮೇಲೆ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು - Gadag Firing
ಪ್ರತ್ಯೇಕ ಪ್ರಕರಣ, ವಿಚ್ಚೇದನ ಬಯಸಿದ್ದ ಪತ್ನಿಯ ಹತ್ಯೆಗೈದ ಪತಿ: ವಿಚ್ಚೇದನ ಬಯಸಿದ್ದ ಪತ್ನಿಯನ್ನು ಆಕೆಯ ಪತಿಯೇ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಸೋಮವಾರ ಸಂಜೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಇಲಿಯಾಸ್ ನಗರದಲ್ಲಿ ನಡೆದಿದೆ. ಶಿಯಾಪತ್ ಉನ್ನಿಸಾ (38) ಆಕೆಯ ಪತಿ ನೂರುಲ್ಲಾ ಎಂಬಾತನಿಂದ ಹತ್ಯೆಯಾದ ಮಹಿಳೆ.
ಶಿಯಾಫತ್ ಇತ್ತೀಚೆಗೆ ತನ್ನ ಪತಿ ನೂರುಲ್ಲಾನಿಂದ ವಿಚ್ಚೇದನ ಪಡೆಯಲು ನಿರ್ಧರಿಸಿದ್ದಳು. ಇದರಿಂದ ಬೇಸತ್ತಿದ್ದ ನೂರುಲ್ಲಾ ಸಹ ಕಳೆದ 5 ದಿನಗಳಿಂದಲೂ ಪತ್ನಿಯಿಂದ ಅಂತರ ಕಾಪಾಡಿಕೊಂಡಿದ್ದ. ಪತ್ನಿ ಶಿಯಾಫತ್ ಇಂದು ಮನೆ ಖಾಲಿ ಮಾಡಿಕೊಂಡು ಹೊರಡಲು ಸಿದ್ದವಾಗುತ್ತಿರುವುದನ್ನು ತಿಳಿದ ನೂರುಲ್ಲಾ ಆಕೆಗೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಕರಗದ ವೇಳೆ ಮೈ ತಾಕಿದ್ದಕ್ಕೆ ಬಾಲಕನ ಹತ್ಯೆ ಆರೋಪ: ನಾಲ್ವರು ಅಪ್ರಾಪ್ತರು ವಶಕ್ಕೆ - Boy Murder