ಮೈಸೂರು: ನಾಡಹಬ್ಬ ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಅರಮನೆ ನಗರಿಗೆ ಆಗಮಿಸಿರುವ ಅಭಿಮನ್ಯು ನೇತೃತ್ವದ 9 ಗಜಪಡೆಗೆ ತಾಲೀಮಿಗೂ ಮುನ್ನ ಇಂದು ತೂಕ ಪರೀಕ್ಷೆ ಮಾಡಲಾಯಿತು. ಇದರಲ್ಲಿ ಅಂಬಾರಿ ಹೊರುವ ಅಭಿಮನ್ಯು ಹೆಚ್ಚು ತೂಕ ಇರುವ ಆನೆಯಾಗಿದೆ.
9 ಗಜಪಡೆಗಳ ತೂಕದ ವಿವರ:
ಆನೆ | ತೂಕ |
ಅಭಿಮನ್ಯು | 5560 ಕೆಜಿ |
ಭೀಮ | 4945 ಕೆಜಿ |
ಏಕಲವ್ಯ | 4730 ಕೆಜಿ |
ಕಂಜನ್ | 4515 ಕೆಜಿ |
ಧನಂಜಯ | 5155 ಕೆಜಿ |
ಲಕ್ಷ್ಮಿ | 2480 ಕೆಜಿ |
ವರಲಕ್ಷ್ಮಿ | 3495 ಕೆಜಿ |
ರೋಹಿತ | 3625 ಕೆಜಿ |
ಗೋಪಿ | 4970 ಕೆಜಿ |
ಡಿಸಿಎಫ್ ಪ್ರಭುಗೌಡ ಹೇಳಿದ್ದೇನು?: "ಕಾಡಿನಿಂದ ನಾಡಿಗೆ ಬರುವ ಗಜಪಡೆಯನ್ನು ತಾಲೀಮುಗೂ ಮುನ್ನ ಮೊದಲ ಬಾರಿಗೆ ತೂಕ ಪರೀಕ್ಷೆ ಮಾಡಲಾಗುತ್ತದೆ. ಕಾರಣವೆಂದರೆ ಆನೆಗಳ ದೈಹಿಕ ಪರೀಕ್ಷೆ ಹಾಗೂ ಅವುಗಳ ಸಾಮರ್ಥ್ಯ ತಿಳಿಯಲು ಜತೆಗೆ ಪ್ರತಿನಿತ್ಯ ಯಾವ ರೀತಿ ಆಹಾರ ಕೊಡಬೇಕು ಎಂಬುದನ್ನು ತಿಳಿಯಲು ಆನೆಗಳ ತೂಕ ಪರೀಕ್ಷೆ ಮಾಡಲಾಗುತ್ತದೆ. ಜಂಬೂ ಸವಾರಿ ಮೆರವಣಿಗೆ ಹಿಂದಿನ ದಿನ ಮತ್ತೊಮ್ಮೆ ತೂಕ ಪರೀಕ್ಷೆ ಮಾಡಲಾಗುತ್ತದೆ. ಮೊದಲ ಹಂತದ 9 ಗಜಪಡೆಗಳು ಆರೋಗ್ಯವಾಗಿವೆ" ಎಂದು ಡಿಸಿಎಫ್ ಪ್ರಭುಗೌಡ ಹಾಗೂ ವೈದ್ಯ ಮುಜಿದ್ ಅವರು ಆನೆಗಳ ಆರೋಗ್ಯ ಹಾಗೂ ತೂಕ ಪರೀಕ್ಷೆಯ ಕಾರಣಗಳನ್ನು ವಿವರಿಸಿದರು.
ನಾಳೆಯಿಂದ ಗಜಪಡೆ ತಾಲೀಮು: ಅಭಿಮನ್ಯು ನೇತೃತ್ವದ 9 ಗಜ ಪಡೆಯನ್ನು ಭಾನುವಾರ ಅರಮನೆ, ಕೆ.ಆರ್. ಸರ್ಕಲ್, ಆರ್ಯುವೇದಿಕ್ ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗುತ್ತದೆ. ಬಳಿಕ ದಸರಾ ಸಮೀಪಿಸುತ್ತಿದ್ದಂತೆ ಮರದ ಅಂಬಾರಿ ತಾಲೀಮು ನಡೆಸುವುದು ವಿಶೇಷವಾಗಿದ್ದು, ಆ ಮೂಲಕ ದಸರಾ ಗಜಪಡೆಯನ್ನು ಜಂಬೂಸವಾರಿ ಮೆರವಣಿಗೆಗೆ ಸಿದ್ಧತೆ ಮಾಡಲಾಗುತ್ತದೆ.
ಇದನ್ನೂ ಓದಿ: ಮೈಸೂರಿನ ರಾಜ ಬೀದಿಗಳಲ್ಲಿ ದಸರಾ ಆನೆಗಳ ಗಾಂಭೀರ್ಯದ ನಡಿಗೆ: ವಿಡಿಯೋ - Dasara Elephants walking
ಶುಕ್ರವಾರವಷ್ಟೇ ಅರಮನೆ ಪ್ರವೇಶಿಸಿರುವ ಗಜಪಡೆ: ಶುಕ್ರವಾರ ಜಯ ಮಾರ್ತಂಡ ದ್ವಾರದ ಬಳಿ ಬೆಳಗ್ಗೆ 10 ರಿಂದ 10.30ರ ತುಲಾ ಲಗ್ನದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಸ್ವಾಗತ ಮಾಡಲಾಗಿದೆ. ಅಕ್ಟೋಬರ್ 12ರ ಜಂಬೂ ಸವಾರಿ ಮೆರವಣಿಗೆ ಮುಗಿಯುವವರೆಗೂ ಅರಮನೆಯಲ್ಲೇ ವಾಸ್ತವ್ಯ ಹೂಡಲಿವೆ.
ಮೊದಲ ಹಂತದಲ್ಲಿ ಜಂಬೂ ಸವಾರಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ, ಅಭಿಮನ್ಯು (58), ಭೀಮ (24), ಗೋಪಿ (41), ಧನಂಜಯ (43), ಕಂಜನ್(25), ರೋಹಿಣಿ (22), ಲಕ್ಷ್ಮೀ (53) , ವರಲಕ್ಷ್ಮಿ (67) , ಏಕಲವ್ಯ (38) ಮೊದಲಾದ 9 ಆನೆಗಳು ಗಜಪಯಾಣದಲ್ಲಿ ಮೈಸೂರಿಗೆ ಆಗಮಿಸಿವೆ.