ಬೆಂಗಳೂರು: ಅಕ್ಟೋಬರ್ 3ರಿಂದ 20ರ ತನಕ ಒಟ್ಟು 17 ದಿನಗಳ ಕಾಲ ಶಾಲೆಗಳಿಗೆ ದಸರಾ ರಜೆ ಘೋಷಿಸಲಾಗಿದೆ. ಅಕ್ಟೋಬರ್ 21 ರಿಂದ ಶೈಕ್ಷಣಿಕ ಸಾಲಿನ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಏಪ್ರಿಲ್ 10 ತನಕ ಶಾಲೆ ನಡೆಯಲಿದೆ.
ನಾಡಹಬ್ಬ ದಸರಾಕ್ಕಾಗಿ ಅ.3 ರಿಂದ 20ರ ವರೆಗೆ ದಸರಾ ರಜೆಯನ್ನು ಘೋಷಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಹಾಗೂ ಖಾಸಗಿ ಶಾಲೆಗಳಿಗೆ ಈ ರಜೆ ಅನ್ವಯವಾಗಲಿದೆ. ನಾಳೆಯಿಂದ ಎಸ್ಎಸ್ಎಲ್ಸಿ ಅರ್ಧ ವಾರ್ಷಿಕ ಪರೀಕ್ಷೆ ಆರಂಭಗೊಳ್ಳಲಿದ್ದು ಅ.1 ಕ್ಕೆ ಮುಕ್ತಾಯವಾಗಲಿದೆ. ಅ.2 ಗಾಂಧಿ ಜಯಂತಿ ಮುಗಿಯುತ್ತಿದ್ದಂತೆ ದಸರಾ ರಜೆ ಆರಂಭಗೊಳ್ಳಲಿದೆ.
ಮಂಗಳೂರಿನಲ್ಲೂ ಇದೇ ದಿನಾಂಕಗಳಂದು ರಜೆ ನೀಡಲಾಗಿದೆ. ಈ ಹಿಂದೆ ಮಂಗಳೂರು, ಉಡುಪಿ ಪ್ರಾಂತ್ಯದಲ್ಲಿ ವಿದ್ಯಾರ್ಥಿಗಳ ದಸರಾ ರಜೆಯಲ್ಲಿ ಸ್ವಲ್ಪ ಮಾರ್ಪಾಡು ಆಗುತ್ತಿತ್ತು. ಉಳಿದೆಡೆಗೆ ಕೊಡಲಾಗುವ ರಜೆಗೆ ಹೋಲಿಸಿದರೆ ಮಂಗಳೂರಿನಲ್ಲಿ ದಸರಾ ರಜೆ ವ್ಯತ್ಯಾಸವಾಗುತ್ತಿತ್ತು. ಆದರೆ, ಈ ಬಾರಿ ಅಂಥ ಯಾವುದೇ ಬದಲಾವಣೆ ಆಗಿಲ್ಲ. ಕರ್ನಾಟಕದ ಎಲ್ಲಾ ಶಾಲೆಗಳಿಗೆ ಒಂದೇ ರೀತಿ, ಒಂದೇ ಅವಧಿಯ ರಜೆಯನ್ನು ನೀಡಲಾಗಿದೆ.
ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳಿಗೆ ಈ ರಜೆಗಳು ಅನ್ವಯವಾಗುವುದಿಲ್ಲ. ಅವು ಕೇಂದ್ರ ಪಠ್ಯಕ್ರಮದಡಿ ಕಾರ್ಯನಿರ್ವಹಿಸುವುದರಿಂದ ಆ ಶಾಲೆಗಳ ರಜೆಯ ದಿನಾಂಕ ಹಾಗೂ ರಜೆಯ ಅವಧಿ ಬೇರೆಯಾಗಿರುತ್ತದೆ.
ಇದನ್ನೂ ಓದಿ: ಕನ್ನಡದಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆಗೆ ಅವಕಾಶ: ಕೇಂದ್ರ ಸಚಿವ ವಿ. ಸೋಮಣ್ಣ - V Somanna