ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾಪ್ಟನ್ ಬೃಜೇಶ್ ಚೌಟ ಅವರಿಗೆ ಬಿಜೆಪಿ ಪಕ್ಷ ಟಿಕೆಟ್ ನೀಡಿದೆ. ಈ ಮೂಲಕ ಮೂರುಬಾರಿ ಗೆದ್ದು ಬೀಗಿದ್ದ ನಳಿನ್ ಕುಮಾರ್ ಕಟೀಲು ಅವರಿಗೆ ಪಕ್ಷ ಕೊಕ್ ನೀಡಿದೆ.
ಶಾಲಾ ಕಾಲೇಜು ದಿನಗಳಿಂದ ಎನ್ಸಿಸಿ ಮತ್ತು ಆರ್ಎಸ್ಎಸ್ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕ್ಯಾ. ಬೃಜೇಶ್ ಚೌಟ ದೇಶದ ಪ್ರತಿಷ್ಠಿತ ಸಂಸ್ಥೆ IIM ನಿಂದ ಪದವಿ ಪಡೆದವರು. 2003 ರಲ್ಲಿ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡಮಿಯಿಂದ ತೇರ್ಗಡೆಯಾಗಿ ದೇಶದ ಸೇವೆಗೆ ಪದಾರ್ಪಣೆ ಮಾಡಿದರು. ದೇಶ ಸೇವೆಯ ಮೊದಲ ವರ್ಷದಲ್ಲೇ ಸವಾಲಿನ ಗೋರ್ಖಾ ರೈಫಲ್ಸ್ನಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕಿತು. ದಂಗೆಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಅಸ್ಸಾಂ ಮತ್ತು ಮಣಿಪುರದ ಕಾರ್ಯಾಚರಣೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಕಮಾಂಡಿಂಗ್ ಆಫೀಸರ್‌ನ ಸಹಾಯಕರಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದಾಗಿದೆ. 8 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಗೊಂಡರು. ಬಳಿಕ ಬಿಜೆಪಿ ಪಕ್ಷ ಸೇರಿ ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ದ.ಕ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಸದ್ಯ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ.
2015ರಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳ ನಿಷೇಧಕ್ಕೊಳಗಾದ ಸಂದರ್ಭ ಅದರ ವಿರುದ್ಧ ಹೋರಾಟ ಸಂಘಟಿಸಿದವರಲ್ಲಿ ಕ್ಯಾ.ಬೃಜೇಶ್ ಕೂಡ ಒಬ್ಬರು. ಕಂಬಳಕ್ಕೆ ಜಯ ದೊರಕಿದ ಬೆನ್ನಲ್ಲೇ ಮಂಗಳೂರು ನಗರದಲ್ಲಿಯೇ ಕಂಬಳ ಆಯೋಜಿಸಲು ನಿಶ್ಚಯಿಸಿದರು. ಈ ಮೂಲಕ ಯುವಕರ ಪಡೆಯನ್ನು ಕಟ್ಟಿಕೊಂಡು ಸತತ ಆರು ವರ್ಷಗಳಿಂದ 'ಮಂಗಳೂರು ಕಂಬಳ' ಹೆಸರಲ್ಲಿ ಕಂಬಳ ನಡೆಸುತ್ತಿದ್ದಾರೆ.
ಕ್ಯಾಪ್ಟನ್ ಬೃಜೇಶ್ ಚೌಟ ಬೆಳೆದು ಬಂದ ಹಾದಿ: ಭಾರತೀಯ ಭೂಸೇನೆಯ ನಿವೃತ್ತ ಸೇನಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ನಾಯಕ ಕ್ಯಾಪ್ಟನ್ ಬೃಜೇಶ್ ಚೌಟ ಅವರು ಭಾರತೀಯ ಜನತಾ ಪಾರ್ಟಿ ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿ ಸ್ಥಾನಕ್ಕೆ ಇತ್ತೀಚೆಗೆ ಆಯ್ಕೆಯಾಗಿದ್ದಾರೆ.
ಬೃಜೇಶ್ ಚೌಟರು ಕಾಲೇಜು ದಿನಗಳಲ್ಲಿಯೇ ಎನ್ಸಿಸಿಯಲ್ಲಿ ಹೆಸರು ಮಾಡಿ ಸೇನೆಗೆ ಸೇರ್ಪಡೆಯಾಗಿದ್ದರು. ಮಂಗಳೂರಿನ ಮಿಲಾಗ್ರಿಸ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯು ಮತ್ತು ಬಿಎಸ್ಸಿ ಪದವಿ ಪೂರೈಸಿದ್ದ ಚೌಟ, ಬಳಿಕ ಮಧ್ಯಪ್ರದೇಶದ ಇಂದೋರ್ ಐಐಎಂನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಪದವಿಯಲ್ಲಿದ್ದಾಗ ಎನ್ಸಿಸಿಯಲ್ಲಿ ಮಂಗಳೂರು ವಿವಿಯಲ್ಲಿ ಬೆಸ್ಟ್ ಕೆಡೆಟ್ ಎಂದು ಗುರುತಿಸಿದ್ದಲ್ಲದೇ, ದೆಹಲಿ ರಿಪಬ್ಲಿಕ್ ಪೆರೇಡ್ನಲ್ಲಿ ಎನ್ಸಿಸಿ ಕೆಡೆಟ್ ಆಗಿ ಪಾಲ್ಗೊಂಡಿದ್ದರು.
UPSC ಆಯೋಜಿಸುವ ಕಂಬೈನ್ಡ್ ಡಿಫೆನ್ಸ್ ಸರ್ವಿಸಸ್ ಎಕ್ಸಾಮಿನೇಷನ್ (CDSE) ಪರೀಕ್ಷೆ ಹಾಗೂ SSB ಇಂಟರ್ವ್ಯೂನಲ್ಲಿ ತೇರ್ಗಡೆಗೊಂಡು ಚೆನ್ನೈಯಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA)ಯಲ್ಲಿ ತರಬೇತಿ ಪಡೆದು ಭಾರತೀಯ ಭೂಸೇನೆಯ ಪ್ರತಿಷ್ಠಿತ 8 ಗೋರ್ಖಾ ರೈಫಲ್ಸ್ನ 7ನೇ ಬಟಾಲಿಯನ್ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಅಸ್ಸಾಂ ಮತ್ತು ಮಣಿಪುರ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. 2011ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ಊರಿಗೆ ಮರಳಿದ್ದ ಬೃಜೇಶ್ ಚೌಟ, ಆರ್ಎಸ್ಎಸ್ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.
2013ರಲ್ಲಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2016-19ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆನಂತರ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಕ್ಯಾಪ್ಟನ್ ಚೌಟ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಪ್ರಭಾರಿಯಾಗಿ ಕೆಲಸ ಮಾಡಿದ್ದರು.
2015ರಿಂದ ಕೇರಳ, ಕರ್ನಾಟಕ, ದೆಹಲಿ, ಮಹಾರಾಷ್ಟ್ರದ ಅಸೆಂಬ್ಲಿ ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಬಿಜೆಪಿ ಚುನಾವಣಾ ಸಮಿತಿಯ ಭಾಗವಾಗಿರುವ ಯುವ ಸಂವಾದ ಘಟಕದಲ್ಲಿ ರಾಜ್ಯ ಸಹ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.
ಇನ್ನು ಮಂಗಳೂರು ಲಿಟ್ ಫೆಸ್ಟ್ ಆಯೋಜಕರಾಗಿ, ಸಮರ್ಥನ್ ಫೌಂಡೇಶನ್ ಟ್ರಸ್ಟಿಯಾಗಿ ಹೀಗೆ.. ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಬೃಜೇಶ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರಿಗೆ ಈಗ ರಾಜ್ಯ ಬಿಜೆಪಿ ಕಾರ್ಯದರ್ಶಿ ಸ್ಥಾನಕ್ಕೆ ಬಡ್ತಿ ಸಿಕ್ಕಿದ್ದು ಸೇವಾ ಕಾರ್ಯದ ವ್ಯಾಪ್ತಿ ವಿಸ್ತರಣೆಯಾಗಿದೆ. ಶಾಲಾ ಕಾಲೇಜು ದಿನಗಳಿಂದ ಎನ್ಸಿಸಿ ಮತ್ತು ಆರ್ಎಸ್ಎಸ್ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕಾರಣ ಇವರಿಗೆ ಸೇನೆಯ ಮೂಲಕ ಮತ್ತಷ್ಟು ದೇಶ ಸೇವೆ ಮಾಡಲು ಪ್ರೇರಣೆ ನೀಡಿತು.
ಇದನ್ನೂ ಓದಿ: ಯಡಿಯೂರಪ್ಪನವರಿಂದ ಅನ್ಯಾಯವಾಗಿದೆ ಅಂತ ಬಹಳ ಜನ ನೋವು ತೋಡಿಕೊಳ್ಳುತ್ತಿದ್ದಾರೆ: ಕೆ. ಎಸ್. ಈಶ್ವರಪ್ಪ