ಕಾರವಾರ: ಸಾಮಾನ್ಯವಾಗಿ ಎರಡು ಚಕ್ರದ ಮೂಲಕ ಸೈಕಲ್ ರೈಡ್ ಮಾಡುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಇಲ್ಲೋರ್ವ ಯುವಕ ಸಿಂಗಲ್ ವೀಲ್ ಮೂಲಕ ಸೈಕಲ್ ಓಡಿಸುತ್ತಾ ವಿಶ್ವ ದಾಖಲೆ ಮಾಡಲು ಮುಂದಾಗಿದ್ದಾನೆ. ಕೇರಳ ಮೂಲದ ಯುವಕರ ತಂಡ ಸೇ ನೋ ಡ್ರಗ್ಸ್ ಸಂದೇಶದೊಂದಿಗೆ ಜಾಗೃತಿ ಮೂಡಿಸುತ್ತಾ ಸೈಕಲ್ ಮೂಲಕ ದೇಶ ಪರ್ಯಟನೆಗೆ ಮುಂದಾಗಿದೆ. ಈ ಯುವಕರ ಸಾಹಸ ಎಲ್ಲರ ಗಮನ ಸೆಳೆಯುತ್ತಿದೆ.
ಆಧುನಿಕತೆ ಬೆಳೆಯುತ್ತಿದ್ದಂತೆ ಇಂದಿನ ಯುವಕರಲ್ಲಿ ಸಾಹಸ ಚಟುವಟಿಕೆಗಳು ಕಡಿಮೆಯಾಗುತ್ತಿದೆ. ಕೇವಲ ಮೊಬೈಲ್‌ನಲ್ಲಿ ಕಾಲ ಹರಣ ಮಾಡೋದು ಎಲ್ಲೆಡೆ ಕಂಡು ಬರುತ್ತಿದೆ. ಆದರೆ ಕೇರಳ ಮೂಲದ ಮೂವರು ಯುವಕರ ತಂಡ ದೇಶ ಪರ್ಯಟನೆಗೆ ಮುಂದಾಗಿದೆ. ಅದು ಸಾಹಸದ ಮೂಲಕ. ಕೇರಳದ ಕಣ್ಣೂರಿನ ಸನಿತ್ ಮತ್ತು ಅವರ ಸ್ನೇಹಿತರಾದ ಅಭಿಷೇಕ್ ಮತ್ತು ತಾಹೀರ್ ಸೈಕಲ್‌ನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪರ್ಯಟನೆ ಮಾಡುತ್ತಿದ್ದಾರೆ.
ಆದರೆ ಸಿವಿಲ್ ಇಂಜಿನಿಯರ್ ಆಗಿರುವ ತಂಡದ ಮುಖ್ಯಸ್ಥ ಸನಿತ್‌ನದ್ದು ವಿಶೇಷ ರೈಡ್. ಸೈಕಲ್‌ನ ಹಿಂಬದಿಯ ಒಂದೇ ಗಾಲಿಯೊಂದರಲ್ಲೇ ರೈಡ್ ಮಾಡುತ್ತಿದ್ದಾರೆ. ಡಿಸೆಂಬರ್ 15ರಂದು ಕನ್ಯಾಕುಮಾರಿಯಿಂದ ಹೊರಟ ಇವರು ಈಗ ಕಾರವಾರ ತಲುಪಿ ಮುಂದೆ ಗೋವಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈವರೆಗೆ 2600 ಕಿಲೋಮೀಟರ್ ಸೈಕಲ್ ರೈಡ್ ಮಾಡಿದ್ದು, ಸೇ ನೋ ಟು ಡ್ರಗ್ಸ್ ಸಂದೇಶದೊಂದಿಗೆ ಹೊರಟ ಇವರು ದಾರಿಮಧ್ಯೆದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಇನ್ನು ಪ್ರತೀ ದಿನ 50 ರಿಂದ 60 ಕಿಲೋಮೀಟರ್ ದೂರ ಈ ರೀತಿಯಾಗಿ ಸನಿತ್ ಒಂದೇ ಚಕ್ರದಲ್ಲಿ ಸೈಕಲ್ ಓಡಿಸುತ್ತಾರೆ. ಇವರಿಗೆ ಅಭಿಷೇಕ್ ಮತ್ತು ತಾಹಿರ್ ಎಂಬವರು ಜೊತೆಯಾಗಿದ್ದಾರೆ. ತಾಹೀರ್ ಎಂಬಾತನಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಮೊನ್ನೆಯಷ್ಟೆ ವಾಪಸ್ ಹೋಗಿದ್ದಾರೆ. ಸನೀತ್ ಈ ರೀತಿಯಾಗಿ ಕನ್ಯಾಕುಮಾರಿಯಿಂದ ಕಾರವಾರದವರೆಗೂ ಬಂದು ತಲುಪಿದ್ದಾರೆ. ಇವರ ಈ ಸೈಕಲ್ ಸಾಹಸ ಕಂಡು ಕಾರವಾರ ಜನತೆ ಮಾತನಾಡಿಸಿ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ : ವಿಂಟೇಜ್ ಕಾರ್, ಬೈಕ್ ರ‍್ಯಾಲಿಯ ಮೂಲಕ ಮತದಾನ ಜಾಗೃತಿ - LOK SABHA ELECTION 2024