ಬೆಂಗಳೂರು: ಕ್ಯಾಶ್ ಮ್ಯಾನೇಜ್‌ಮೆಂಟ್ ಕಂಪನಿ ಸಿಬ್ಬಂದಿಯೊಬ್ಬ 2.57 ಕೋಟಿ ರೂಪಾಯಿ ಸಮೇತ ಪರಾರಿಯಾಗಿರುವ ಘಟನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾರ್ಚ್ 25ರಂದು ಈ ಘಟನೆ ನಡೆದಿದೆ. ಆರೋಪಿ ಸುಮನ್ ಎಂಬಾತನ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ನಡೆದಿದ್ದೇನು?: ಸುಮನ್‌ಗೆ ಹಣ ಸಂಗ್ರಹಿಸಿಕೊಂಡು ಬರುವಂತೆ ಕಂಪನಿ ತಿಳಿಸಿತ್ತು. ಸೆಕ್ಯುರಿಟಿ ಗಾರ್ಡ್ ಭೋಲನಾಥ್ ಹಾಗೂ ವಾಹನ ಚಾಲಕ ಫಜಲ್ ಹುಸೇನ್ ಎಂಬವರು ಈತನ ಜತೆಗಿದ್ದರು. ಸುಮನ್ ಮಾರ್ಗಮಧ್ಯೆ ಎರಡು ಕಡೆಗಳಲ್ಲಿ ನಿಗದಿತ ಸ್ಥಳಗಳಲ್ಲಿ ಹಣ ಸಂದಾಯ ಮಾಡಿದ್ದಾನೆ. ಬಳಿಕ ಉಳಿದ 2.57 ಕೋಟಿ ರೂ. ಹಣವನ್ನು ಸೇಂಟ್ ಮಾರ್ಕ್ ರಸ್ತೆಯ ಫೆಡರಲ್ ಬ್ಯಾಂಕ್‌ಗೆ ಸಂದಾಯ ಮಾಡಬೇಕಿದೆ ಎಂದು ವಾಹನ ನಿಲ್ಲಿಸಿದ್ದ. ತನ್ನೊಂದಿಗೆ ಹಣ ತೆಗೆದುಕೊಂಡು ಹೋಗಿದ್ದ ಸುಮನ್, ಸ್ವಲ್ಪ ಸಮಯದ ನಂತರ ಗಾರ್ಡ್ ಬೋಲನಾಥ್ಗೆ ಕರೆ ಮಾಡಿ, "ನನ್ನ ಕುಟುಂಬ ಸದಸ್ಯರೊಬ್ಬರು ಸಾವಿಗೀಡಾಗಿದ್ದಾರೆ. ನಾನು ಬ್ಯಾಂಕ್‌ಗೆ ಸಂದಾಯ ಮಾಡಬೇಕಿರುವ ಹಣ ಸಂದಾಯ ಮಾಡಿ ಇಲ್ಲಿಂದಲೇ ಮನೆಗೆ ತೆರಳುತ್ತಿದ್ದೇನೆ. ಈ ಬಗ್ಗೆ ಕಂಪನಿಗೆ ಕರೆಮಾಡಿ ಮಾಹಿತಿ ನೀಡಿದ್ದೇನೆ. ನೀವು ಕಂಪನಿಗೆ ವಾಹನ ತೆಗೆದುಕೊಂಡು ತೆರಳಿ" ಎಂದಿದ್ದ. ಅದರಂತೆ ಸೆಕ್ಯುರಿಟಿ ಗಾರ್ಡ್ ಹಾಗೂ ಚಾಲಕ ವಾಪಸ್ ತೆರಳಿದಾಗ, ಸುಮನ್ ವಂಚಿಸಿ ಹಣದ ಸಮೇತ ಪರಾರಿಯಾಗಿರುವುದು ಬಯಲಾಗಿದೆ.
ತಕ್ಷಣ ಕ್ಯಾಶ್ ಮ್ಯಾನೇಜ್‌ಮೆಂಟ್ ಕಂಪನಿ ಸಿಬ್ಬಂದಿ ಎಂ.ಮಲ್ಲಿಕಾರ್ಜುನ್ ಎಂಬವರು ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪ್ರೇಯಸಿ ಕತ್ತು ಸೀಳಿ ಹತ್ಯೆ ಮಾಡಿದ ಪ್ರಿಯಕರ - Lover Murder