ಬೆಂಗಳೂರು: 2024-25ನೇ ಸಾಲಿನ ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಲೋಕಸಭೆ ಚುನಾವಣಾ ನೀತಿ ಸಂಹಿತೆ ಅಡ್ಡಗಾಲಾಗಿದೆ. ಈಗಾಗಲೇ ಬಜೆಟ್ ವರ್ಷ ಆರಂಭವಾಗಿದ್ದು, ಬಜೆಟ್ ಘೋಷಣೆಗಳ ಸಂಬಂಧ ಒಂದೂವರೆ ತಿಂಗಳು ಕಳೆದರೂ ಈವರೆಗೆ ಯಾವುದೇ ಸರ್ಕಾರಿ ಆದೇಶ ಹೊರಡಿಸಲು ಸಾಧ್ಯವಾಗಿಲ್ಲ. ಬಜೆಟ್ ಘೋಷಣೆಗಳ ಅನುಷ್ಠಾನದ ಸ್ಥಿತಿಗತಿ ಏನಿದೆ ಎಂಬ ವರದಿ ಇಲ್ಲಿದೆ.
ಸಿಎಂ ಸಿದ್ದರಾಮಯ್ಯ ಫೆಬ್ರವರಿ 16ರಂದು 2024-25 ಸಾಲಿನ ಸುಮಾರು 3.71 ಲಕ್ಷ ಕೋಟಿ ರೂ. ಗಾತ್ರದ ರಾಜ್ಯ ಬಜೆಟ್ಮಂಡಿಸಿದ್ದರು. ಏಪ್ರಿಲ್ಗೆ ಬಜೆಟ್ ವರ್ಷ ಆರಂಭವಾಗಿದ್ದು, ಈಗಾಗಲೇ ಒಂದೂವರೆ ತಿಂಗಳು ಕಳೆದಿದೆ. ಆದರೆ, ಈ ಬಾರಿ ಲೋಕಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಬ್ರೇಕ್ ಬಿದ್ದಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಬಜೆಟ್ ಘೋಷಣೆಗಳ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಮಾರ್ಚ್ 16ರಿಂದ ಜೂನ್ 4ರವರೆಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಮಧ್ಯೆ ಪರಿಷತ್ ಚುನಾವಣೆಯ ನೀತಿ ಸಂಹಿತೆಯೂ ಜಾರಿಗೆ ಬಂದಿದೆ.
ಕಳೆದ ಒಂದೂವರೆ ತಿಂಗಳಿಂದ ರಾಜ್ಯ ಸರ್ಕಾರಕ್ಕೆ ಬಜೆಟ್ ಘೋಷಣೆ ಮೇಲೆ ಸರ್ಕಾರಿ ಆದೇಶ ಹೊರಡಿಸಲು ಸಾಧ್ಯವಾಗಿಲ್ಲ. ಬಜೆಟ್ ಘೋಷಣೆಗಳ ಪೈಕಿ ಹಲವುಗಳ ಅನುಷ್ಠಾನಕ್ಕಾಗಿ ಸರ್ಕಾರಿ ಆದೇಶ ಹೊರಡಿಸಬೇಕು. ಸರ್ಕಾರಿ ಆದೇಶ ಹೊರಡಿಸುವ ಮುನ್ನ ಆ ಪ್ರಸ್ತಾಪಿತ ಯೋಜನೆಯ ಕಡತಗಳನ್ನು ಆರ್ಥಿಕ ಇಲಾಖೆಯ ಸಹಮತಿಗೆ ಕಳುಹಿಸಬೇಕು. ಆರ್ಥಿಕ ಇಲಾಖೆ ಅನುಮತಿ ನೀಡಿದ ಬಳಿಕ ಸರ್ಕಾರಿ ಆದೇಶ ಹೊರಡಿಸಲಾಗುತ್ತದೆ. ಈಗಾಗಲೇ ರಾಜ್ಯ ಸರ್ಕಾರ ಬಜೆಟ್ ಘೋಷಣೆಗಳ ಅನುಷ್ಠಾನ ಸಂಬಂಧ ಕರಡು ಆದೇಶವನ್ನು ಸಿದ್ಧಪಡಿಸುತ್ತಿದೆ. ನೀತಿ ಸಂಹಿತೆ ಮುಕ್ತಾಯವಾಗುತ್ತಿದ್ದ ಹಾಗೇ ಸಿಎಂ ಸಿದ್ದರಾಮಯ್ಯ ಅಂಕಿತದೊಂದಿಗೆ ಅಂತಿಮ ಆದೇಶ ಹೊರಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಜೂನ್ ಅಂತ್ಯದೊಳಗೆ ಎಲ್ಲಾ ಆದೇಶವನ್ನು ಹೊರಡಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.
ಬಜೆಟ್ ಘೋಷಣೆಗಳ ಒಟ್ಟು ಅನುಷ್ಠಾನದ ಸ್ಥಿತಿಗತಿ: ಸಿದ್ದರಾಮಯ್ಯ ಸರ್ಕಾರ 2024-25ನೇ ಸಾಲಿನ ತನ್ನ ಬಜೆಟ್ನಲ್ಲಿ 45 ವಿವಿಧ ಇಲಾಖೆಗಳಿಗೆ ಸಂಬಂಧಿಸಿ ಒಟ್ಟು 561 ಘೋಷಣೆಗಳನ್ನು ಮಾಡಿದೆ. ಈ ಘೋಷಣೆಗಳ ಪೈಕಿ ಆರ್ಥಿಕ ಇಲಾಖೆ ಸಹಮತಿಗಾಗಿ 184 ಕಡತಗಳನ್ನು ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಜೆಟ್ ಘೋಷಣೆಗಳ ಅನುಷ್ಠಾನ ಸಂಬಂಧ 403 ಕಂಡಿಕೆಗಳಿಗೆ ಸರ್ಕಾರಿ ಆದೇಶ ಹೊರಡಿಸಬೇಕಾಗಿದೆ. ಒಟ್ಟು 219 ಬಜೆಟ್ ಘೋಷಣೆಗಳ ಪ್ರಸ್ತಾವನೆಗಳನ್ನು ಸಲ್ಲಿಸಲು ಬಾಕಿ ಇದೆ ಎಂದು ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಲಾಖಾವಾರು ಘೋಷಣೆಗಳ ಸ್ಥಿತಿಗತಿ: ನಗರಾಭಿವೃದ್ಧಿ ಇಲಾಖೆಯಲ್ಲಿ 31 ಬಜೆಟ್ ಘೋಷಣೆಗಳನ್ನು ಮಾಡಲಾಗಿದೆ. ಈ ಪೈಕಿ 19 ಕಂಡಿಕೆಗಳಿಗೆ ಸರ್ಕಾರಿ ಆದೇಶ ಹೊರಡಿಸಬೇಕಾಗಿದೆ. ಆರ್ಥಿಕ ಇಲಾಖೆ ಸಹಮತಿಗಾಗಿ 1 ಕಡತವನ್ನು ಸಲ್ಲಿಸಲಾಗಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ 21 ಬಜೆಟ್ ಘೋಷಣೆಗಳನ್ನು ಮಾಡಲಾಗಿದೆ. ಈ ಪೈಕಿ 18 ಕಂಡಿಕೆಗಳಿಗೆ ಸರ್ಕಾರಿ ಆದೇಶ ಹೊರಡಿಸಬೇಕಾಗಿದೆ. ಇದರಲ್ಲಿ 8 ಕಡತಗಳನ್ನು ಆರ್ಥಿಕ ಇಲಾಖೆ ಸಹಮತಿಗೆ ಸಲ್ಲಿಸಲಾಗಿದೆ.
ಜಲಸಂಪನ್ಮೂಲ ಇಲಾಖೆಯಲ್ಲಿ 18 ಬಜೆಟ್ ಘೋಷಣೆಗಳನ್ನು ಮಾಡಲಾಗಿದೆ. ಈ ಪೈಕಿ 16 ಕಂಡಿಕೆಗಳಿಗೆ ಸರ್ಕಾರಿ ಆದೇಶ ಹೊರಡಿಸಬೇಕಾಗಿದೆ. ಈವರೆಗೆ ಯಾವುದೇ ಕಡತವನ್ನು ಆರ್ಥಿಕ ಇಲಾಖೆ ಸಹಮತಿಗೆ ಸಲ್ಲಿಸಿಲ್ಲ. ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ 22 ಬಜೆಟ್ ಘೋಷಣೆ ಮಾಡಲಾಗಿದ್ದು, ಈ ಪೈಕಿ 19 ಕಂಡಿಕೆಗಳಿಗೆ ಸರ್ಕಾರಿ ಆದೇಶ ಹೊರಡಿಸಬೇಕಾಗಿದೆ. ಇದರಲ್ಲಿ ಈಗಾಗಲೇ 8 ಕಡತಗಳನ್ನು ಆರ್ಥಿಕ ಇಲಾಖೆಯ ಸಹಮತಕ್ಕೆ ಸಲ್ಲಿಸಲಾಗಿದೆ.
ಆರೋಗ್ಯ ಇಲಾಖೆಯಲ್ಲಿ 19 ಬಜೆಟ್ ಘೋಷಣೆಗಳನ್ನು ಮಾಡಲಾಗಿದೆ. ಈ ಪೈಕಿ 17 ಕಂಡಿಕೆಗಳಿಗೆ ಸರ್ಕಾರಿ ಆದೇಶ ಹೊರಡಿಸಬೇಕಾಗಿದೆ. ಇದರಲ್ಲಿ ಈಗಾಗಲೇ 8 ಕಡತಗಳನ್ನು ಆರ್ಥಿಕ ಇಲಾಖೆ ಸಹಮತಿಗಾಗಿ ಸಲ್ಲಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 23 ಬಜೆಟ್ ಘೋಷಣೆ ಮಾಡಲಾಗಿದೆ. ಈ ಪೈಕಿ 17 ಕಂಡಿಕೆಗಳಿಗೆ ಸರ್ಕಾರಿ ಆದೇಶ ಹೊರಡಿಸಬೇಕಾಗಿದೆ. 10 ಕಡತಗಳನ್ನು ಆರ್ಥಿಕ ಇಲಾಖೆ ಸಹಮತಿಗೆ ಸಲ್ಲಿಸಲಾಗಿದೆ.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ 18 ಬಜೆಟ್ ಘೋಷಣೆ ಮಾಡಲಾಗಿದ್ದು, ಈ ಪೈಕಿ 17 ಕಂಡಿಕೆಗಳಿಗೆ ಸರ್ಕಾರಿ ಆದೇಶ ಹೊರಡಿಸಬೇಕು. ಇಲ್ಲಿಯವರೆಗೆ 11 ಕಡತಗಳನ್ನು ಆರ್ಥಿಕ ಇಲಾಖೆಯ ಸಹಮತಿಗೆ ಕಳುಹಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ 18 ಬಜೆಟ್ ಘೋಷಣೆ ಮಾಡಲಾಗಿದೆ. ಈ ಪೈಕಿ 15 ಕಂಡಿಕೆಗಳಿಗೆ ಸರ್ಕಾರಿ ಆದೇಶ ಹೊರಡಿಸಬೇಕಾಗಿದೆ. ಇದರಲ್ಲಿ 10 ಕಡತಗಳನ್ನು ಆರ್ಥಿಕ ಇಲಾಖೆಯ ಅನುಮತಿಗೆ ಸಲ್ಲಿಸಲಾಗಿದೆ.
ಕೃಷಿ ಇಲಾಖೆಯಲ್ಲಿ 20 ಬಜೆಟ್ ಘೋಷಣೆ ಮಾಡಲಾಗಿದೆ. ಈ ಪೈಕಿ 19 ಕಂಡಿಕೆಗಳಿಗೆ ಸರ್ಕಾರಿ ಆದೇಶ ಹೊರಡಿಸಬೇಕಾಗಿದೆ. ಇದರಲ್ಲಿ 16 ಕಡತಗಳನ್ನು ಆರ್ಥಿಕ ಇಲಾಖೆ ಅನುಮತಿಗೆ ಸಲ್ಲಿಸಲಾಗಿದೆ. ಪಶುಸಂಗೋಪನೆ ಇಲಾಖೆಯಲ್ಲಿ 13 ಬಜೆಟ್ ಘೋಷಣೆ ಮಾಡಲಾಗಿದ್ದು, 11 ಕಂಡಿಕೆಗಳಿಗೆ ಸರ್ಕಾರಿ ಆದೇಶ ಹೊರಡಿಸಬೇಕಾಗಿದೆ. ಈ ಪೈಕಿ 10 ಕಡತಗಳನ್ನು ಆರ್ಥಿಕ ಇಲಾಖೆ ಅನುಮತಿಗೆ ಸಲ್ಲಿಸಲಾಗಿದೆ.
ಒಟ್ಟು 13 ಇಲಾಖೆಗಳ ಬಜೆಟ್ ಘೋಷಣೆಗಳ ಪೈಕಿ ಈವರೆಗೆ ಯಾವುದೇ ಕಡತಗಳನ್ನು ಆರ್ಥಿಕ ಇಲಾಖೆಯ ಸಹಮತಿಗೆ ಸಲ್ಲಿಸಲಾಗಿಲ್ಲ. 5 ಇಲಾಖೆಗಳ ಬಜೆಟ್ ಘೋಷಣೆಗಳ ಪೈಕಿ ಈವರೆಗೆ ತಲಾ 1 ಕಡತವನ್ನು ಮಾತ್ರ ಆರ್ಥಿಕ ಇಲಾಖೆ ಸಹಮತಿಗೆ ಸಲ್ಲಿಸಲಾಗಿದೆ. ಉಳಿದ ಇಲಾಖೆಗಳ ಘೋಷಣೆಗಳ ಪೈಕಿ ಸುಮಾರು 2-5ರಂತೆ ಕಡತಗಳನ್ನು ಆರ್ಥಿಕ ಇಲಾಖೆ ಸಹಮತಿಗೆ ಸಲ್ಲಿಸಲಾಗಿದೆ.
ಇಲಾಖಾವಾರು ಹಣಕಾಸು ಪ್ರಗತಿ 8.42%: 2024-25ನೇ ಬಜೆಟ್ ಸಾಲಿನಲ್ಲಿ ಕೆಡಿಪಿ ವರದಿಯಂತೆ ಮೊದಲ ಮಾಸಿಕ ಏಪ್ರಿಲ್ ನಲ್ಲಿ ಇಲಾಖಾವಾರು ಒಟ್ಟು 8.42% ಪ್ರಗತಿ ಕಂಡಿದೆ. ಒಟ್ಟು ಇಲಾಖೆಗಳ ಹಣಕಾಸು ಪ್ರಗತಿಯನ್ನು ಅವಲೋಕಿಸಿದರೆ ಹಂಚಿಕೆಯಾದ 3,12,217 ಅನುದಾನ ಪೈಕಿ ಏಪ್ರಿಲ್ ತಿಂಗಳಲ್ಲಿ 47,076 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. 26,274 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದರಂತೆ ಒಟ್ಟು ಹಂಚಿಕೆಯಾದ ಅನುದಾನ ಪೈಕಿ 8.42% ಪ್ರಗತಿ ಕಂಡಿದೆ.
ಇದನ್ನೂ ಓದಿ: ಆರ್ಥಿಕ ವರ್ಷದ ಕೊನೆಯಲ್ಲೂ ಪ್ರಗತಿ ಕಾಣದ ವಿಶೇಷ ಅಭಿವೃದ್ಧಿ ಯೋಜನೆ, ಬಾಹ್ಯಾನುದಾನ ಯೋಜನೆಗಳು