ಚಿಕ್ಕೋಡಿ/ಬೆಳಗಾವಿ: ಚಿಕ್ಕೋಡಿಯಲ್ಲಿ ಕೃಷ್ಣಾ ನದಿ ಅಬ್ಬರಿಸುತ್ತಿದೆ. ನದಿ ಪಾತ್ರ ಬಿಟ್ಟು ಸುಮಾರು ಅರ್ಧ ಕಿಲೋ ಮೀಟರ್ ವ್ಯಾಪ್ತಿಯ ಮನೆ, ಕೃಷಿ ಜಮೀನುಗಳು ಜಲಾವೃತವಾಗಿವೆ. ಪ್ರವಾಹಪೀಡಿತರನ್ನು ಕಾಳಜಿ ಕೇಂದ್ರಗಳು ಹಾಗೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಕಳೆದೊಂದು ವಾರದಿಂದ ಕೃಷಿ ಜಮೀನುಗಳಿಗೆ ನದಿ ನೀರು ನುಗ್ಗಿ ಉದ್ದು, ತೊಗರಿ, ಕಬ್ಬು, ಈರುಳ್ಳಿ ಸೇರಿದಂತೆ ಹಲವು ಬೆಳೆಗಳು ಕೊಳೆಯಲಾರಂಭಿಸಿವೆ. ದಿನ ದಿನಕ್ಕೆ ನೀರಿನ ಮಟ್ಟ ಹೆಚ್ಚಾಗುತ್ತಿದೆ.
ನದಿಯ ಎರಡೂ ಬದಿಗಳಲ್ಲಿ ಕಪ್ಪು ಮಣ್ಣಿನಿಂದ ಕೂಡಿದ ಜಮೀನುಗಳಿವೆ. ಈ ಭಾಗದಲ್ಲಿ ಹೇರಳವಾಗಿ ಕಬ್ಬು ಬೆಳೆಯುತ್ತಾರೆ. ಕಳೆದ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿತ್ತು. ಆಗ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು. ಜೂನ್ ಮೊದಲನೇ ವಾರದಲ್ಲಿ ನದಿಯಲ್ಲಿ ನೀರು ಬರುತ್ತಿದ್ದಂತೆ ರೈತರು ಸಂತೋಷ ವ್ಯಕ್ತಪಡಿಸಿ ನದಿಗೆ ಪೂಜೆ ಸಲ್ಲಿಸಿ ಸ್ವಾಗತಿಸಿದ್ದರು.
ಆದರೆ, ಇದೀಗ ರೈತ ನದಿಯ ರೌದ್ರಾವತಾರಕ್ಕೆ ಬೆಚ್ಚಿಬಿದ್ದಿದ್ದಾನೆ. ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರೈತ ಭೂಪಾಲ್ ಹಳಿಂಗಳಿ ಎಂಬವರು ಮಾತನಾಡಿ, ''ಕೃಷ್ಣಾ ನದಿಯಿಂದ ಉತ್ತಮ ಜೀವನ ಕಟ್ಟಿಕೊಳ್ಳಬೇಕೆಂಬ ರೈತರಿಗೆ ಪ್ರತಿವರ್ಷ ಒಂದಿಲ್ಲೊಂದು ಪೆಟ್ಟು ಬೀಳುತ್ತಿದೆ. ಇದರಿಂದ ರೈತರ ಜೀವನ ಕಷ್ಟಕರವಾಗಿದೆ. ಕಳೆದ ಬಾರಿ ನದಿಯಲ್ಲಿ ನೀರು ಬತ್ತಿ ಹೋಗಿತ್ತು. ಈ ಬಾರಿ ಪ್ರವಾಹ ಎದುರಾಗಿದೆ. ಕೃಷ್ಣಾ ನದಿ ನಂಬಿಕೊಂಡೇ ನಾವು ಜೀವನ ಸಾಗಿಸುವವರು. ನದಿಯಿಂದ ನಮಗೆ ಪ್ರತಿವರ್ಷ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಸರ್ಕಾರಗಳು ಪ್ರತಿ ಎಕರೆಗೆ 10 ಸಾವಿರ ರೂಪಾಯಿಯಂತೆ ಪರಿಹಾರ ನೀಡಿ ಕೈತೊಳೆದುಕೊಂಡು ಸುಮ್ಮನಾಗುತ್ತವೆ. ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಿ ಶಾಶ್ವತ ನೆರವು ನೀಡಬೇಕು" ಎಂದು ಆಗ್ರಹಿಸಿದರು.
ಮಲಪ್ರಭೆ ಆರ್ಭಟ - ಹೊಲಗಳಿಗೆ ನುಗ್ಗಿದ ನೀರು: ಇನ್ನೊಂದೆಡೆ, ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಮದುರ್ಗ ತಾಲೂಕಿನ ಸುರೇಬಾನ, ಅವರಾದಿ, ಮುದುಕವಿ, ಚಿಕ್ಕತಡಸಿ ಗ್ರಾಮದ ರೈತರ ನೂರಾರು ಎಕರೆ ಜಮೀನಿಗಳಿಗೆ ನೀರು ನುಗ್ಗಿದೆ. ಗೋವಿನಜೋಳ, ಕಬ್ಬು, ಈರುಳ್ಳಿ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಜಲಾವೃತವಾಗಿದೆ. ನದಿ ಪಾತ್ರದ ರೈತರು ಬೆಳೆ ಹಾನಿ ಭೀತಿ ಎದುರಿಸುತ್ತಿದ್ದಾರೆ. ತಾಲೂಕಿನಲ್ಲಿ ಅಷ್ಟಾಗಿ ಮಳೆಯಾಗದಿದ್ದರೂ ಪ್ರವಾಹ ಸ್ಥಿತಿ ಉದ್ಭವಿಸಿದೆ.
ಜಲಾಶಯದ ಅಧಿಕಾರಿಗಳ ಯಡವಟ್ಟಿನಿಂದ ಅವೈಜ್ಞಾನಿಕವಾಗಿ ನೀರು ಬಿಟ್ಟಿದ್ದರಿಂದ ರೈತರ ಲಕ್ಷಾಂತರ ರೂ. ಬೆಳೆ ಹಾನಿಯಾಗಿದೆ. ಏಕಾಏಕಿ ನೀರು ಬಿಟ್ಟಿದ್ದು, ನದಿಯಿಂದ ಸುಮಾರು 2 ಕಿ.ಮೀ. ಅಂತರದಲ್ಲಿರುವ ಹೊಲಗಳಿಗೆ ನೀರು ನುಗ್ಗಿದೆ. ಯಾವೊಬ್ಬ ಅಧಿಕಾರಿ ಮತ್ತು ಜನಪ್ರತಿನಿಧಿಗಳೂ ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಇಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮಲಪ್ರಭಾ ನದಿಯ ಮುನವಳ್ಳಿ ಹಳೆ ಸೇತುವೆ ಮತ್ತು ಬೆನ್ನೂರು ಸೇತುವೆ ಜಲಾವೃತವಾಗಿವೆ. ಬೆನ್ನೂರು ಸೇತುವೆ ಜಲಾವೃತ್ತ ಆಗಿದ್ದರಿಂದ 15ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಸಾಂಸ್ಕೃತಿಕ ಗ್ರಾಮ ಶೇಗುಣಸಿಗೆ ನುಗ್ಗಿದ ನೀರು: ಕೃಷ್ಣ ನದಿಯಲ್ಲಿ ನೀರಿನ ಮಟ್ಟ ಏರಿಕೆಯಿಂದ ತೀರಪ್ರದೇಶದ ಗ್ರಾಮದಲ್ಲಿ ಆತಂಕ ಹೆಚ್ಚಾಗುತ್ತಿದೆ. ನದಿ ದಂಡೆಯ ಸಾಂಸ್ಕೃತಿಕ ಗ್ರಾಮ ಎಂದೇ ಖ್ಯಾತವಾದ ಶೇಗುಣಸಿ ಗ್ರಾಮಕ್ಕೆ ಕಳೆದ ರಾತ್ರಿ ನದಿ ನೀರು ನುಗ್ಗಿದೆ. ದೃಶ್ಯವು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಸತತ ಮಳೆಯಿಂದ ಜಲಾಶಯಗಳ ನೀರಿನ ಮಟ್ಟ ಏರಿಕೆ: ತುಂಬಿದ ಭದ್ರಾ ಅಣೆಕಟ್ಟೆ ಸುತ್ತ 30 ದಿನಗಳ ನಿಷೇಧಾಜ್ಞೆ - Dams Water Level