ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದೆ. ಜಿಲ್ಲೆಯ ಸಪ್ತನದಿಗಳು ತುಂಬಿ ಹರಿಯುತ್ತಿವೆ. ಬೈಲಹೊಂಗಲ ತಾಲೂಕಿನ ತಿಗಡಿ ಜಲಾಶಯದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಈ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೆಳಗಾವಿ ನಗರ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಒಂದೆಡೆ ಪ್ರವಾಹದ ಭೀತಿ ಉಂಟಾಗಿದ್ದರೆ, ಮತ್ತೊಂದೆಡೆ ಮೊಸಳೆಗಳ ಭೀತಿ ಆವರಿಸಿದೆ. ತಿಗಡಿ ಜಲಾಶಯದಲ್ಲಿ ಮೊಸಳೆ ಕಾಣಿಸಿಕೊಂಡಿದ್ದರಿಂದ ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಜಲಾಶಯದ ನಡುವಿನ ಹುಲ್ಲಿನ ಗರಿಕೆಯ ಮೇಲೆ ಮೊಸಳೆ ಪತ್ತೆಯಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕೆನಾಲ್ ಬಳಿ ನೂರಾರು ಜನ ಜಮಾಯಿಸಿದ್ದರು. ದೂರದಲ್ಲೇ ನಿಂತು ಮೊಸಳೆ ಇರುವುದನ್ನು ನೋಡಿದರು.
ಮೊಸಳೆ ಕಂಡುಬಂದಿರುವ ದೃಶ್ಯವನ್ನು ಸ್ಥಳೀಯ ಯುವಕ ಶಾನೂರ ಎಂಬವರು ತಮ್ಮ ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಮೊಸಳೆ ಹಿಡಿದು ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ನವೀಲುತೀರ್ಥ ಡ್ಯಾಂನಿಂದ ನೀರು ಬಿಡುಗಡೆ: ಒಂದೆಡೆ ಮೊಸಳೆ ಮತ್ತೊಂದೆಡೆ ಪ್ರವಾಹ ಆತಂಕ - Navilutheertha Reservoir