ಕಲಬುರಗಿ: ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಆಕಸ್ಮಿಕವಾಗಿ ತುಂಡಾಗಿದ್ದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ನಮ್ಮ ಮೇಲೆ ಟೀಕಾಪ್ರಹಾರ ಮಾಡಿದರು. ನಾವು ನಿದ್ದೆ ಮಾಡದೆ ಕೆಲಸ ಮಾಡಿ ತೋರಿಸಿದ್ದೇವೆ. ಹಗಲು- ರಾತ್ರಿ ಕೆಲಸ ಮಾಡಿ ಜಲಗಂಡಾಂತರ ಆಗುವುದನ್ನು ತಪ್ಪಿಸಿದ್ದೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಕಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, "ಡ್ಯಾಂ ಗೇಟ್ ದುರಸ್ತಿ ಕಾರ್ಯದಲ್ಲಿ ನಮಗೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದ, ಸಣ್ಣ ಕಾರ್ಮಿಕನಿಂದ ಹಿಡಿದು ಇಂಜನಿಯರ್ಗಳಿಗೆ ಧನ್ಯವಾದ ಹೇಳುತ್ತೇನೆ. ಸರ್ಕಾರದಿಂದ ಅವರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಗುವುದು" ಎಂದು ತಿಳಿಸಿದರು.
"ಕಲಬುರಗಿಯನ್ನು ಹೆಲ್ತ್ ಹಬ್ ಮಾಡುವ ನಿರ್ಧಾರ ಮಾಡಿದ್ದೇವೆ. ಸೆ.17 ರಂದು 371 ಬೆಡ್‌ನ ನೂತನ ಜಯದೇವ ಆಸ್ಪತ್ರೆ ಉದ್ಘಾಟನೆ ಮಾಡುತ್ತೇವೆ. ಮುಡಾ ಕೇಸ್ನಲ್ಲಿ ಸತ್ಯಕ್ಕೆ ಜಯ ಸಿಗುತ್ತದೆ. ನಮ್ಮ ಸಿಎಂ ಸಿದ್ದರಾಮಯ್ಯ ಯಾವ ತಪ್ಪು ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಹೆದರಲ್ಲ" ಎಂದರು.
ದಲಿತ ರಾಜ್ಯಪಾಲ ಎನ್ನುವ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, "ಗೆಹ್ಲೋಟ್ ಅವರನ್ನು ಆ ಹುದ್ದೆಯಲ್ಲಿ ಕೂರಿಸಿದ್ದು ಸಂವಿಧಾನ ಹೊರತಾಗಿ ಜಾತಿಯಲ್ಲ. ಸಿಎಂ ಸಿದ್ದರಾಮಯ್ಯರಿಗೆ ಖರ್ಗೆಯವರಿಂದ ಹಿಡಿದು ಎಲ್ಲರ ಬೆಂಬಲ ಇದೆ. ರಾಜ್ಯದಲ್ಲಿ ಹತ್ತು ವರ್ಷ ನಮ್ಮದೇ ಸರ್ಕಾರ ಇರುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿ.ಟಿ.ರವಿ ವಿರುದ್ಧ ಗುಡುಗಿದ ಡಿಸಿಎಂ, "ಕಲಬುರಗಿಯಲ್ಲಿ ನಿರ್ಮಾಣವಾಗಿರುವ ಹೊಸ ಆಸ್ಪತ್ರೆಗೆ ಸಿ ಟಿ ರವಿಯನ್ನು ಸೇರಿಸಲಿ. ದೇಶದ ಅನೇಕ ಕಡೆ ರಾಜ್ಯಪಾಲರ ಹಸ್ತಕ್ಷೇಪ ನಡೆಯುತ್ತಿದೆ. ಅದೆನೆಲ್ಲಾ ನೀವೇ ತೋರಿಸುತ್ತಿದ್ದೀರಿ" ಎಂದರು.
ಸಿಎಂ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, "ಹೋಗಬೇಕಲ್ಲಾ, ಹೈಕಮಾಂಡ್ ಬಳಿ ಎಲ್ಲಾ ಮಾಹಿತಿ ನೀಡಬೇಕು. ಅದಕ್ಕಾಗಿ ಹೋಗ್ತಾರೆ ಅದರಲ್ಲೇನು ವಿಶೇಷ?" ಎಂದು ಕೇಳಿದರು.