ಮೈಸೂರು: ತಾಯಿ, ಗರ್ಭಿಣಿ ಪತ್ನಿ ಹಾಗೂ ತನ್ನ ಇಬ್ಬರು ಮಕ್ಕಳ ಕೊಲೆ ಪ್ರಕರಣದ ಅಪರಾಧಿಗೆ ಮೈಸೂರಿನ 5ನೇ ಅಧಿಕ ಜಿಲ್ಲಾ ಸೆಷನ್ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಣಿಕಂಠ ಸ್ವಾಮಿ ಎಂಬಾತನೆ ಮರಣದಂಡನೆ ಗುರಿಯಾದವ. ಈತ ವಿಶೇಷಚೇತನನಾಗಿದ್ದು, ತನ್ನ ಹೆಂಡತಿಯ ಶೀಲ ಶಂಕಿಸಿ 2021ರ ಏಪ್ರಿಲ್ 28ರಂದು ತನ್ನ ಮನೆಯಲ್ಲೇ ಕೊಲೆ ಮಾಡಿದ್ದ. ಹೆಂಡತಿ ಗಂಗೆ, ತಾಯಿ ಕೆಂಪಾಜ್ಜಮ್ಮ ಹಾಗೂ 4 ವರ್ಷದ ಹಾಗೂ ಒಂದೂವರೆ ವರ್ಷದ ಇಬ್ಬರು ಗಂಡು ಮಕ್ಕಳನ್ನು ಹತ್ಯೆ ಮಾಡಿದ್ದ.
ಕೊಲೆಯಾದ ಪತ್ನಿಯು ಆ ಸಂದರ್ಭದಲ್ಲಿ ತುಂಬು ಗರ್ಭಿಣಿಯಾಗಿದ್ದಳು. ಈ ಎಲ್ಲರನ್ನು ರಾತ್ರಿ ಮಲಗಿದ್ದ ವೇಳೆ ತನ್ನ, ಅಂಗವಿಕಲ ಸಾಧನದಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ಬಳಿಕ ಸರಗೂರು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಸಂಬಂಧ ಪ್ರಕರಣ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಸಾಕ್ಷ್ಯಾಧಾರಗಳನ್ನ ಪರಿಶೀಲಿಸಿದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್, ಮಣಿಕಂಠ ಸ್ವಾಮಿಯು ಕೊಲೆ ಮಾಡಿರುವ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ, ಆರೋಪಿಯನ್ನು ಅಪರಾಧಿಯೆಂದು ತೀರ್ಮಾನಿಸಿ, ಮರಣ ದಂಡನೆ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಅಲ್ಲದೆ, ಮೃತಳ ತಾಯಿ ಹಾಗೂ ಆರೋಪಿಯ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಲು ಪ್ರಕರಣವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಬಿ. ಇ. ಯೋಗೇಶ್ವರ ವಾದ ಮಂಡಿಸಿದ್ದರು.
ಇದನ್ನೂ ಓದಿ: ಸಾರ್ವಜನಿಕ ಉದ್ಯಾನವನಗಳಿಗೆ ಸಾಕು ನಾಯಿಗಳನ್ನು ತಂದು ಗಲೀಜು ಮಾಡುವ ಮಾಲೀಕರಿಗೆ ದಂಡ: ಹೈಕೋರ್ಟ್