ದಾವಣಗೆರೆ: ಅಡವಿಟ್ಟ ಚಿನ್ನಾಭರಣಗಳನ್ನು ಬಿಡಿಸಿಕೊಡಿ ಎಂದು ಕೇಳಿದ ಪತ್ನಿಯನ್ನು ಸೀಮೆ ಎಣ್ಣೆ ಸುರಿದು ಬೆಂಕಿ ಹಾಕಿ ಕೊಲೆ ಮಾಡಿದ ಪ್ರಕರಣದಲ್ಲಿ ಪತಿ, ಅತ್ತೆ ಹಾಗೂ ಮಾವನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 38 ಸಾವಿರ ರೂ. ದಂಡ ವಿಧಿಸಿದೆ.
ಸುಮಾ ಡಿ. ಕೊಲೆಗೀಡಾದ ಪತ್ನಿ, ಗಂಡ ಗಿರಿಧರ್, ಅತ್ತೆ ಲೀಲಾಬಾಯಿ ಹಾಗೂ ಮಾವ ಹಾಲಪ್ಪ ನಾಯ್ಕ ಶಿಕ್ಷೆಗೆ ಒಳಗಾದ ಅಪರಾಧಿಗಳು. 2018ರ ಜನವರಿ 17ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಚಿಕ್ಕಬಸೂರು ತಾಂಡಾದಲ್ಲಿ ಘಟನೆ ನಡೆದಿತ್ತು. ಸುಮಾಳನ್ನು ಐದು ವರ್ಷಗಳ ಹಿಂದೆ ಚಿಕ್ಕಬಸೂರು ಗ್ರಾಮದ ನಿವಾಸಿ ಗಿರಿಧರ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಪೋಷಕರು 06 ತೊಲ ಬಂಗಾರ, ವರದಕ್ಷಿಣೆಯಾಗಿ 40 ಸಾವಿರ ಹಣ ಹಾಗೂ ಒಂದು ಬೈಕ್ ಕೊಟ್ಟಿದ್ದರು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಹಿನ್ನೆಲೆ: ಮದುವೆ ಬಳಿಕ ಪತ್ನಿ ಸುಮಾಳಿಗೆ ಸೇರಿದ 06 ತೊಲ ಬಂಗಾರವನ್ನು ಗಂಡ ಗಿರಿಧರ್ ಬ್ಯಾಂಕಿನಲ್ಲಿ ಅಡವಿಟ್ಟಿದ್ದ. ಆ ಚಿನ್ನಾಭರಣವನ್ನು ಬಿಡಿಸಿಕೊಡುವಂತೆ ಪತಿ ಬಳಿ ಸುಮಾ ಕೇಳಿದ್ದಾಳೆ. ಈ ಸಂಬಂಧ ಜಗಳ ನಡೆದು ಗಿರಿಧರ್, ಲೀಲಾಬಾಯಿ ಹಾಗೂ ಹಾಲಪ್ಪ ಸೇರಿಕೊಂಡು ಆಕೆಗೆ ಹೊಡೆದಿದ್ದಾರೆ. ಈ ವೇಳೆ ಗಿರಿಧರ್ ಮನೆಯಲ್ಲಿದ್ದ ಸೀಮೆಎಣ್ಣೆ ತಂದು ಪತ್ನಿಯ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದ. ಸುಮಾ ತನ್ನನ್ನು ರಕ್ಷಿಸಿಕೊಳ್ಳಲು ನೀರಿನ ಡ್ರಮ್‌ನಲ್ಲಿ ಮುಳುಗಿ ಬೆಂಕಿ ಆರಿಸಿಕೊಂಡಿದ್ದರು. ಆದರೆ, ದೇಹವು ಸುಟ್ಟು ಹೋಗಿತ್ತು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ''ತನ್ನ ಮೇಲೆ ಹಲ್ಲೆ ಮಾಡಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಗಂಡ ಗಿರಿಧರ್, ಅತ್ತೆ ಲೀಲಾಬಾಯಿ ಹಾಗೂ ಮಾವ ಹಾಲಪ್ಪ ನಾಯ್ಕ ವಿರುದ್ಧ ಕಾನೂನು ಜರುಗಿಸುವಂತೆ'' ಅಂದು ಸುಮಾ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಳು. ಬಳಿಕ ಚಿಕಿತ್ಸೆಗೆ ಸ್ಪಂದಿಸದೇ ಮಹಿಳೆ ಮೃತಪಟ್ಟಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹೊನ್ನಾಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ತನಿಖಾಧಿಕಾರಿ ಮಂಜುನಾಥ್ ಗಂಗಲ್ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಿದ್ದರು.
ಈ ಸಂಬಂಧ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಆರ್.ಎನ್. ಪ್ರಕರಣದ ವಿಚಾರಣೆ ನಡೆಸಿದ್ದರು. ಎ1 ಗಿರಿಧರ್, ಎ2 ಹಾಲಪ್ಪ ನಾಯ್ಕ ಹಾಗೂ ಎ3 ಲಲಿತಾಬಾಯಿ ವಿರುದ್ಧ ಆರೋಪ ಸಾಬೀತಾಗಿದ್ದರಿಂದ ಜೀವಾವಧಿ ಶಿಕ್ಷೆ ಮತ್ತು ತಲಾ 38,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸುಮಾ ಪರ ಸರ್ಕಾರಿ ವಕೀಲ ಕೆ.ಜಿ.ಜಯ್ಯಪ್ಪ ವಾದ ಮಂಡಿಸಿದ್ದರು.
ಇದನ್ನೂ ಓದಿ: ಕಲಬುರಗಿ: ಭೀಮಾ ನದಿಯಲ್ಲಿ ಬಾಲಕಿಯರಿಬ್ಬರು ಸಾವು; ಹೃದಯಾಘಾತದಿಂದ ವ್ಯಕ್ತಿ ಮೃತ