ಕಾರವಾರ: ಭ್ರಷ್ಟಾಚಾರ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ, ಶಿರಸಿ ಗ್ರಾಮೀಣ ಬಿಜೆಪಿ ಅಧ್ಯಕ್ಷೆ ಉಷಾ ಹೆಗಡೆ ಅವರಿಗೆ ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಒಂದು ವರ್ಷದ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ವಿಜಯ್ ಕುಮಾರ್ ಈ ತೀರ್ಪು ನೀಡಿದ್ದಾರೆ.
ಪ್ರಕರಣ ಸಂಬಂಧ ಇಬ್ರಾಹಿಂ ನಬೀಸಾಬ್ ಎಂಬವರು ದೂರು ಸಲ್ಲಿಸಿದ್ದರು. 2009ರಿಂದ ಕಾರವಾರ ಲೋಕಾಯುಕ್ತ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿಯ ಕಾರ್ಯಕರ್ತೆ ಎಂದು ಕೆಲಸ ನಿರ್ವಹಿಸುತ್ತಿದ್ದ ಉಷಾ ಹೆಗಡೆ, 2010ರ ಡಿ.31ರಂದು ನಡೆದ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದರು. ಅಲ್ಲದೆ, ಬದನಗೋಡ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದಲೂ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಆದರೆ, ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ರಾಜೀನಾಮೆ ನೀಡದೆ, ಏಕಕಾಲದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿ, ಎರಡೂ ಹುದ್ದೆಗಳನ್ನು ಸರಿಯಾಗಿ ನಿಭಾಯಿಸದೆ ಕರ್ತವ್ಯಕ್ಕೂ ಸರಿಯಾಗಿ ಹಾಜರಾಗದೆ, ಲೋಪ ಎಸಗಿದ್ದ ಆರೋಪ ಅವರ ಮೇಲಿತ್ತು.
ಗೌರವಧನ ಪಡೆದು ವಂಚನೆ: ಅಲ್ಲದೆ, ಸುಳ್ಳು ದಾಖಲೆ ಸೃಷ್ಟಿಸಿ ಹಾಜರಾತಿ ಪುಸ್ತಕದಲ್ಲಿ ಹಾಜರಿರುವುದಾಗಿ ಸುಳ್ಳು ಸಹಿ ಮಾಡಿ, ಜಿಲ್ಲಾ ಪಂಚಾಯಿತಿ ವತಿಯಿಂದ ನಡೆದ ಸಭೆ ಸಮಾರಂಭಗಳಿಗೆ ಹಾಜರಾಗಿದ್ದರು. ಎರಡೂ ಹುದ್ದೆಯಲ್ಲಿ ಅಧಿಕಾರದಲ್ಲಿದ್ದಾಗ (2011ರಿಂದ ಜನವರಿಯಿಂದ 2012ರ ನವೆಂಬರ್ವರೆಗೆ) ಅಂಗನವಾಡಿ ಕಾರ್ಯಕರ್ತೆ ಎಂದು ಸರ್ಕಾರದಿಂದ 88,630 ರೂ. ಗೌರವಧನ ಸ್ವೀಕರಿಸಿ, ವಂಚಿಸಿದ್ದಾರೆಂದು ಆರೋಪಿಸಲಾಗಿತ್ತು.
ಸುಳ್ಳು ಸಹಿ ಆರೋಪ: ಇದರ ಜೊತೆಗೆ, ಏಕಕಾಲದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿ, ಜಿಲ್ಲಾ ಜಿ.ಪಂ ಸದಸ್ಯತ್ವ ಹುದ್ದೆಯನ್ನೂ ಸರಿಯಾಗಿ ನಿಭಾಯಿಸಿಲ್ಲ. ಇನ್ನೊಂದೆಡೆ, ಅಂಗನವಾಡಿ ಕರ್ತವ್ಯದಲ್ಲಿಯೂ ಸರಿಯಾಗಿ ಹಾಜರಿರದೇ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಹಾಜರಾತಿ ಪುಸ್ತಕದಲ್ಲಿ ಹಾಜರಿರುವುದಾಗಿ ಸುಳ್ಳು ಸಹಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಎರಡೂ ಆರೋಪಗಳ ಬಗ್ಗೆ, ಲಂಚ ಪ್ರತಿಬಂಧಕ ಕಾಯ್ದೆ-1988 ಕಲಂ 13(1)(ಸಿ) ಸಹ ಕಲಂ 13(2) ಅಡಿ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಕಾರವಾರ ಲೋಕಾಯುಕ್ತ ಪೊಲೀಸರು, ಉಷಾ ಹೆಗಡೆ ವಿರುದ್ಧ ಭ್ರಷ್ಟಾಚಾರ ವಿರೋಧಿ ಕಾನೂನಿನ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಜಾಪ್ರತಿನಿಧಿಯಾಗಿ ಈ ರೀತಿ ವರ್ತಿಸಿದ್ದು ಸರಿಯಲ್ಲ ಎಂಬ ಅಭಿಪ್ರಾಯಪಟ್ಟಿದೆ. ಅಲ್ಲದೆ, ಆರೋಪ ಸಾಬೀತಾಗಿದ್ದರಿಂದ ಉಷಾ ಹೆಗಡೆಗೆ ದಂಡಸಹಿತ ಜೈಲು ಶಿಕ್ಷೆ ವಿಧಿಸಿದೆ.
ಉಷಾ ಹೆಗಡೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದಾಗ ಎರಡು ಕಡೆಯಿಂದ ಸಂಬಳ ಪಡೆಯಬಾರದು ಎಂಬ ಬಗ್ಗೆ ಯಾವ ಕಾನೂನು ಇರಲಿಲ್ಲ. ಅಲ್ಲದೆ, ಅಂತಹ ನಿಯಮದ ಬಗ್ಗೆ ಅವರಿಗೆ ತಿಳಿದೇ ಇರಲಿಲ್ಲ ಎಂದು ನ್ಯಾಯಾಲಯದಲ್ಲಿ ಉಷಾ ಹೆಗಡೆ ಪರ ವಕೀಲ ಎನ್.ವಿ.ನಾಯಕ ವಾದಿಸಿದ್ದರು. ಲೋಕಾಯುಕ್ತ ಪರವಾಗಿ ವಿಶೇಷ ಅಭಿಯೋಜಕ ಎಲ್.ಎಂ.ಪ್ರಭು ವಾದ ಮಂಡಿಸಿದ್ದರು.
ಇದನ್ನೂ ಓದಿ: ಕೆಸರೆ ಗ್ರಾಮದ ಜಮೀನಿಗೆ ಮೈಸೂರು ನಗರದಲ್ಲಿ ಬದಲಿ ನಿವೇಶನ ನೀಡಿರುವ ಬಗ್ಗೆ ತನಿಖೆ ಅಗತ್ಯ: ಹೈಕೋರ್ಟ್ - MUDA Scam