ಮೈಸೂರು: ಕ್ಷುಲ್ಲಕ ಕಾರಣಕ್ಕೆ ಇಬ್ಬರನ್ನು ಬರ್ಬರವಾಗಿ ಕೊಂದ ಅಪರಾಧಿಗೆ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಂಡಸಹಿತ ಜೀವಾವಧಿ ಸಜೆ ವಿಧಿಸಿ ತೀರ್ಪು ಪ್ರಕಟಿಸಿತು.
ಪ್ರಕರಣದ ವಿವರ: 2024ರ ಮೇ 24ರಂದು ಹೆಚ್.ಡಿ.ಕೋಟೆ ರಸ್ತೆಯ ಕೋಟೆಹುಂಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಆಟೋ ಹಾಗೂ ಮಹೀಂದ್ರ ಗೂಡ್ಸ್ ವಾಹನದ ನಡುವೆ ಸಣ್ಣ ಪ್ರಮಾಣದ ಅಪಘಾತವಾಗಿತ್ತು. ಈ ವೇಳೆ ಎರಡೂ ವಾಹನಗಳ ಚಾಲಕರ ನಡುವೆ ಗಲಾಟೆ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಆಟೋ ಚಾಲಕ ಯೋಗೇಶ್ ಎಂಬಾತ ಮಹೀಂದ್ರ ಗೂಡ್ಸ್ ವಾಹನದಲ್ಲಿದ್ದ ಟಿ.ಮಂಜುನಾಥ ಮತ್ತು ಆರ್.ಮಂಜುನಾಥ ಎಂಬವರ ಮೇಲೆ ತನ್ನ ಬಳಿ ಇದ್ದ ಚಾಕುವಿನಿಂದ ಮನಬಂದಂತೆ ಬಲವಾಗಿ ಚುಚ್ಚಿ ಕೊಲೆ ಮಾಡಿದ್ದ.
ಇದನ್ನೂ ಓದಿ: ಪತಿ ಜೊತೆಗಿದ್ದುಕೊಂಡೇ 2ನೇ ಮದುವೆಗೆ ವರನ ಹುಡುಕಾಡಿದ ಪತ್ನಿ: ವಿಚ್ಛೇದನಕ್ಕೆ ಹೈಕೋರ್ಟ್ ಅಸ್ತು
ಪ್ರಕರಣದ ಕುರಿತು ಜಯಪುರ ಠಾಣೆ ನಿರೀಕ್ಷಕ ಕೆ.ಜೀವನ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್ ಅವರು, ಅಭಿಯೋಜಕರು ಹಾಜರುಪಡಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಅಪರಾಧ ಸಾಬೀತಾಗಿದ್ದರಿಂದ ಅಪರಾಧಿಗೆ ಐಪಿಸಿ ಕಲಂ 504 ಅಡಿ 1 ವರ್ಷ ಕಠಿಣ ಶಿಕ್ಷೆ ಮತ್ತು 1,000 ರೂ. ದಂಡ, ಐಪಿಸಿ ಕಲಂ 302 ಅಡಿ ಕಠಿಣ ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರಿ ಅಭಿಯೋಜಕ ಬಿ.ಈ.ಯೋಗೇಶ್ವರ ಸರ್ಕಾರದ ಪರ ವಾದ ಮಂಡಿಸಿದ್ದರು.
ಇದನ್ನೂ ಓದಿ: ಮೂರನೇ ಪತ್ನಿಗೂ ವಿಚ್ಛೇದನ ಕೋರಿ ಅರ್ಜಿ: ಪತಿಗೆ 25 ಸಾವಿರ ರೂ. ದಂಡ ಹಾಕಿದ ಹೈಕೋರ್ಟ್