ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಹೂಡಿರುವ ಮಾನನಷ್ಟ ಪ್ರಕರಣದ ಹಿನ್ನೆಲೆಯಲ್ಲಿ ವಿಧಾನಸಭೆಯ ಮಾಜಿ ಉಪಸಭಾಧ್ಯಕ್ಷ ಹಾಗೂ ಚಿಂತಾಮಣಿ ಕ್ಷೇತ್ರದ ಮಾಜಿ ಜೆಡಿಎಸ್ ಶಾಸಕ ಎಂ.ಕೃಷ್ಣಾರೆಡ್ಡಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.
ಎನ್.ಆರ್.ರಮೇಶ್ ದಾಖಲಿಸಿದ್ದ ಖಾಸಗಿ ದೂರು ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ (ಮ್ಯಾಜಿಸ್ಟ್ರೇಟ್) ನ್ಯಾಯಾಲಯ ಈ ಆದೇಶ ಮಾಡಿದೆ. ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಕೃಷ್ಣಾರೆಡ್ಡಿ ಅವರಿಗೆ ಈ ಹಿಂದಿನ ವಿಚಾರಣೆ ವೇಳೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ, ಅವರು ಗೈರಾಗಿದ್ದರು. ಸಮನ್ಸ್ ಇನ್ನೂ ಜಾರಿಯಾಗದ ಕಾರಣ ಇದೀಗ ಮತ್ತೊಂದು ಸಮನ್ಸ್ ಜಾರಿ ಮಾಡಿ ಆದೇಶಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು?: ಬೆಂಗಳೂರು ನಗರದ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಗಣೇಶ ಮಂದಿರ ವಾರ್ಡ್ ವ್ಯಾಪ್ತಿಯ ಬನಗಿರಿ ನಗರ ವ್ಯಾಪ್ತಿಗೊಳಪಡುವ ಕತ್ರಿಗುಪ್ಪೆಯ ಸರ್ವೇ ನಂಬರ್ 125 ಮತ್ತು 126ಕ್ಕೆ ಸೇರಿದ ಸುಮಾರು 350 ಕೋಟಿ ರೂಪಾಯಿ ಮೌಲ್ಯದ 4.31 ಎಕರೆ ಬಿ ಖರಾಬು ಜಮೀನಿಗೆ 41 ಮಂದಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸುವ ಯತ್ನ ನಡೆಸಿದ್ದಾರೆ ಎಂದು ರಮೇಶ್ ಆರೋಪಿಸಿದ್ದರು. ಅಲ್ಲದೆ, ಆರೋಪ ಸಂಬಂಧ ಲೋಕಾಯುಕ್ತ ಮತ್ತು ಬೆಂಗಳೂರು ಮಹಾನಗರ ಕಾರ್ಯಪಡೆಯಲ್ಲಿ (ಬಿಎಂಟಿಎಫ್) ದೂರು ಸಲ್ಲಿಸಿದ್ದರು.
ಈ ದೂರಿಗೆ ಸಂಬಂಧಿಸಿದಂತೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆ ಸಂದರ್ಭದಲ್ಲಿ ವಿಧಾನಸಭಾ ಅರ್ಜಿಗಳ ಸಮಿತಿಯ ಅಧ್ಯಕ್ಷರೂ ಆಗಿದ್ದ ಕೃಷ್ಣಾರೆಡ್ಡಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಆದೇಶಿಸುವ ಬದಲಾಗಿ, ಪಾಲಿಕೆಯ ಸ್ವತ್ತನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದ ಅಧಿಕಾರಿಯ ವಿರುದ್ಧವೇ ನಿರ್ಣಯ ತೆಗೆದುಕೊಂಡಿದ್ದರು ಎಂದು ಆರೋಪ ಕೇಳಿಬಂದಿತ್ತು. ಈ ಕುರಿತು ರಮೇಶ್ ಮಾಧ್ಯಮಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದರು. ಇದಕ್ಕೆ ವಿರುದ್ಧವಾಗಿ ಕೃಷ್ಣಾರೆಡ್ಡಿ ಹೇಳಿಕೆ ನೀಡಿದ್ದರು.
ಕೃಷ್ಣಾರೆಡ್ಡಿ ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಮತ್ತು ಮಾನನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ರಮೇಶ್ ಅವರು ಕೃಷ್ಣಾರೆಡ್ಡಿ ವಿರುದ್ಧ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಸಂಜ್ಞೆ ಪರಿಗಣಿಸಿರುವ ನ್ಯಾಯಾಲಯವು ಕೃಷ್ಣಾರೆಡ್ಡಿ ವಿರುದ್ಧ ಸಮನ್ಸ್ ನೀಡಿ, ಚಿಂತಾಮಣಿ ಪೊಲೀಸರಿಗೆ ಆದೇಶಿಸಿತ್ತು.