ಮಂಡ್ಯ: ತಾಲೂಕಿನ ಕೆರಗೋಡು-ಮರಿಲಿಂಗನದೊಡ್ಡಿ ಎಂಬ ಸ್ಥಳಗಳ ನಡುವೆ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಪತಿ ಕೂಡ ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಕೆರಗೋಡು ಸಮೀಪದ ಚಿಕ್ಕಬಾಣಸವಾಡಿಯ ಸಿ.ಮಂಜು(46) ಮತ್ತು ಅವರ ಪತ್ನಿ ಎಚ್.ಎಸ್.ಸುನೀಲಾ(40) ಮೃತರು.
ಇಬ್ಬರೂ ಬೈಕ್‌ನಲ್ಲಿ ಕೆರಗೋಡು ಗ್ರಾಮದ ದೇವಾಲಯಕ್ಕೆ ಹೋಗುತ್ತಿದ್ದಾಗ ಮರಿಲಿಂಗನದೊಡ್ಡಿಯ ಬಳಿ ಹಿಂದಿನಿಂದ ಬಂದ ಕಾರೊಂದು ಇವರ ಬೈಕ್ಗೆ ಡಿಕ್ಕಿ ಹೊಡೆದಿತ್ತು. ಮಂಜು ಅವರ ಪತ್ನಿ ಸುನೀಲಾ ಸ್ಥಳದಲ್ಲೇ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಮಂಜು ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಇಂದು ಮಧ್ಯಾಹ್ನ ಅವರು ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಮಂಜು ಅವರ ಅಂಗಾಂಗವನ್ನು ಕುಟುಂಬದವರು ದಾನ ಮಾಡುವ ಮೂಲಕ ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕೆರಗೋಡು ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡ: ನಿರ್ಮಾಣ ಹಂತದ ಮನೆಯಿಂದ ಬಿದ್ದು ಗ್ರಾ.ಪಂ ಸದಸ್ಯ ಸಾವು - Gram Panchayat Member Dies