ದಾವಣಗೆರೆ : ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯ ಸಿ. ಟಿ ರವಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗಲಾಟೆ ವಿಚಾರದ ತನಿಖೆಗೆ ಸರ್ಕಾರ ಸಿಬಿಐಗೆ ಕೊಡುತ್ತೊ, ಎಲ್ಲಿಗೆ ಕೊಡುತ್ತೊ ಅದರ ಬಗ್ಗೆ ನಂಗೆ ಗೊತ್ತಿಲ್ಲ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 19 ರಂದು ಎಲ್ಲ ರೀತಿಯ ರೆಕಾರ್ಡ್ ಪರಿಶೀಲಿಸಿ ತೀರ್ಮಾನ ಕೊಟ್ಟಿದ್ದೇನೆ. ಆದ್ರೆ ಈಗ ಕೆಲವರು ಬೈದಿದ್ದು ಟಿವಿಯಲ್ಲಿ ಬಂದಿದೆ ಎನ್ನುತ್ತಾರೆ. ಕೌನ್ಸಿಲ್ ಟಿವಿ, ಸಿಸಿಟಿವಿ ಕ್ಯಾಮೆರಾ ಆಡಿಯೋ ಇವುಗಳೆಲ್ಲ ನಮಗೆ ಅಥೆಂಟಿಕ್ ಆಗುತ್ತವೆ. ಟಿವಿಯಲ್ಲಿ ಬಂದಿದ್ದನ್ನ FSLಗೆ ಕಳಿಸೋಣ ಏನು ಬರುತ್ತೆ ನೋಡೋಣ ಎಂದು ಹೇಳಿದ್ದೇನೆ ಎಂದರು.
ಇದನ್ನ ಮುಂದುವರೆಸುವುದು ಬೇಡ, ಇಲ್ಲಿಗೆ ನಿಲ್ಲಿಸೋಣ ಎಂದು ಬಹಳಷ್ಟು ಬಾರಿ ಹೇಳಿದ್ದೇನೆ. ಅವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ನಾನು ಅಡ್ಡಿಬರುವುದಿಲ್ಲ. ರವಿ ಕೂಡ 7 ಪುಟದ ಕಂಪ್ಲೇಂಟ್ ಕೊಟ್ಟಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಕಂಪ್ಲೇಂಟ್ ಕೊಡ್ತಾರೆ ಅನ್ನೋದನ್ನ ಕೇಳಿದೆ. ನೋಡೋಣ ಎಲ್ಲ ರೀತಿ ಪರಿಶೀಲನೆ ಮಾಡಿ ಪರಿಷತ್ ನಿಯಮದ ಪ್ರಕಾರ ಏನು ಕ್ರಮ ತಗೋಬೇಕೋ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಪ್ರಕರಣ ಹಿನ್ನೆಲೆ: ಇತ್ತೀಚಿಗೆ ಡಿಸೆಂಬರ್ 9 ರಿಂದ 19ರ ವರೆಗೆ ಕುಂದಾನಗರಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆದಿತ್ತು. ಸಂಸತ್ನಲ್ಲಿ ಭಾಷಣದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಅಮಾನಿಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಅಲ್ಲದೆ, ಬಳಿಕ ಪ್ರತಿಭಟನೆಯನ್ನು ನಡೆಸಿದ್ದವು.
ಇದಕ್ಕೆ ಪ್ರತಿಯಾಗಿ ಎನ್ಡಿಎ ಮಿತ್ರ ಪಕ್ಷಗಳು ಕೂಡ ಅಂಬೇಡ್ಕರ್ಗೆ ಅವಮಾನ, ಅನ್ಯಾಯ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ತಿರುಗೇಟು ನೀಡಿ, ಪ್ರತಿಭಟನೆ ನಡೆಸಿದ್ದವು. ಈ ವೇಳೆ ತಳ್ಳಾಟ-ನೂಕಾಟದಂತ ಘಟನೆಗಳು ನಡೆದು ಇಬ್ಬರು ಸಂಸದರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. ಇದೇ ಸಂದರ್ಭದಲ್ಲಿ ರಾಜ್ಯದ ಬೆಳಗಾವಿ ಅಧಿವೇಶನದಲ್ಲಿ ನಡೆದ ಘಟನೆ ರಾಜಕೀಯ ಕೋಲಾಹಲಕ್ಕೆ ಕಾರಣವಾಯ್ತು.
ಬಿಜೆಪಿ ಸದಸ್ಯ ಸಿ ಟಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಪದದಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದರಿಂದ ದೊಡ್ಡ ಗಲಾಟೆ ಉಂಟಾಯಿತು. ಬಳಿಕ ಹೆಬ್ಬಾಳ್ಕರ್ ಬೆಂಬಲಿಗರು ಸಿ ಟಿ ರವಿ ಅವರ ಮೇಲೆ ಹಲ್ಲೆ ನಡೆಸಿದ್ದರು. ಸಭಾಪತಿಗಳು ಆಡಿಯೋ, ವಿಡಿಯೋ ಪರಿಶೀಲಿಸಿದ ಬಳಿಕ ಅಂತಹ ಯಾವುದೇ ಅಂಶ ವಿಡಿಯೋ ಮತ್ತು ಆಡಿಯೋದಲ್ಲಿ ಅವಾಚ್ಯ ಪದ ಬಳಕೆ ದಾಖಲಾಗಿಲ್ಲ ಎಂದು ತಿಳಿಸಿದ್ದರು.
ಇದಾದ ನಂತರ ಪೊಲೀಸರು ಸಿ ಟಿ ರವಿ ಅವರನ್ನು ಬಂಧಿಸಿದ್ದರು. ಆಗ ಈ ವಿಷ್ಯ ಆಡಳಿತ ಪ್ರತಿ ಪಕ್ಷಗಳ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು. ಹೈಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೇ ಸಿ ಟಿ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ : ಸಿ.ಟಿ.ರವಿ ಅವರ ಹಕ್ಕಿಗೆ ಚ್ಯುತಿಯಾಗದಂತೆ ಕ್ರಮ: ಬಸವರಾಜ ಹೊರಟ್ಟಿ - C T RAVI CASE