ಬೆಂಗಳೂರು: ಭೋಜನ ವಿರಾಮದ ಬಳಿಕ ಮುಡಾ ಹಗರಣ ಕುರಿತಂತೆ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕಲ್ಪಿಸುವಂತೆ, ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಒತ್ತಾಯ ಮಾಡುತ್ತಿರುವ ನಡುವೆಯೇ ಆರು ವಿಧೇಯಕಗಳು ಅಂಗೀಕಾರವಾಗಿವೆ.
ಇದಕ್ಕೂ ಮುನ್ನ ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, "ಕ್ರಮಬದ್ಧವಾಗಿ ಕಲಾಪ ನಡೆಸುತ್ತಿಲ್ಲ. ಇಂದಿನ ಅಜೆಂಡಾದಲ್ಲಿ ನಿಲುವಳಿ ಸೂಚಿಸುವ ಸಂಬಂಧ ಪ್ರಸ್ತಾಪವಾಗಬೇಕಿತ್ತು. ಇದನ್ನು ಮಾಡಿಲ್ಲ" ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಪ್ರಶ್ನಿಸಿದರು.
ಈ ಮಧ್ಯೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, "ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಮ್ಮ ಮೇಲೆ ಬಂದಿರುವ ಆರೋಪ ಸಂಬಂಧ ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಅವರು ಒಪ್ಪಿದ್ದಾರೆ. ಈ ಮೂಲಕ ಹಗರಣದಲ್ಲಿ ತಾನೊಬ್ಬ ಪ್ರಾಮಾಣಿಕ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಇಂತಹ ನಿರ್ಧಾರ ಕೈಗೊಳ್ಳುವುದಕ್ಕೂ ಗಟ್ಟಿತನ ಬೇಕು. ಅದನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬೊಮ್ಮಾಯಿ, ಕುಮಾರಸ್ವಾಮಿ ಮೇಲೆಯೂ ಆರೋಪಗಳು ಕೇಳಿ ಬಂದಿತ್ತು. ಅವರೇನಾದರೂ ತನಿಖೆಗೆ ಒಪ್ಪಿದ್ರಾ" ಎಂದು ಮರು ಪ್ರಶ್ನಿಸಿದರು.
ಇದಕ್ಕೆ ಆಕ್ಷೇಪಿಸಿದ ವಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಸದನದ ಬಾವಿಗಿಳಿದು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಗದ್ದಲದ ನಡುವೆಯೂ, ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕ ಮತ್ತು ಪುರಾತತ್ವ ಸ್ಥಳಗಳ ಅವಶೇಷ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ತಿದ್ದುಪಡಿ ವಿಧೇಯಕಗಳು, ಕರ್ನಾಟಕ ಭೂ ಕಂದಾಯ ವಿಧೇಯಕ, ರೇಣುಕಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕ, ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರೆ ವಿಧೇಯಕ, ಕೆಲವು ಕಾನೂನು ತಿದ್ದುಪಡಿ ವಿಧೇಯಕಗಳು ಅಂಗೀಕಾರವಾಯಿತು.