ಬೆಂಗಳೂರು: ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 7, ಬಿಜೆಪಿಯ ಮೂವರು ಹಾಗೂ ಜೆಡಿಎಸ್ನಿಂದ ಓರ್ವ ಅಭ್ಯರ್ಥಿ ಇಂದು ನಾಮಪತ್ರ ಸಲ್ಲಿಸಿದರು.
ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇಂದೇ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನಾಳೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 6ಕ್ಕೆ ನಾಮಪತ್ರ ವಾಪಸ್ ಪಡೆಯುವ ದಿನ. ಜೂನ್ 13ಕ್ಕೆ ಚುನಾವಣೆ ನಡೆಯಲಿದೆ. ಮೂರು ಪಕ್ಷದ ಅಭ್ಯರ್ಥಿಗಳು ತಮ್ಮ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ಕೈ ಅಭ್ಯರ್ಥಿಗಳು: ಯತೀಂದ್ರ ಸಿದ್ದರಾಮಯ್ಯ, ಸಚಿವ ಬೋಸರಾಜು, ಕೆ.ಗೋವಿಂದ ರಾಜು, ವಸಂತ ಕುಮಾರ್, ಮಾಜಿ ಎಂಎಲ್‌ಸಿ ಐವಾನ್ ಡಿಸೋಜಾ, ಶಿವಮೊಗ್ಗದ ಬಲ್ಕೀಸ್ ಬಾನು ಮತ್ತು ಜಗದೇವ್ ಗುತ್ತೇದಾರ್.

ಜೆಡಿಎಸ್ನಿಂದ ಜವರಾಯಿ ಗೌಡ ನಾಮಪತ್ರ: ಜೆಡಿಎಸ್ ಪಕ್ಷದಿಂದ ಜವರಾಯಿ ಗೌಡ ಹೆಸರನ್ನು ಅಂತಿಮಗೊಳಿಸಲಾಯಿತು. ಬೆಳಗ್ಗೆ ವಿಧಾನಸೌಧ ಪಕ್ಷದ ಕಚೇರಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಯಿತು. ಈ ಸಭೆಯಲ್ಲಿ ಅಭ್ಯರ್ಥಿಯಾಗಿ ಜವರಾಯಿ ಗೌಡರನ್ನು ಆಯ್ಕೆ ಮಾಡಲಾಯಿತು. ಬಳಿಕ ಪಕ್ಷದ ನಾಯಕರ ಸಮ್ಮುಖದಲ್ಲಿ ಜವರಾಯಿ ಗೌಡ ನಾಮಪತ್ರ ಸಲ್ಲಿಸಿದರು.

ಬಿಜೆಪಿಯ ಮೂವರು ಅಭ್ಯರ್ಥಿಗಳಿಂದ ನಾಮಪತ್ರ: ಬಿಜೆಪಿಯ ಮೂವರು ಅಭ್ಯರ್ಥಿಗಳಾದ ಸಿ.ಟಿ.ರವಿ, ಎನ್.ರವಿಕುಮಾರ್ ಹಾಗೂ ಎಂ.ಜಿ.ಮುಳೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ, ಸುನೀಲ್ ಕುಮಾರ್ ಇದ್ದರು.
ಒಟ್ಟು 12 ಮಂದಿ ಉಮೇದುವಾರಿಕೆ ಸಲ್ಲಿಕೆ: ವಿಧಾನಸಭೆಯಿಂದ ಪರಿಷತ್ಗೆ ನಡೆಯುವ ಚುನಾವಣೆಗೆ ಒಟ್ಟು 12 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ 7, ಬಿಜೆಪಿಯಿಂದ 3 ಹಾಗೂ ಜೆಡಿಎಸ್ನಿಂದ 1 ನಾಮಪತ್ರ ಸಲ್ಲಿಸಿದ್ದಾರೆ. ಮೇ 31ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಆಸಿಫ್ ಪಾಷಾ ಆರ್.ಎಂ. ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಪರಿಶೀಲನೆ ವೇಳೆ ಸೂಚಕರಿಲ್ಲದ ಕಾರಣ ಆಸಿಫ್ ಪಾಷಾ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಹನ್ನೊಂದು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತ.
ಇದನ್ನೂ ಓದಿ: ಸಿದ್ದರಾಮಯ್ಯ - ಕುಮಾರಸ್ವಾಮಿ ಪರಸ್ಪರ ನಮಸ್ಕಾರ; ಎದುರಾದರೂ ಮುಖ ನೋಡದ ಡಿಕೆಶಿ - ಹೆಚ್ಡಿಕೆ - CM Siddaramaiah