ಬೆಂಗಳೂರು : 2022-23ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಬಹುತೇಕ ಆಯ್ಕೆ ಆಗಿದ್ದು, ಘೋಷಣೆಯೊಂದೇ ಬಾಕಿ ಇದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ಹೆಸರು ಹೇಳಲು ಈಗ ಸಾಧ್ಯವಿಲ್ಲ. ನಂತರ ತಿಳಿಸಲಾಗುವುದು ಎಂದರು. ಮೊದಲ ದಿನದ ಅಧಿವೇಶನ ಬೆಳಗ್ಗೆ 11ಕ್ಕೆ ಪ್ರಾರಂಭ ಆಗಲಿದೆ. ನಂತರ ಪ್ರತಿ ದಿನದ್ದು ತಿಳಿಸಲಾಗುತ್ತದೆ. 9 ದಿನ ಅಧಿವೇಶನ ನಡೆಯುತ್ತದೆ. ಸಲಹಾ ಸಮಿತಿ ಸಭೆ ನಂತರ ಅಧಿವೇಶನ ನಡೆಸುವ ಬಗ್ಗೆ ನಿರ್ಧಾರವಾಗಲಿದೆ ಎಂದರು.
ವರ್ಷಕ್ಕೆ 60 ದಿನ ಅಧಿವೇಶನ ನಡೆಯಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಆಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಬಳಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಹೆಚ್ಚು ದಿನ ಅಧಿವೇಶನ ನಡೆದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸಹಕಾರಿಯಾಗಲಿದೆ. ಹೆಚ್ಚು ದಿನ ಅಧಿವೇಶನ ನಡೆಯುವುದು ಒಳ್ಳೆಯದು. ಆದರೆ, ಅಧಿವೇಶನ ಎಷ್ಟು ದಿನ ನಡೆಸಬೇಕೆಂಬುದರ ಬಗ್ಗೆ ನಿರ್ಧಾರ ಮಾಡುವುದು ಸರ್ಕಾರ ಎಂದು ಹೇಳಿದರು.
ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಂದ ಕಳೆದ ಅಧಿವೇಶನದಲ್ಲಿ ಅಂಗೀಕಾರಗೊಂಡ ವಿಧೇಯಕಗಳ ಪಟ್ಟಿಯನ್ನು ಕಾರ್ಯದರ್ಶಿಗಳ ಮುಂದೆ ಮಂಡಿಸಲಾಗುವುದು. ಪ್ರಶ್ನೋತ್ತರ ಅವಧಿಗೆ 854 ಪ್ರಶ್ನೆಗಳು ಇದುವರೆಗೆ ಬಂದಿವೆ. 75 ಚುಕ್ಕೆ ಗುರುತುಗಳೂ, 27 ಚುಕ್ಕೆ ರಹಿತ ಗುರುತುಗಳನ್ನು ಹಾಕಿಕೊಂಡಿದ್ದೇವೆ.
ನಿಯಮ 72ರ ಅಡಿ 71 ಪ್ರಶ್ನೆ ಬಂದಿವೆ. ನಿಯಮ 330 ಅಡಿ 52 ಪ್ರಶ್ನೆಗಳು ಬಂದಿವೆ. ಎರಡು ಬಿಲ್ ಅಂಗೀಕಾರಗೊಳ್ಳಬೇಕಿದೆ. ಅದೇ ರೀತಿ ಕಳೆದ ಬಾರಿ ವಿಧಾನಸಭೆಯಿಂದ ತಿದ್ದುಪಡಿ ಅಂಗೀಕಾರ ರೂಪದಲ್ಲಿರುವ 2024 ರ ಕರ್ನಾಟಕ ಸೌಹಾರ್ದ ಸಹಕಾರಿ ವಿಧೇಯಕ ತಿದ್ದುಪಡಿ ಪರಿಶೀಲನೆಗೆ ಕೊಟ್ಟಿದ್ದೆವು. ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಕೊಠಡಿ ನವೀಕರಣಕ್ಕೆ ನಿಯಮ : ವಿಧಾನಸೌಧದಲ್ಲಿ ಸಚಿವರುಗಳಿಂದ ಕೊಠಡಿ ನವೀಕರಣ ವಿಚಾರವಾಗಿ ಮಾತನಾಡಿದ ಹೊರಟ್ಟಿ ಅವರು, ವಿಧಾನಸೌಧದ ಕೊಠಡಿಗಳನ್ನು ಬದಲಾವಣೆ ಮಾಡಬಾರದೆಂದು ನಿಯಮ ಇದೆ. ಸುಣ್ಣ ಬಣ್ಣ ಹಚ್ಚಿಕೊಳ್ಳಲು ಅವಕಾಶ ಇದೆ. ಶೌಚಾಲಯ, ಬಣ್ಣ ಬದಲಿಸಿಕೊಳ್ಳಬಹುದು. ಅದಕ್ಕೂ ಅನುಮತಿ ಪಡೆದು ಮಾಡಬೇಕು. ನವೀಕರಣ ಮಾಡಬಾರದು ಎಂದರು.
ವಾಸ್ತು ಪ್ರಕಾರವೇ ವಿಧಾನಸೌಧ ನಿರ್ಮಾಣ : ವಿಧಾನಸೌಧವನ್ನು ವಾಸ್ತು ಪ್ರಕಾರವೇ ನಿರ್ಮಾಣ ಮಾಡಲಾಗಿದೆ. ಇತಿಹಾಸವಿದೆ ನೋಡಿ, ಅದರಲ್ಲಿದೆ. ಈಗ ಕೊಠಡಿಗಳನ್ನು ವಾಸ್ತು ಪ್ರಕಾರ ಮಾಡುವಂತಹ ಅವಶ್ಯಕತೆ ಇಲ್ಲ. ನಾವೇನು ಇಲ್ಲಿ ಪರ್ಮೆನೆಂಟಾಗಿ ಇರುತ್ತೇವೆಯೇ?. ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳಲಿ. ಮತ್ತೆ ಆ ರೀತಿ ಅವಕಾಶ ಕೊಡುವುದಿಲ್ಲ. ಆ ರೀತಿ ಮಾಡಬಾರದು ಅಂತ ಹೇಳುತ್ತೇವೆ. ಈ ಹಿಂದೆ ಒಬ್ಬ ಸಚಿವರು ಈ ರೀತಿ ಮಾಡಿ ತೊಂದರೆ ಆಗಿತ್ತು. ಅವರ ಹೆಸರು ಹೇಳುವುದಿಲ್ಲ. ಯಾವ ಸಚಿವರಿಗೂ ಕೊಠಡಿಯ ಗೋಡೆ ಒಡೆಯುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಲಿಮ್ಕಾ ಸಾಧಕ ಸಭಾಪತಿ ಹೊರಟ್ಟಿ: ಪರಿಷತ್‌ನಲ್ಲಿ ಪಕ್ಷಾತೀತ ಅಭಿನಂದನೆ