ಬೆಂಗಳೂರು: ಬಣ ಬಡಿದಾಟದಿಂದ ಮನೆಯೊಂದು ಮೂರು ಬಾಗಿಲು ಎಂದಾಗಿರುವ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತವನ್ನು ಶಮನ ಮಾಡಲು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್‌ವಾಲ್ ರಾಜ್ಯಕ್ಕೆ ಆಗಮಿಸಿದ್ದು, ಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ಅಂಕುಶ ಹಾಕಲು ಕೋರ್ ಕಮಿಟಿ ಸಭೆ ನಡೆಯಲಿದೆ.
ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ರಾಜ್ಯ ಬಿಜೆಪಿ ಉಸ್ತುವಾರಿ ರಾಧ ಮೋಹನ್‌ದಾಸ್ ಅಗರ್‌ವಾಲ್ ಅವರಿಗೆ ರಾಜ್ಯಕ್ಕೆ ತೆರಳಿ ಎಲ್ಲರ ಸಭೆ ನಡೆಸಿ ಬಣ ಬಡಿದಾಟಕ್ಕೆ ಮದ್ದು ಅರೆಯುವಂತೆ ಸೂಚನೆ ನೀಡಿದ್ದಾರೆ. ಅದರಂತೆ ರಾಧಾ ಮೋಹನ್‌ದಾಸ್ ಅಗಲ್‌ವಾಲ್ ಅವರು ಸಹ ಉಸ್ತುವಾರಿ ಸುಧಾಕರ್ ರೆಡ್ಡಿಯವರ ಜೊತೆ ಇಂದು ರಾಜ್ಯಕ್ಕೆ ಬಂದಿದ್ದು, ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಸಿ ಬಣ ಬಡಿದಾಟಕ್ಕೆ ಅಂಕುಶ ಹಾಕುವ ಪ್ರಯತ್ನ ನಡೆಸಲಿದ್ದಾರೆ.
ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ. ವಿ. ಸದಾನಂದಗೌಡ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ಪ್ರತಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಿರಿಯ ನಾಯಕರುಗಳು ಭಾಗವಹಿಸಲಿದ್ದಾರೆ.
ಈ ಸಭೆಯಲ್ಲಿ ಬಣ ಬಡಿದಾಟಕ್ಕೆ ಮದ್ದು ಅರೆಯುವ ಜತೆಗೆ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಾದ ಬಗ್ಗೆಯೂ ಚರ್ಚೆ ನಡೆಯಲಿದೆ. ಇದರ ಜೊತೆಗೆ ಬೆಳಗಾವಿಯಲ್ಲಿ ಸೋಮವಾರದಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಬಗ್ಗೆಯೂ ಸಮಾಲೋಚನೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಕೋರ್ ಕಮಿಟಿ ಸಭೆ ನಡೆಯಲಿದ್ದು, ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಈಗಾಗಲೇ ಆಗಮಿಸಿದ್ದು ಕೆಲ ಮುಖಂಡರ ಜೊತೆ ಚರ್ಚೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದ ಆರೋಗ್ಯ ಇಲಾಖೆ ಐಸಿಯುನಲ್ಲಿದೆ: ಬೊಮ್ಮಾಯಿ