ಬೆಂಗಳೂರು: ಈ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿದ್ದು, ಮಲೆನಾಡು ಕರಾವಳಿ ಭಾಗದ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಫೀಲ್ಡಿಗೆ ಇಳಿದು ಕೆಲಸ ಮಾಡಬೇಕು. ಸರ್ಕಾರ ನಮ್ಮ ಪರವಾಗಿದೆ ಎಂದು ಜನರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿಕಾಸಸೌಧದಲ್ಲಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರವಾಹ ಪೀಡಿತ ಜಿಲ್ಲೆಗಳಾದ ಉತ್ತರ ಕನ್ನಡ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ ಹಾಗೂ ದಾವಣಗೆರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳು ಹಾಗೂ ನೀರಾವರಿ, ಇಂಧನ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಹಲವು ಸಲಹೆ, ಸೂಚನೆಗಳನ್ನು ನೀಡಿದರು. ಅಲ್ಲದೆ, ಪ್ರವಾಹಕ್ಕೆ ಸಂಬಂಧಿಸಿದ ಪರಿಹಾರ ಕೆಲಸಗಳಿಗೆ ಸಮಯದ ಗಡುವು ನಿಗದಿಪಡಿಸಿದರು.
ಪ್ರವಾಹ ಪೀಡಿತ ಜಿಲ್ಲೆಗಳ ಸ್ಥಿತಿಗತಿ:
- ಉತ್ತರ ಕನ್ನಡ: ಅಂಕೋಲಾ ಭೂ ಕುಸಿತ ಅವಘಡದಲ್ಲಿ ಮೃತಪಟ್ಟ ಎಲ್ಲಾ ಏಳು ಜನರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೆ, ನದಿ ನೀರಿನಲ್ಲಿ ಕೊಚ್ಚಿಹೋಗಿದ್ದ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಅನ್ನು ಸುರಕ್ಷಿತವಾಗಿ ನದಿಯಿಂದ ಹೊರ ತೆಗೆಯಲಾಗಿದೆ. ಇಡೀ ದೇಶದಲ್ಲೇ ಹೀಗೆ ನದಿ ನೀರಿನಲ್ಲಿ ಕೊಚ್ಚಿಹೋದ ಎಲ್‌ಪಿಜಿ ಟ್ಯಾಂಕರ್ ಅನ್ನು ಸುರಕ್ಷಿತವಾಗಿ ಹೊರ ತೆಗೆದ ಮೊದಲ ಪ್ರಕರಣ ಇದಾಗಿದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಸಣ್ಣ ಪ್ರಮಾಣ ಭೂ ಕುಸಿತ ಉಂಟಾಗಿದ್ದು, ಕೆಲವು ಭಾಗಗಳಲ್ಲಿ ಅಗತ್ಯ ವಸ್ತುಗಳ ವಾಹನ ಮಾತ್ರ ಓಡಾಡಲು ಸಿದ್ದತೆ ಮಾಡಲಾಗಿದೆ. ಈಗಾಗಲೇ ಟಾಸ್ಕ್‌ಫೋರ್ಸ್ ರಚಿಸಲಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಟಾಸ್ಕ್‌ಫೋರ್ಸ್ ಫೀಲ್ಡಿಗೆ ಇಳಿದು ಕೆಲಸ ಮಾಡುತ್ತಿದೆ. ಅಲ್ಲದೆ, ಜಿಲ್ಲಾಧಿಕಾರಿ ಹಾಗೂ ವಿಪತ್ತು ನಿರ್ವಹಣೆ ಇಲಾಖೆ ಒಟ್ಟಾಗಿ ಕಂಟ್ರೋಲ್ ರೂಂ ತೆರೆದು ಜನರ ಸಹಾಯಕ್ಕೆ ಮುಂದಾಗಿದೆ.
- ಕೊಡಗು: ಕೊಡಗು ಜಿಲ್ಲೆಯಲ್ಲಿ ಈ ವರ್ಷ ಶೇ. 27ರಷ್ಟು ಅಧಿಕ ಮಳೆಯಾಗಿದ್ದು, 24 ಮನೆಗಳು ಸಂಪೂರ್ಣ ಕುಸಿದು ಹೋಗಿದ್ದರೆ, 74 ಮನೆಗಳು ಭಾಗಶಃ ಕುಸಿದಿವೆ. ಈ ಎಲ್ಲಾ ಫಲಾನುಭವಿಗಳಿಗೂ ಈಗಾಗಲೇ ಪರಿಹಾರ ಹಣವನ್ನು ಪಾವತಿಸಲಾಗಿದೆ.
- ದಕ್ಷಿಣ ಕನ್ನಡ: ಜಿಲ್ಲೆಯ ಎರಡು ಪ್ರಮುಖ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಟ್ಟ ರಸ್ತೆಯಲ್ಲಿ ಭೂ ಕುಸಿತ ಸಾಧ್ಯತೆ ಇರುವ ಕಾರಣ ಈ ರಸ್ತೆಯನ್ನು ಮುಚ್ಚಲಾಗಿದೆ. ಟಾಸ್ಕ್‌ಫೋರ್ಸ್ ರಚಿಸಲಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈ ತಂಡ ಈಗಾಗಲೇ ಕಾರ್ಯಾಚರಣೆಗೆ ಮುಂದಾಗಿದೆ.
- ಹಾಸನ: ಹೇಮಾವತಿಗೆ ಪ್ರತಿನಿತ್ಯ 10,000 ಕ್ಯೂಸೆಕ್ ನೀರು ಬರುತ್ತಿದೆ. ನದಿ ಪಾತ್ರದ ಜನರನ್ನ ಎಚ್ಚರಿಸಲು ಲೋಕಲ್ ಸುದ್ದಿ ವಾಹಿನಿ ಹಾಗೂ ಸ್ಥಳೀಯ ಪತ್ರಿಕೆಗಳ ಮೂಲಕ ಎಚ್ಚರಿಕೆ ನೀಡಲಾಗಿದೆ. ಪಂಚಾಯಿತಿ ಮಟ್ಟದ ಟಾಸ್ಕ್ ಫೋರ್ಸ್ ತಂಡವನ್ನು ನದಿಪಾತ್ರಕ್ಕೆ ಕಳುಹಿಸಿ ಡಂಗೂರ ಹೊಡೆದು ಜನರನ್ನು ಎಚ್ಚರಿಸಿ, ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. 4 ಮನೆಗಳು ಸಂಪೂರ್ಣ ಕುಸಿದಿದ್ದರೆ, 17 ಮನೆಗಳು ಭಾಗಶಃ ಹಾನಿಯಾಗಿದೆ. ಫಲಾನುಭವಿಗಳಿಗೆ ಪರಿಹಾರ ನೀಡಲಾಗಿದೆ. ಸಕಲೇಶಪುರದ ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತ ಆಗಿದ್ದು, ಆ ಬಗ್ಗೆ ಹೆಚ್ಚಿನ ಗಮನ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
- ಉಡುಪಿ: ಜಿಲ್ಲೆಯಲ್ಲಿ ಈ ವರ್ಷ 1,440 ಮಿ.ಮೀ. ಮಳೆಯಾಗಿದ್ದು, ನಾಲ್ಕು ನದಿಗಳು ಅಪಾಯಮಟ್ಟ ಮೀರಿವೆ. ಸೌಪರ್ಣಿಕ ನದಿಪಾತ್ರದ 86 ಗ್ರಾಮಗಳಲ್ಲಿ ಪ್ರವಾಹ ಸಾಧ್ಯತೆ ಇದ್ದು, ಎಲ್ಲಾ ಗ್ರಾಮಗಳನ್ನು ಖಾಲಿ ಮಾಡಿಸಲಾಗಿದೆ. ಅಲ್ಲದೆ, ಗ್ರಾಮಗಳ ಎಲ್ಲಾ ನಿವಾಸಿಗಳನ್ನೂ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿಯ ಜೊತೆಗೆ ಚರ್ಚಿಸಿ ಆಗುಂಬೆ ಮಾರ್ಗದಲ್ಲಿ ಭಾರೀ ವಾಹನ ಸಂಚಾರಕ್ಕೆ ತಡೆಯೊಡ್ಡಲಾಗಿದೆ.
- ಚಿಕ್ಕಮಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಕೊಪ್ಪ ಶೃಂಗೇರಿ ಮೂಡಿಗೆರೆ ತಾಲೂಕುಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 190ಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ. 9 ಕಡೆಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮುಳ್ಳಯ್ಯನಗಿರಿ ಪ್ರವಾಸಕ್ಕೆ ತಡೆಯೊಡ್ಡಲಾಗಿದೆ. ಕಳಸಾ- ಹೊರನಾಡು ಸೇತುವೆ ಆಗಾಗ್ಗೆ ಮುಳುಗುತ್ತಿರುವುದರಿಂದ ಪ್ರವಾಸಿಗರ ಹಿತದೃಷ್ಟಿಯಿಂದ ಪೊಲೀಸರನ್ನು ಶಾಶ್ವತವಾಗಿ ಆ ಭಾಗದಲ್ಲೇ ಇರುವಂತೆ ನೋಡಿಕೊಳ್ಳಲಾಗಿದೆ.
- ಮೈಸೂರು: ಕೇರಳದ ವಯನಾಡ್‌ನಲ್ಲಿ ಹಳದಿ ಅಲರ್ಟ್ ಇದ್ದು, ಈ ಭಾಗದಲ್ಲಿ ಅಧಿಕ ಮಳೆಯಾಗುತ್ತಿದೆ. ಹೀಗಾಗಿ ಕಬಿನಿಗೆ ಒಳ ಹರಿವು ಹೆಚ್ಚಾಗುತ್ತಿದೆ. ನಾಳೆ ಸಂಜೆ ವೇಳೆಗೆ ಕೆಆರ್‌ಎಸ್ ತುಂಬಲಿದ್ದು, ಕನಿಷ್ಠ 1 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡುವ ಸಾಧ್ಯತೆ ಇದೆ. ಸಂಗಂ ಹಾಗೂ ಶ್ರೀರಂಗಪಟ್ಟಣದ ಬಳಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಅಪಾಯ ಉಂಟಾಗಬಹುದಾದ ಗ್ರಾಮಗಳಲ್ಲಿ ಜನರನ್ನು ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸುವ ಕೆಲಸವನ್ನು ಈಗಾಗಲೇ ಆರಂಭಿಸಲಾಗಿದೆ.
- ಶಿವಮೊಗ್ಗ: ಭಾರೀ ಮಳೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ 6 ತಾಲೂಕುಗಳ ಶಾಲಾ- ಕಾಲೇಜು, ಅಂಗನವಾಡಿಗಳಿಗೆ ಇಂದು ರಜೆ ಘೋಷಿಸಲಾಗಿದೆ. ಭದ್ರಾವತಿ, ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ಹಾಗೂ ಶಿಕಾರಿಪುರ ತಾಲೂಕುಗಳಲ್ಲಿ ಇಂದು (ಜುಲೈ 20 ರಂದು) ರಜೆ ಘೋಷಿಸಲಾಗಿದೆ. ಇದರಿಂದ ಇಲ್ಲಿನ ಶಾಲೆ, ಕಾಲೇಜು, ಅಂಗನವಾಡಿಗಳಿಗೆ ಆಯಾ ತಾಲೂಕಿನ ತಹಶೀಲ್ದಾರ್ ಅವರು ರಜೆ ಘೋಷಣೆ ಮಾಡಿದ್ದಾರೆ. ಮಳೆ ಕಡಿಮೆಯಾಗಿರುವುದರಿಂದ ಶಿವಮೊಗ್ಗ ತಾಲೂಕಿನಲ್ಲಿ ರಜೆ ಘೋಷಣೆ ಮಾಡಿಲ್ಲ. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದರು. ಮಳೆಯನ್ನಾಧರಿಸಿ ಆಯಾ ತಾಲೂಕುಗಳಲ್ಲಿ ರಜೆ ನೀಡುವ ಅಧಿಕಾರನ್ನು ಡಿಸಿ ಅವರು ತಹಶೀಲ್ದಾರ್ಗಳಿಗೆ ನೀಡಿದ್ದಾರೆ.