ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಕೋಟೆಕಲ್ಲ ಗ್ರಾಮದ ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) 10 ಲಕ್ಷ ರೂಪಾಯಿ ಸರ್ಕಾರದ ಅನುದಾನದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ನಿರ್ಮಿಸಿದ್ದು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರಿಗೆ ಅನುಕೂಲವಾಗಿದೆ.
ಪಿಡಿಒ ಆರತಿ ಕ್ಷತ್ರಿ ಎಂಬವರು ಹಳೆ ಕಟ್ಟಡಕ್ಕೆ ಹೊಸ ರೂಪ ನೀಡಿದ್ದಾರೆ. ಸುಣ್ಣ ಬಣ್ಣದೊಂದಿಗೆ ಆಕರ್ಷಕ ಚಿತ್ರಕಲೆ, ಗೋಡೆ ಬರಹಗಳನ್ನು ಇಲ್ಲಿ ನೋಡಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ವಿವಿಧ ಪುಸ್ತಕಗಳು ಹಾಗೂ ಪ್ರತ್ಯೇಕ ಕೊಠಡಿ ಇದೆ. ಮಹಿಳೆಯರು, ವಿಶೇಷ ಚೇತನರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ, ಸದಸ್ಯರೊಂದಿಗೆ ಚರ್ಚಿಸಿ, ಪಂಚಾಯತ್ಗೆ ಬರುವ ಕರ ವಸೂಲಿ ಮಾಡಿ, ಅದರಿಂದ ಬಂದ ಹಣ ಹಾಗೂ ಇತರ ಯೋಜನೆಯೊಂದಿಗೆ ಡಿಜಿಟಲ್ ಗ್ರಂಥಾಲಯ ರೂಪುಗೊಂಡಿದೆ.
ಗ್ರಾಮದ ಜನತೆಯ ಅನುಕೂಲಕ್ಕಾಗಿ ಡಿಜಿಟಲ್ ಗ್ರಂಥಾಲಯ ನಿರ್ಮಿಸಿದ್ದು, ಸಾಕಷ್ಟು ಉಪಯೋಗ ಆಗುತ್ತಿರುವುದು ಸಂತಸ ತಂದಿದೆ ಎಂದು ಪಿಡಿಒ ಆರತಿ ಕ್ಷತ್ರಿ ತಿಳಿಸಿದರು.
ಪದವಿ ಮುಗಿಸಿ ಐಎಎಸ್, ಕೆಎಎಸ್ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಓದಲು ವಿದ್ಯಾರ್ಥಿಗಳು ಬರುತ್ತಾರೆ. ದಿನ ಪತ್ರಿಕೆ ಸೇರಿದಂತೆ ಇತರ ಪುಸ್ತಕಗಳನ್ನು ಓದಲು ಮಹಿಳೆಯರು, ಪುರುಷರು ಹಾಗೂ ಯುವಕರು ಆಗಮಿಸುತ್ತಾರೆ. ಸಾಹಿತ್ಯ, ಕಲೆ, ಧಾರವಾಹಿ ಸೇರಿದಂತೆ ಇತರ ಮಹಾನ್ ವ್ಯಕ್ತಿಗಳ ಚರಿತ್ರೆ ಇರುವ ಪುಸ್ತಕಗಳನ್ನು ಇಲ್ಲಿಡಲಾಗಿದೆ. ಆನ್ಲೈನ್ ಮೂಲಕ ಮಾಹಿತಿ ತಿಳಿದುಕೊಳ್ಳಲು ಕಂಪ್ಯೂಟರ್ ವಿಭಾಗ ಮಾಡಲಾಗಿದ್ದು, ಇಂಟರ್ನೆಟ್ ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ವಿದ್ಯಾರ್ಥಿನಿ ಮಂಜುಳಾ ಮಾದರ ಹೇಳಿದರು.