ಹಾವೇರಿ: ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಅಂತೆಯೇ ಉಪಚುನಾವಣೆಯ ಉಸ್ತುವಾರಿಯಾಗಿ ನಿಯೋಜನೆಗೊಂಡಿರುವ ಸಚಿವ ಈಶ್ವರ ಖಂಡ್ರೆ ಶುಕ್ರವಾರ ಇಲ್ಲಿ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ನಡೆಸಿದರು.
ನಗರದ ಹನುಮಂತಗೌಡ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಸೇರಿದಂತೆ ಸ್ಥಳೀಯ ಶಾಸಕರು ಪಾಲ್ಗೊಂಡಿದ್ದರು. ಸಭೆಗೂ ಮುನ್ನ ಟಿಕೆಟ್ ಆಕಾಂಕ್ಷಿಯಾಗಿರುವ ಅಜ್ಜಂಪೀರ್ ಖಾದ್ರಿ ಮತ್ತು ಯಾಸೀರ್‌ಖಾನ್ ಪಠಾಣ್ ಬೆಂಬಲಿಗರು ತೀವ್ರ ಪೈಪೋಟಿ ನಡೆಸಿದರು. ತಮ್ಮ ನಾಯಕ ಅಜ್ಜಂಪೀರ್ ಖಾದ್ರಿಗೆ ಟಿಕೆಟ್ ನೀಡಬೇಕು, ಸ್ಥಳೀಯರಿಗೆ ಆದ್ಯತೆ ಕೊಡಬೇಕು ಎಂದು ಅಜ್ಜಂಪೀರ್ ಖಾದ್ರಿ ಬೆಂಬಲಿಗಲು ಆಗ್ರಹಿಸಿದರು.
ಜೊತೆಗೆ ಕಳೆದ ಬಾರಿ ಪರಾಜಿತ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ್ ಬೆಂಬಲಿಗರು ಪಠಾಣ್ಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಇಬ್ಬರು ಆಕಾಂಕ್ಷಿಗಳ ಬೆಂಬಲಿಗರಿಂದ ಘೋಷಣೆಗಳು ಜೋರಾಗಿದ್ದವು. ಈ ಮಧ್ಯೆ ಮಾಜಿ ಸಚಿವ ಆರ್.ಶಂಕರ್ ತಮಗೆ ಟಿಕೆಟ್ ನೀಡಬೇಕು ಎಂದು ಬೆಂಬಲಿಗರ ಜೊತೆ ಆಗಮಿಸಿದರು. ಡೊಳ್ಳು ಕುಣಿತ ಜೊತೆ ಆಗಮಿಸಿದ ಶಂಕರ್ ಅವರನ್ನು ಬೆಂಬಲಿಗರು ಹೊತ್ತುಕೊಂಡು ಬಂದರು.
ನಂತರ ಸಭೆ ಆರಂಭವಾಯಿತು. ಖಾದ್ರಿ ಮತ್ತು ಪಠಾಣ್ ಬೆಂಬಲಿಗರು ನಡುವಿನ ತಿಕ್ಕಾಟ ಜೋರಾಗಿಯೇ ನಡೆಯಿತು. ಸಭೆಗೆ ಆಗಮಿಸಿದ ಸಚಿವ ಈಶ್ವರ ಖಂಡ್ರೆ ಮತ್ತು ಶಿವಾನಂದ ಪಾಟೀಲ್ ತೀವ್ರ ಮುಜುಗರಕ್ಕೆ ಒಳಗಾದರು. ಈ ವೇಳೆ ಕಾರ್ಯಕರ್ತರಿಗೆ ಶಾಂತ ರೀತಿಯಿಂದ ವರ್ತಿಸಬೇಕು ಎಂದು ಮನವಿ ಮಾಡಿದರು. ಆಕಾಂಕ್ಷಿಗಳನ್ನು ವೇದಿಕೆಯಿಂದ ಕೆಳಗೆ ಕೂರಿಸಲಾಯಿತು, ಬಳಿಕ ಸಭೆ ನಡೆಸಲಾಯಿತು.
ಈಶ್ವರ ಖಂಡ್ರೆ ಮತ್ತು ಶಿವಾನಂದ ಪಾಟೀಲ್ ಮಾತನಾಡಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಎಐಸಿಸಿ ರಾಜ್ಯ ಕಾರ್ಯದರ್ಶಿ ಮಯೂರ ಜಯಕುಮಾರ್ ಪಾಲ್ಗೊಂಡು ಕಾರ್ಯಕರ್ತರಿಗೆ ಕಾಂಗ್ರೆಸ್ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು. ಬಳಿಕ ಈಶ್ವರ ಖಂಡ್ರೆ, ಮಯೂರ ಜಯಕುಮಾರ್ ಹಾಗೂ ಮುಖಂಡರ, ಆಕಾಂಕ್ಷಿಗಳನ್ನ ಪ್ರತ್ಯೇಕವಾಗಿ ಕರೆದು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಸಹ ಕಾರ್ಯಕರ್ತರ ಘೋಷಣೆಗಳು ಜೋರಾಗಿದ್ದವು. ಈ ನಡುವೆಯೇ ಈಶ್ವರ ಖಂಡ್ರೆ ಜನರಿಂದ ಮನವಿ ಪತ್ರಗಳನ್ನು ಸ್ವೀಕರಿಸಿದರು.
ನಂತರ ಮಾತನಾಡಿದ ಈಶ್ವರ ಖಂಡ್ರೆ ಅವರು, ''ಶಿಗ್ಗಾಂವ ಉಪಚುನಾವಣೆಗೆ 12 ರಿಂದ 13 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಶಿಗ್ಗಾಂವ ಉಪಚುನಾವಣೆಗೆ ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಮಾಡಲಿದೆ. ನಂತರ ಎಲ್ಲ ಆಕಾಂಕ್ಷಿಗಳು ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು. ಈ ರೀತಿಯ ಗಲಾಟೆ ಸಂಘರ್ಷ ಇದೆ. ಇದಕ್ಕೆಲ್ಲ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ'' ಎಂದು ತಿಳಿಸಿದರು.
ಇದನ್ನೂ ಓದಿ: ಕಡೆಗಣನೆ ಕೂಗು: ಕಾರ್ಯಕರ್ತರ ವಿಶ್ವಾಸಗಳಿಸಿ, ಪಕ್ಷ ಸಂಘಟಿಸಲು ಸಿಎಂ-ಡಿಸಿಎಂ ತಂತ್ರ - CM DCM program