ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಯಿತು. ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಸುಮಾರು ಒಂದು ಗಂಟೆ ಕಾಲ ಪರಿಷತ್ ಚುನಾವಣೆ ಸಂಬಂಧ ಚರ್ಚೆ ನಡೆಸಲಾಯಿತು.
ಅಭ್ಯರ್ಥಿಗಳನ್ನು ಸಿಎಂ ಪರಿಚಯಿಸಿದ ಸಿಎಂ ಸೋಮವಾರ (ಇಂದು) ನಾಳೆ ನಡೆಯುವ ಪರಿಷತ್ ನಾಮಪತ್ರ ಸಲ್ಲಿಕೆಗೆ ಆಗಮಿಸುವಂತೆ ಮನವಿ ಮಾಡಿದರು. ಒಂದು ವೇಳೆ ಜೂನ್ 13ರಂದು ಚುನಾವಣೆ ನಡೆದರೆ, ಮತದಾನ ಮಾಡಲು ಶಾಸಕರು ಆಗಮಿಸಬೇಕಾಗುತ್ತದೆ. ಎಲ್ಲರೂ ಕಡ್ಡಾಯವಾಗಿ ಹಾಜರಿರುವಂತೆ ಸಭೆಯಲ್ಲಿ ಶಾಸಕರಿಗೆ ಸಿಎಂ ಸೂಚನೆ ನೀಡಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರಾದ ಕೆ.ಹೆಚ್. ಮುನಿಯಪ್ಪ, ಎಂ.ಬಿ. ಪಾಟೀಲ್, ಚಲುವರಾಯಸ್ವಾಮಿ, ಹೆಚ್.ಕೆ. ಪಾಟೀಲ್ ಸೇರಿದಂತೆ ಇತರ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
ಸಚಿವ ಬಿ. ನಾಗೇಂದ್ರ ಗೈರು: ವಾಲ್ಮೀಕಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಸಭೆಗೆ ಗೈರಾಗಿದ್ದರು. ಸಭೆಯಲ್ಲಿ ಈ ಬಗ್ಗೆಯೂ ಚರ್ಚೆಯಾಗುವ ನಿರೀಕ್ಷೆ ಇತ್ತು. ಆದರೆ, ಸಚಿವ ನಾಗೇಂದ್ರ ಸಭೆಗೆ ಹಾಜರಾಗಿರಲಿಲ್ಲ.
ಶಾಸಕರಿಗೆ ಸಿಎಂ ಅಭಯ: ಇದೇ ವೇಳೆ, ಲೋಕಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯೂ ಚರ್ಚೆಗೆ ಬಂತು. ಯಾರೂ ಭಯಪಡುವ ಅಗತ್ಯ ಇಲ್ಲ. ರಾಜ್ಯದಲ್ಲಿ ನಾವು ಎರಡಂಕಿ ಪಡೆಯುತ್ತೇವೆ. ಎಲ್ಲರೂ ಚುನಾವಣೆಯಲ್ಲಿ ಸಕ್ರಿಯರಾಗಿ ಕೆಲಸ ಮಾಡಿದ್ದೇವೆ. ನಾವು 20 ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ಶಾಸಕರು, ಸಚಿವರುಗಳಿಗೆ ಸಿಎಂ ಹಾಗೂ ಡಿಸಿಎಂ ಅಭಯ ನೀಡಿದರು ಎನ್ನಲಾಗಿದೆ.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ರಾಯಚೂರಿಗೆ 3 ಸ್ಥಾನ, ಯತೀಂದ್ರ ಸೇರಿ 8 'ಕೈ' ಅಭ್ಯರ್ಥಿಗಳ ಹೆಸರು ಪ್ರಕಟ - Council Election