ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಬಿ.ವಿನಯ್ ಕುಮಾರ್ಗೆ ಟಿಕೆಟ್ ಕೈ ತಪ್ಪಿದೆ ಎಂದು ಅವರೇ ಮಾಧ್ಯಮಗಳ ಮುಂದೆ ಹೇಳಿದ್ದಾರೆ
ಟಿಕೆಟ್ಗಾಗಿ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದ ಜಿ.ಬಿ.ವಿನಯ್ ಕುಮಾರ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬರಿಗೈಯಲ್ಲಿ ದಾವಣಗೆರೆಗೆ ವಾಪಸ್ ಆಗಿದ್ದಾರೆ. ಕಾರ್ಯಕರ್ತರು ಬಂಡಾಯ ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ಆದರೆ ವಿನಯ್ ಕುಮಾರ್ ಕಾದು ನೋಡುವ ತಂತ್ರ ಅನುಸರಿಸಿದ್ದರು. ಆದರೆ ಈಗ ಟಿಕೆಟ್ ಕೈ ತಪ್ಪಿದ್ದಕ್ಕಾಗಿ 20 ದಿನಗಳ ಕಾಲ ಕ್ಷೇತ್ರದ 20 ಹಳ್ಳಿಗಳನ್ನು ಸುತ್ತಿ ಜನಾಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿದ್ದಾರೆ.
ಹೈಕಮಾಂಡ್ ತೀರ್ಮಾನಕ್ಕೆ ಬೇಸರ: ವಿನಯ್ ಕುಮಾರ್ ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ, "ಸಾಮಾನ್ಯ ಜನರಿಂದ ಹಿಡಿದು ಉಪಮುಖ್ಯಮಂತ್ರಿಯವರಿಗೆ ನಿನಗೆ ಟಿಕೆಟ್ ಸಿಕ್ಕಿದ್ದರೆ ನೀನು ಗೆದ್ದುಕೊಂಡು ಬರುತ್ತಿದ್ದೆ ಎನ್ನುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ಇಲ್ಲದಂತಾಗಿದೆ. ಎಲ್ಲಾ ಸರ್ವೆಗಳಲ್ಲೂ ನನ್ನ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿತ್ತು. ಜನಸಾಮಾನ್ಯರು ನನಗೆ ವೋಟು ಕೊಡಬೇಕೆಂದು ಕಾಯುತ್ತಿದ್ದಾರೆ. ಪ್ರತೀ ಕ್ಷೇತ್ರದಲ್ಲಿ 25 ಸಾವಿರ ವೋಟು ತೆಗೆದುಕೊಳ್ಳುವ ಸಾಮರ್ಥ್ಯ ನನಗಿಗೆ. ಆದರೆ ಟಿಕೆಟ್ ಅನೌನ್ಸ್ ಆದ ರೀತಿ ಸರಿ ಇಲ್ಲ. ದಾವಣಗೆರೆಯಲ್ಲಿ ಸಾಮಾಜಿಕ ನ್ಯಾಯ ಸತ್ತು ಹೋಗಿದ್ದು, ಅದಕ್ಕೆ ಮರುಜೀವ ಕೊಡಲು ಮುಂದಾಗಿದ್ದೆ. ಜನಸಾಮಾನ್ಯರ ಕನಸು ಈಡೇರಿಸಲು ನಾನು ದಾವಣಗೆರೆ ಆಯ್ಕೆ ಮಾಡಿಕೊಂಡೆ. ಆದರೆ ಕೇವಲ ಅರ್ಧ ಗಂಟೆಯಲ್ಲಿ ದೆಹಲಿಯಲ್ಲಿ ನನ್ನ ಹೆಸರು ಕ್ಯಾನ್ಸಲ್ ಆಯಿತು" ಎಂದು ಬೇಸರ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿ, "ಪಕ್ಷೇತರವಾಗಿ ನಿಂತು 250 ವೋಟು ಬಂದರೆ ಗೆಲ್ಲಬಹುದು. ಪಕ್ಷೇತರವಾಗಿ ಬಲಾಢ್ಯ ಪಕ್ಷಗಳ ಎದುರು ಗೆಲ್ಲಬೇಕು. ಇನ್ನೊಬ್ಬರನ್ನು ಸೋಲಿಸಲು ನಾನು ಚುನಾವಣೆಗೆ ನಿಲ್ಲೋಲ್ಲ. ನಾನು ಗೆಲ್ಲಬೇಕು ಎಂದು ನಿಲ್ಲುವವನು. ನನ್ನ ಆತ್ಮಸಾಕ್ಷಿ ಕಾಂಗ್ರೆಸ್ಗೆ ಸಪೋರ್ಟ್ ಮಾಡಲು ಮುಂದಾಗುತ್ತಿಲ್ಲ. ದಾವಣಗೆರೆಯಲ್ಲಿ ಕಾಂಗ್ರೆಸ್ಗೆ ಗೆಲ್ಲಲು ತುಂಬಾ ಅವಕಾಶಗಳಿವೆ. ಆದರೆ ನನಗೆ ಟಿಕೆಟ್ ಕೊಟ್ಟಿಲ್ಲ, ಜನಸಾಮಾನ್ಯರು ನನ್ನ ಜೊತೆಗಿದ್ದಾರೆ ಎಂಬುದು ನನಗೆ ಮನವರಿಕೆಯಾಗಬೇಕಿದೆ".
"20 ದಿನಗಳ ಕಾಲ ನಾನು ಜಿಲ್ಲೆಯಾದ್ಯಂತ ಪ್ರವಾಸ ಮಾಡುತ್ತೇನೆ. ಪ್ರತೀ ಹಳ್ಳಿಯಲ್ಲೂ ಜನರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ನಾನು ನಿಂತರೆ ಗೆಲ್ಲಲೇಬೇಕು, ಗೆಲ್ಲದಿದ್ದರೆ ನಮ್ಮನ್ನು ಮೂಲೆಗುಂಪು ಮಾಡುವುದು ಖಚಿತ. ಕ್ಷೇತ್ರದಲ್ಲಿ ಓಡಾಡಿ ನಿರ್ಧಾರ ತೆಗೆದುಕೊಂಡ ಮೇಲೆ ಅದಕ್ಕೆ ಬದ್ಧನಾಗಿರುತ್ತೇನೆ. ಇನ್ನು ಕಳೆದ ದಿನದ ಎಐಸಿಸಿಯಲ್ಲಿ ನನ್ನ ಬಗ್ಗೆ 25 ನಿಮಿಷ ಚರ್ಚೆಯಾಗಿದೆ. ಸಿದ್ದರಾಮಯ್ಯನವರು ನನ್ನ ಪರವಾಗಿ ಹೋರಾಟ ಮಾಡಿದ್ದಾರೆ, ಅವರಿಗೆ ನನ್ನ ಅಭಿನಂದನೆಗಳು" ಎಂದರು.
ಇದನ್ನೂ ಓದಿ: 'ರಾಜ್ಯದಲ್ಲಿ ಬಿಜೆಪಿಯಿಂದ ಮರಾಠರಿಗೆ ಅನ್ಯಾಯ': 10 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕೆ - Maratha Union