ಬೆಂಗಳೂರು: ಈ ಬಾರಿ ಕರ್ನಾಟಕವು ತೀವ್ರ ಬರಗಾಲ ಎದುರಿಸಿದೆ. ಹೀಗಾಗಿ ಜನರು, ಪ್ರಾಣಿ-ಪಕ್ಷಿಗಳೂ ನೀರಿನ ಹಾಹಾಕಾರ ಎದುರಿಸಿದ ಹಲವಾರು ಘಟನೆಗಳು ವರದಿಯಾಗಿವೆ. ರಾಜ್ಯದಲ್ಲಿ ಇತ್ತೀಚಿಗೆ ಸುರಿದ ಮಳೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ನಡುವೆ ಮತ್ತೆ ಕಾವೇರಿ ನೀರಿನ ವಿಚಾರ ರಾಜಕೀಯದಲ್ಲಿ ಸದ್ದು ಮಾಡಿದೆ. ''ನೀರಿನ ಹಾಹಾಕಾರದ ನಡುವೆಯೂ ತಮಿಳುನಾಡಿಗೆ ನೀರು ಬಿಟ್ಟು ರಾಜ್ಯಕ್ಕೆ ದ್ರೋಹವೆಸಗಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಮ್ಮೆ ತಮಿಳುನಾಡಿಗೆ ನೀರು ಹರಿಸಲು ಶರಣಾಗಿ ಕನ್ನಡಿಗರಿಗೆ ದ್ರೋಹ ಬಗೆಯುತ್ತಿದೆ'' ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
''ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿ ಕಾಪಾಡಲು ಮತ್ತೊಮ್ಮೆ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಬರಗಾಲದ ನಡುವೆಯೂ ಮೇ ತಿಂಗಳಿನಲ್ಲಿ ಮತ್ತೊಮ್ಮೆ ತಮಿಳುನಾಡಿಗೆ 2.5 ಟಿಸಿಂಸಿ ನೀರು ಬಿಡಲು ಶರಣಾಗಿದೆ. ರಾಜ್ಯದ ಪರವಾಗಿ ಸಮರ್ಥವಾದ ವಾದ ಮಂಡಿಸಲು ಸಿದ್ಧರಾಗಿ ಎಂದು ಎಷ್ಟು ಬಾರಿ ಎಚ್ಚರಿಸಿದರೂ ನಿರ್ಲಕ್ಷ್ಯಿಸಿ ಕಾಲಹರಣ ಮಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಈಗ ಮತ್ತೊಮ್ಮೆ ಕಾವೇರಿಯ ಮಡಿಲನ್ನು ಬರಿದು ಮಾಡಿ ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಟೀಕಿಸಿದ್ದಾರೆ.
ಇನ್ನು, ರಾಜ್ಯದ ವಿವಿಧ ಹಾಲು ಒಕ್ಕೂಟಗಳಿಗೆ ಹಾಲು ಸರಬರಾಜು ಮಾಡುವ 26 ಲಕ್ಷಕ್ಕೂ ಹೆಚ್ಚು ರೈತರಿಗೆ ಸಲ್ಲಬೇಕಾದ 703 ಕೋಟಿ ರೂಪಾಯಿ ಪ್ರೋತ್ಸಾಹಧನವನ್ನು ಕಳೆದ 8 ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ. ಇದು ರೈತ ವಿರೋಧಿ ಸರ್ಕಾರ. ಸಿಎಂ ಸಿದ್ದರಾಮಯ್ಯನವರೇ, ಚುನಾವಣೆ ಸಂದರ್ಭದಲ್ಲಿ ನಂದಿನಿ ಹೆಸರಲ್ಲಿ ರಾಜಕೀಯ ಮಾಡಿ ಈಗ ಅಮೃತದಂತಹ ಹಾಲು ಕೊಡುವ ರೈತರ ಬಾಳಲ್ಲಿ ವಿಷ ಹಿಂಡುವ ಪಾಪದ ಕೆಲಸ ಮಾಡುತ್ತಿದ್ದೀರಲ್ಲ, ಇದೇನಾ ನೀವು ನಮ್ಮ ನಂದಿನಿ ಬ್ರ್ಯಾಂಡ್ ಉಳಿಸುವ ಪರಿ'' ಎಂದು ಅಶೋಕ್ ಪ್ರಶ್ನಿಸಿದ್ದಾರೆ.
''ನಂದಿನಿ ಸಂಸ್ಥೆಯ ಕೋಟ್ಯಂತರ ರೂಪಾಯಿ ಹಣ ಬಳಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಾಯೋಜಕತ್ವ ಪಡೆಯಲು ನಿಮ್ಮ ಸರ್ಕಾರದ ಬಳಿ ಇದೆ. ಆದರೆ, ನಂದಿನಿ ಬ್ರ್ಯಾಂಡ್ ಅನ್ನು ಕಟ್ಟಿ, ಬೆಳೆಸಿ, ಪೋಷಿಸುತ್ತಿರುವ ಹೈನುಗಾರರಿಗೆ ಸಮಯಕ್ಕೆ ಸರಿಯಾಗಿ ಪ್ರೋತ್ಸಾಹಧನ ನೀಡಲು ತಮ್ಮ ಬಳಿ ಹಣವಿಲ್ಲ ಅಲ್ಲವೇ ಸಿದ್ದರಾಮಯ್ಯನವರೇ? ನಾಡಿನ ರೈತರ ಶಾಪ ತಮಗೆ ತಟ್ಟದೇ ಇರದು'' ಎಂದು ಪ್ರತಿಪಕ್ಷ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಮೇಲಾಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿದ ಕಾನ್ಸ್‌ಟೇಬಲ್: ಪ್ರಕರಣ ಸಿಸಿಬಿಗೆ - Threat From Police Constable