ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬೆಂಗಳೂರು ಪದವೀಧರರ ಕ್ಷೇತ್ರದಿಂದ ರಾಮೋಜಿಗೌಡ ಹಾಗೂ ಶಿಕ್ಷಕರ ಕ್ಷೇತ್ರದಿಂದ ಬಿ.ಟಿ. ಶ್ರೀನಿವಾಸ್ ಬೆಂಗಳೂರಲ್ಲಿ ನಾಮಪತ್ರ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ''ಪದವೀಧರರ ಕ್ಷೇತ್ರದಿಂದ ರಾಮೋಜಿ ಗೌಡ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹಾಗೂ ಶಿಕ್ಷಕರ ಕ್ಷೇತ್ರದಿಂದ ಬಿ.ಟಿ. ಶ್ರೀನಿವಾಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾನು, ಕೆ.ಹೆಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ, ಮಧು ಬಂಗಾರಪ್ಪ, ನಜೀರ್ ಅಹ್ಮದ್ ಎಲ್ಲರೂ ಕೂಡ ಪಕ್ಷದ ಅಭ್ಯರ್ಥಿಗಳ ಜೊತೆಯಲ್ಲಿದ್ದೇವೆ. ನಮ್ಮ ಮಾಹಿತಿ ಪ್ರಕಾರ ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆ'' ಎಂದರು.
''ಈ ಬಾರಿ ಕಾಂಗ್ರೆಸ್ ಪಕ್ಷ ಆರು ತಿಂಗಳು ಮುಂಚಿತವಾಗಿಯೇ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೆವು. ಈಗಾಗಲೇ ಎಲ್ಲಾ ಮತದಾರರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಇಬ್ಬರೂ ಸಮರ್ಥ ಅಭ್ಯರ್ಥಿಗಳು. ಶ್ರೀನಿವಾಸ್ ಅವರು ಶಿಕ್ಷಕರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವರ ಧ್ವನಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಉಳ್ಳವರು. ರಾಮೋಜಿ ಗೌಡ ಅವರೂ ಶಿಕ್ಷಕರಾಗಿ ಕೆಲಸ ಮಾಡಿದ್ದವರು. ಅವರಿಗೂ ಪದವೀಧರರ ಸಮಸ್ಯೆಗಳ ಬಗ್ಗೆ ಅರಿವಿದೆ. ಅವುಗಳನ್ನು ಬಗೆಹರಿಸುವ ಶಕ್ತಿ ಅವರಿಗಿದೆ. ಹಾಗಾಗಿ ಇಬ್ಬರೂ ಅಭ್ಯರ್ಥಿಗಳೂ ಗೆಲ್ಲುತ್ತಾರೆ'' ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ''ನಾವು ಸಮರ್ಥರನ್ನು ಕಣಕ್ಕೆ ಇಳಿಸಿದ್ದೇವೆ. ಬಿಜೆಪಿಯಿಂದ ಆಗದ ಕೆಲಸ ನಮ್ಮ ಕಾಲದಲ್ಲಿ ಆಗಲಿದೆ. ಪ್ರಣಾಳಿಕೆಯಲ್ಲೇ ನಮ್ಮ ವಾಗ್ದಾನ ಹೇಳಿದ್ದೇವೆ. ಶಿಕ್ಷಕರು ಹಾಗೂ ಪದವೀಧರರು ಮತ ನಮಗೆ ಹಾಕುತ್ತಾರೆ'' ಎಂದು ಹೇಳಿದರು.