ರಾಯಚೂರು: ಜಿಲ್ಲೆಯಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ ನಾಯಕ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಕುಮಾರ ನಾಯಕಗಿಂತ ಅವರ ಪತ್ನಿ ಶೀಲಾ ಕುಮಾರ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.
ಜಿ. ಕುಮಾರ ನಾಯಕ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಜಿಲ್ಲಾ ಚುನಾವಣಾಧಿಕಾರಿ ಚಂದ್ರಶೇಖರ ನಾಯಕರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಅಭ್ಯರ್ಥಿಯ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ ಹೊಂದಿಲ್ಲವಾದರೂ, ಪತ್ನಿ ಕೃಷಿ ಭೂಮಿ ಹೊಂದಿದ್ದು, ವಾಣಿಜ್ಯ ಮಳಿಗೆಗಳ ಮಾಲೀಕರಾಗಿದ್ದಾರೆ.
ಜಿ.ಕುಮಾರ ನಾಯಕ ಆಸ್ತಿ ವಿವರ: 50,610 ರೂ. ನಗದು, ಬ್ಯಾಂಕ್ ಖಾತೆಯಲ್ಲಿ 1.44 ಕೋಟಿ ರೂ., ಭವಿಷ್ಯ ನಿಧಿ ಖಾತೆಯಲ್ಲಿ 10.89 ಲಕ್ಷ ರೂ. ಹೊಂದಿದ್ದಾರೆ. 2.58 ಲಕ್ಷ ರೂ. ಮೌಲ್ಯ ದ್ವಿಚಕ್ರ ವಾಹನ, 14.07 ಲಕ್ಷ ರೂ. ಮೌಲ್ಯದ 207 ಗ್ರಾಂ. ಚಿನ್ನಾಭರಣ ಸೇರಿದಂತೆ ಒಟ್ಟು 1.72 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯಲ್ಲಿ 2.40 ಕೋಟಿ ರೂ. ಮೌಲ್ಯದ ಮನೆಯಲ್ಲಿ ಶೇ.50ರಷ್ಟು ಪಾಲು ಹೊಂದಿದ್ದು, ಯಾವುದೇ ಸಾಲವನ್ನು ಹೊಂದಿಲ್ಲ. ಒಟ್ಟು 4.12 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿಯನ್ನು ಹೊಂದಿದ್ದಾರೆ.
ಪತ್ನಿ ಶೀಲಾ ಕುಮಾರ ಆಸ್ತಿ: 74,403 ರೂ. ನಗದು, ನಾನಾ ಬ್ಯಾಂಕ್ ಖಾತೆಗಳಲ್ಲಿ 1.79 ಕೋಟಿ ರೂಪಾಯಿ, 28.23 ಲಕ್ಷ ರೂ.ಗಳನ್ನು ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ. 49.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 2.57 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ.
ಬೆಂಗಳೂರು ಗ್ರಾಮಾಂತರ, ಕೊಪ್ಪಳ ಜಿಲ್ಲೆಯ ತಳಕಲ್ಲಗಳಲ್ಲಿ 1.69 ಕೋಟಿ ರೂ. ಮೌಲ್ಯದ ಕೃಷಿ ಜಮೀನು, ಬೆಂಗಳೂರು ಗ್ರಾಮಾಂತರ, ಮೈಸೂರು ಜಿಲ್ಲೆಯ ಬಸವನಹಳ್ಳಿ, ತೆಲಂಗಾಣದ ಕೋಕಾಪೇಟಾದಲ್ಲಿ 11.23 ಕೋಟಿ ರೂ. ಮೌಲ್ಯ ಕೃಷಿಯೇತರ ಭೂಮಿ, ತೆಲಂಗಾಣದ ಸಿರಿಲಿಂಗಪಲ್ಲಿಯಲ್ಲಿ 2.64 ಕೋಟಿ ರೂ. ಮೌಲ್ಯದ ವಾಣಿಜ್ಯ ಮಳಿಗೆ, ಬೆಂಗಳೂರಿನಲ್ಲಿ 11.13 ಕೋಟಿ ರೂ. ಮೌಲ್ಯದ ಮೂರು ಮನೆಗಳ ಒಡೆತಿಯಾಗಿದ್ದು, ವಿವಿಧ ಬ್ಯಾಂಕ್‌ಲ್ಲಿ 5.04 ಕೋಟಿ ರೂ. ಸಾಲ ಪಡೆದುಕೊಂಡಿರುವುದಾಗಿ ಘೋಷಿಸಿಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಿಂತ ಅವರ ಪತ್ನಿ ಶ್ರೀಮಂತರಾಗಿದ್ದಾರೆ.
ಇನ್ನು ರಾಯಚೂರು ಲೋಕಸಭಾ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾಗಿದ್ದು, ಈಗಾಗಲೇ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಸಹ ಸಾಂಕೇತಿಕವಾಗಿ ಸ್ಥಳೀಯ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರು ಹಾಗೂ ರಾಜ್ಯದ ನಾಯಕರೊಂದಿಗೆ ಮತ್ತೊಮ್ಮೆ ನಾಮಪತ್ರವನ್ನು ಸಲ್ಲಿಸಲಿದ್ದಾರೆ.