ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ನಾಲ್ಕನೇ ಹಾಗೂ ಐದನೇ ಗ್ಯಾರೆಂಟಿಗಳಾದ ಶ್ರಮಿಕ ನ್ಯಾಯ ಮತ್ತು ಹಿಸ್ಸೇದಾರಿ ನ್ಯಾಯ ಯೋಜನೆಗಳನ್ನು ಘೋಷಿಸಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆಗೂಡಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮತ್ತೆರಡು ಗ್ಯಾರೆಂಟಿಗಳನ್ನು ಘೋಷಿಸಿದರು. ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆ ಮುಕ್ತಾಯ ಹಂತದಲ್ಲಿದೆ. ಈಗಾಗಲೇ ಕಿಸಾನ್ ನ್ಯಾಯ, ಯುವ ನ್ಯಾಯ ಹಾಗೂ ನಾರಿ ನ್ಯಾಯ ಗ್ಯಾರೆಂಟಿಗಳನ್ನು ಘೋಷಿಸಲಾಗಿದೆ. ಈ ಮೂರು ಗ್ಯಾರೆಂಟಿಗಳಡಿ ತಲಾ 5 ಅಂಶಗಳಂತೆ 15 ಗ್ಯಾರೆಂಟಿಗಳನ್ನು ನೀಡಿದ್ದೇವೆ. ಇಂದು ಶ್ರಮಿಕ ನ್ಯಾಯ ಹಾಗೂ ಭಾಗಿದಾರಿ ನ್ಯಾಯ ಗ್ಯಾರೆಂಟಿ ಘೋಷಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಶ್ರಮಿಕ ನ್ಯಾಯ ಗ್ಯಾರೆಂಟಿ: ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಾಲ್ಕನೇ ಗ್ಯಾರೆಂಟಿ ಶ್ರಮಿಕ ನ್ಯಾಯ ಯೋಜನೆಯನ್ನು ಜಾರಿಗೆ ತರಲಿದ್ದೇವೆ ಎಂದು ತಿಳಿಸಿದರು. ಕಾಂಗ್ರೆಸ್ ಕಾರ್ಮಿಕರ ಹಕ್ಕನ್ನು ಮೇಲಕ್ಕೆತ್ತುವ ಕೆಲಸ ಮಾಡಿದೆ. ಅನೇಕ ಕಾಯ್ದೆಗಳ ಮೂಲಕ ಕಾರ್ಮಿಕರಿಗೆ ಸಮಾಜಿಕ ನ್ಯಾಯ, ಸೇವಾ ಭದ್ರತೆ ನೀಡಿದ್ದೇವೆ. ಒಂದು ದಶಕದಿಂದ ಮೋದಿ ಅವರು ಕಾರ್ಮಿಕ ಕಾನೂನನ್ನು ದುರ್ಬಲಗೊಳಿಸಿದ್ದಾರೆ. ಕಾರ್ಮಿಕ ಕಲ್ಯಾಣ ಯೋಜನೆಗಳನ್ನೂ ದುರ್ಬಲಗೊಳಿಸಿದ್ದಾರೆ. ನಾವು ಒಕ್ಕೂಟ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿದ್ದೇವೆ. ರಾಜ್ಯಗಳಿಗೆ ಕೇಂದ್ರದ ಅನುದಾನ ಸಕಾಲದಲ್ಲಿ ಪಾವತಿಯಾಗಬೇಕು. ಆದ್ರೀಗ ಹೆಚ್ಚಿನ ಸಿಎಂಗಳು ಅನುದಾನಕ್ಕಾಗಿ ಕೇಂದ್ರದ ಮುಂದೆ ಬೇಡುವ ಸ್ಥಿತಿ ಬಂದಿದೆ. ನರೇಗಾ ಯೋಜನೆ ಈಗ ಜಾರಿಗೆ ಬಂದಿಲ್ಲ. ಮಹಾರಾಷ್ಟ್ರದಲ್ಲಿ ಇದನ್ನು ಜಾರಿಗೆ ತಂದಿದ್ದೇವೆ. ನರೇಗಾದಡಿ 100 ಮಾನವ ದಿನಗಳಿಗೆ ಕೆಲಸಕ್ಕೆ ಹಣ ನೀಡುತ್ತಿಲ್ಲ ಎಂದು ತಿಳಿಸಿದರು.
ಶ್ರಮಿಕ ಯೋಜನೆಯಡಿ ಸ್ವಾಸ್ಥ್ಯ ಹಕ್ಕನ್ನು ನೀಡಲಿದ್ದೇವೆ. ಈ ಮೂಲಕ ಶ್ರಮಿಕರಿಗೆ ಜಾಗತಿಕ ಆರೋಗ್ಯ ನಿಗಾ, ಉಚಿತ ಮೆಡಿಸಿನ್ಸ್, ಚಿಕಿತ್ಸೆ, ಅಗತ್ಯ ಡಯೋಗ್ನಿಸ್ಟಿಕ್, ಶಸ್ತ್ರಚಿಕಿತ್ಸೆ ಸೇರಿ ವಿವಿಧ ವೈದ್ಯಕೀಯ ನೆರವನ್ನು ನೀಡಲಿದ್ದೇವೆ. ಶ್ರಮಿಕ್ ನ್ಯಾಯಶ್ರಮ ಸಮ್ಮಾನ್ ನೀಡಲಿದ್ದೇವೆ. ಅಸಂಘಟಿತ ಕಾರ್ಮಿಕರಿಗೆ ಕನಿಷ್ಟ 400 ರೂ. ವೇತನ ನೀಡುತ್ತೇವೆ. ಶ್ರಮಿಕ್ ನ್ಯಾಯ ಗ್ಯಾರೆಂಟಿಯಡಿ ನಗರ ಉದ್ಯೋಗ ಗ್ಯಾರೆಂಟಿ ಕಾಯ್ದೆ ಜಾರಿಗೆ ತರಲಿದ್ದೇವೆ. ಸಮಗ್ರ ಸಮಾಜಿಕ ಭದ್ರತೆ ಜಾರಿಗೆ ತರಲಿದ್ದೇವೆ. ಆ ಮೂಲಕ ಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ ಹಾಗೂ ಅಪಘಾತ ವಿಮೆಗಳನ್ನು ಕಲ್ಪಿಸಲಿದ್ದೇವೆ. ಕಾರ್ಮಿಕ ವಿರೋಧಿ ಕಾನೂನುಗಳನ್ನು ಸಮಗ್ರವಾಗಿ ಪರಿಶೀಲಿಸಿ, ಕಾರ್ಮಿಕರ ಹಕ್ಕನ್ನು ರಕ್ಷಿಸುವ ಸಂಬಂಧ ತಿದ್ದುಪಡಿ ತರಲಿದ್ದೇವೆ ಎಂದರು.
ಹಿಸ್ಸೇದಾರ್ ನ್ಯಾಯ ಗ್ಯಾರೆಂಟಿ: ಐದನೇ ಗ್ಯಾರೆಂಟಿಯಾದ ಹಿಸ್ಸೇದಾರ್ ನ್ಯಾಯ ಗ್ಯಾರೆಂಟಿಯನ್ನು ಘೋಷಣೆ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು. ಬಡವರು ಹಾಗೂ ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದೆ. ಹೀಗಾಗಿ ದೇಶದ ಸಂಪತ್ತನ್ನು ಸಮಾನವಾಗಿ ಹಂಚುವ ನಿಟ್ಟಿನಲ್ಲಿ ಜಾತಿ ಸಮೀಕ್ಷೆ ಮಾಡುವ ಮೂಲಕ ಆರ್ಥಿಕ ಪರಿಸ್ಥಿತಿ ಪರಿಶೀಲಿಸುತ್ತೇವೆ. ರಾಜ್ಯದಲ್ಲಿ ಜಾತಿ ಸಮೀಕ್ಷೆ ವರದಿ ಪಡೆದಿದ್ದಾರೆ. ಸಣ್ಣ ದೋಷ ಇದ್ದರೆ ಅದನ್ನು ಸರಿಪಡಿಸುತ್ತೇವೆ. ಆದರೆ ಮೋದಿ ಜಾತಿ ಸಮೀಕ್ಷೆಯನ್ನು ಒಪ್ಪುತ್ತಿಲ್ಲ ಎಮದು ಆರೋಪಿಸಿದರು.
ಇದೇ ಗ್ಯಾರಂಟಿಯಡಿ ಶೇ,50ರಷ್ಟು ಮೀಸಲಾತಿ ಮಿತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂವಿಧಾನಿಕ ತಿದ್ದುಪಡಿ ಮಾಡಲಿದ್ದೇವೆ. ಜೊತೆಗೆ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯನ್ನು ಪುನಶ್ಚೇತನಗೊಳಿಸಲಿದ್ದೇವೆ. ಆದಿವಾಸಿ ಅರಣ್ಯ ಹಕ್ಕು ರಕ್ಷಣೆಯ ಗ್ಯಾರೆಂಟಿಯನ್ನು ಕಲ್ಪಿಸುತ್ತೇವೆ. ಜಲ, ಕಾಡು, ಜಮೀನು ಕಾನೂನು ಹಕ್ಕನ್ನು ನೀಡಲಿದ್ದೇವೆ. ಆ ಮೂಲಕ ಜಲ, ಕಾಡು, ಜಮೀನನ್ನು ಸಂರಕ್ಷಿಸಲಿದ್ದೇವೆ. ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ಆದಿವಾಸಿಗಳಿಗೆ ಸುರಕ್ಷತೆ ನೀಡಲಿದ್ದೇವೆ. ಎಂಎಸ್ಪಿ ಗ್ಯಾರೆಂಟಿಯನ್ನು ಸಣ್ಣ ಅರಣ್ಯ ಉತ್ಪನ್ನಗಳಿಗೂ ನೀಡಲಿದ್ದೇವೆ. ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ ಹಾಗೂ ಭೂ ಸ್ವಾಧೀನ ಕಾಯ್ದೆಯಲ್ಲಿನ ಎಲ್ಲಾ ಬುಡಕಟ್ಟು ಜನಾಂಗ ವಿರೋಧಿ ಕಾನೂನನ್ನು ಹಿಂಪಡೆಯಲಾಗುವುದು. ಆದಿವಾಸಿಗಳ ಸಾಂಸ್ಕೃತಿಕ ಹಕ್ಕಿನ ರಕ್ಷಣೆ ಮತ್ತು ಸ್ವ-ಆಡಳಿತದ ಗ್ಯಾರೆಂಟಿಯನ್ನು ಕಲ್ಪಿಸಲಿದ್ದೇವೆ. ಎಸ್ ಟಿ ವರ್ಗದವರು ಹೆಚ್ಚಿರುವ ಪ್ರದೇಶವನ್ನು ಅಧಿಸೂಚಿತ ಪ್ರದೇಶವನ್ನಾಗಿ ಅಧಿಸೂಚಿಸಲಿದ್ದೇವೆ ಎಂದರು.
ಇದನ್ನೂ ಓದಿ: ಕೆ.ಎಸ್ ಈಶ್ವರಪ್ಪ ಪಕ್ಷದ ನಿರ್ಣಯ ಮಾನ್ಯ ಮಾಡುತ್ತಾರೆ: ಪ್ರಹ್ಲಾದ್ ಜೋಶಿ
ಐದು ಗ್ಯಾರೆಂಟಿಗಳಲ್ಲಿನ ತಲಾ ಐದು ಅಂಶಗಳ 25 ಗ್ಯಾರೆಂಟಿಗಳನ್ನು ನಿಗದಿತ ಸಮಯದಲ್ಲಿ ನಾವು ಪೂರ್ಣಗೊಳಿಸಲಿದ್ದೇವೆ. ಮೋದಿ ಗ್ಯಾರೆಂಟಿಗಳು ಇನ್ನೂ ಜಾರಿಯಾಗಿಲ್ಲ. ಜನರ ಖಾತೆಗೆ 15 ಲಕ್ಷ ರೂ. ಇನ್ನೂ ನೀಡಿಲ್ಲ. ರೈತರ ಆದಾಯವನ್ನು ದ್ವಿಗುಣ ಮಾಡಿಲ್ಲ. ಪ್ರಧಾನಿ ಮೋದಿ ಹೇಳಿರುವುದು ಶೇ.70ರಷ್ಟು ಸುಳ್ಳಾಗಿದೆ. ಬುಲೆಟ್ ರೈಲು ಎಲ್ಲಿದೆ. 10 ವರ್ಷ ಆಗಿದೆ. ಇನ್ನೂ ಬುಲೆಟ್ ರೈಲು ಬಂದಿಲ್ಲ. ನಮ್ಮ ನಾಯಕರು ಸುಳ್ಳು ಹೇಳಲು ಸಿದ್ಧರಿಲ್ಲ. ಆದರೆ ಮೋದಿ ಸುಳ್ಳು ಹೇಳಲು ಹೆದರಲ್ಲ. ಹಳೇ ರೈಲಿಗೆ ಕಲರ್ ಹಾಕಿ, ವಂದೇ ಭಾರತ್ ರೈಲು ಬಿಡುತ್ತಿದ್ದಾರೆ. ರೈಲು ಹಳಿ ನಾವು ಮಾಡಿದ್ದೇವೆ. 27 ಹೊಸ ರೈಲುಗಳನ್ನು ನಾವು ನೀಡಿದ್ದೇವೆ. ಚುನಾವಣಾ ಪ್ರಣಾಳಿಕೆ ಸಿದ್ಧ ಪಡಿಸುತ್ತಿದ್ದೇವೆ. ಅನುಷ್ಠಾನವಾಗುವಂತ ಗ್ಯಾರೆಂಟಿಗಳನ್ನು ನಾವು ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.