ಹಾವೇರಿ: 'ನನ್ನ ಮೇಲೆ ಕ್ರಮ ತೆಗದುಕೊಂಡರೆ ನೀವು ಸುಮ್ನೆ ಇರ್ತೀರಾ?. ನಮಗೆ ಮತದಾರರೇ ದೇವರುಗಳು' ಎಂದು ಸವಣೂರು ಪಟ್ಟಣದಲ್ಲಿ ನಡೆದ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.
"ಉಪಚುನಾವಣೆಗೆ ಪಠಾಣ್ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ನಾವೇ ಗೆದ್ದ ಹಾಗೆ ಅಂತ ಬಿಜೆಪಿಯವರು ಪ್ರಚಾರ ಮಾಡಲು ಶುರು ಮಾಡಿದರು. ಆದರೆ ನಾನು 'ನಾವೇ ಗೆಲ್ಲುತ್ತೇವೆ, ಮತದಾರರು ನಮ್ಮ ಕೈ ಹಿಡಿಯುತ್ತಾರೆ. ನಾವು ನುಡಿದಂತೆ ನಡೆದಿದ್ದೇವೆ. 5 ಗ್ಯಾರಂಟಿ ಜಾರಿ ಮಾಡಿದ್ದೇವೆ. ಅನೇಕ ವರ್ಷಗಳಿಂದ ಭಾವೈಕ್ಯಗೆ ಕಾಪಾಡಿಕೊಂಡು ಬಂದ ಕ್ಷೇತ್ರ ಇದು. ನಾನು ಮೂರು ದಿನ ಪ್ರಚಾರ ಮಾಡಿದ್ದೆ. ನಾವು ಮೂರೂ ಕ್ಷೇತ್ರ ಗೆದ್ದಿದ್ದೇವೆ" ಎಂದು ಸಿಎಂ ತಮ್ಮ ಪಕ್ಷದ ಗೆಲುವನ್ನು ಮತ್ತೊಮ್ಮೆ ಸಂಭ್ರಮಿಸಿದರು.
"ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ 10 ಕೆ.ಜಿ. ಅಕ್ಕಿ ಕೊಡುತ್ತಾ ಇರುವುದು. ಇದೇ ಕೇಂದ್ರ ಸರ್ಕಾರ ಅಕ್ಕಿ ಇಟ್ಟುಕೊಂಡೂ ಕೂಡಾ ಕೊಡಲಿಲ್ಲ. ಯಾವುದಾದರೂ ರಾಜ್ಯದಲ್ಲಿ ಬಿಜೆಪಿ 10 ಕೆ.ಜಿ. ಅಕ್ಕಿ ಕೊಡುತ್ತಿದ್ದಾರೆ ಅಂದರೆ ಈಗಲೇ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಅರ್ಹ ಬಿಪಿಎಲ್ ಕಾರ್ಡುದಾರರಿಗೆ 1 ಕೆ.ಜಿ ಅಕ್ಕಿನೂ ಕಡಿಮೆ ಮಾಡಲ್ಲ. ಬಿ.ಪಿ.ಎಲ್ ಕಾರ್ಡ್ ಕಿತ್ತುಕೊಳ್ಳಲ್ಲ. ಅರ್ಹತೆ ಇರುವ ಎಲ್ಲರಿಗೂ ಅಕ್ಕಿ ಕೊಡುತ್ತೇವೆ. ಈ ಚುನಾವಣೆ ಆದ ಮೇಲೆ ಎಲ್ಲಾ ಗ್ಯಾರಂಟಿ ಯೋಜನೆ ನಿಲ್ಲಿಸಿ ಬಿಡುತ್ತಾರೆ ಅಂತ ಅಪಪ್ರಚಾರ ಮಾಡಿದರು. ಯಾರು ಬಡವರಿದ್ದಾರೆ, ಯಾರು ಎರಡು ಹೊತ್ತು ಊಟ ಮಾಡುತ್ತಾರೆ ಅವರ ಕಾರ್ಡ್ ಕಿತ್ತುಕೊಳ್ಳಲ್ಲ".
"ನ್ಯಾಯಯುತವಾಗಿ ಬರಬೇಕಾದ ಹಣ ನಮಗೆ ಕೊಡುತ್ತಾ ಇಲ್ಲ. ನಮ್ಮ ತೆರಿಗೆ ಪಾಲು ಸರಿಯಾಗಿ ಕೊಡುತ್ತಿಲ್ಲ. ನಾಲ್ಕೂವರೆ ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಆದರೆ ನಮಗೆ ಬರುತ್ತಿರುವುದು 60,000 ಕೋಟಿ ರೂ. ಮಾತ್ರ. ನರೇಂದ್ರ ಮೋದಿಜಿ ಇದು ನ್ಯಾಯನಾ?. 15ನೇ ಹಣಕಾಸಿನಲ್ಲಿ 11,450 ಕೋಟಿ ಕೊಡಬೇಕು. ಒಂದು ರೂಪಾಯಿ ಹಣ ಕೊಡಲಿಲ್ಲ. ಬಸವರಾಜ ಬೊಮ್ಮಾಯಿ ಯಾವತ್ತಾದರೂ ಇದನ್ನು ಕೇಳಿದ್ದಾರಾ?" ಎಂದು ಪ್ರಶ್ನಿಸಿದರು.
"ಎಷ್ಟೇ ಹಣಕಾಸಿನ ತೊಂದರೆ ಕೊಟ್ಟರೂ ಬಡವರ ಯೋಜನೆಗಳು ನಿಲ್ಲಲ್ಲ. ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಿದರು. ಆದರೆ ಕರ್ನಾಟಕದ ಜನತೆ ಆಶೀರ್ವಾದ ಇರುವವರೆಗೂ ನನ್ನನ್ನು ಜಗ್ಗಿಸಲು ಆಗಲ್ಲ. ಅವರೇನಾದರೂ ನನ್ನ ಮೇಲೆ ಕ್ರಮ ತೆಗದುಕೊಂಡರೆ ನೀವು ಸುಮ್ನೆ ಇರ್ತೀರಾ? ಅಭಿಮಾನಿಗಳೇ ನಮ್ಮ ದೇವರು ಅಂತ ರಾಜ್ಕುಮಾರ್ ಹೇಳುತ್ತಾ ಇದ್ದರು. ನಮಗೆ ಮತದಾರರೇ ದೇವರುಗಳು" ಎಂದು ಪುನರುಚ್ಚರಿಸಿದರು.
ಡಿಸಿಎಂ ಕೃತಜ್ಞತೆ: ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಷಣ ಮಾಡಿದರು. ಈ ವೇಳೆ "ಉಪಚುನಾವಣೆಯಲ್ಲಿ ಬಿಜೆಪಿ ಮುಕ್ತ ಜಿಲ್ಲೆ ಮಾಡಿ ಸಂದೇಶ ರವಾನೆ ಮಾಡಿದ್ದೀರಿ. ಇದು ಪಠಾಣ್ರ ಕ್ಷೇತ್ರವಲ್ಲ. ಇದು ಸಿದ್ದರಾಮಯ್ಯನವರ ಕ್ಷೇತ್ರ ಆಗಿ ಪರಿವರ್ತನೆ ಆಗುತ್ತದೆ. ಕಾರಣ ಅಷ್ಟು ಜವಾಬ್ದಾರಿ ಇದೆ. ಶಿಗ್ಗಾಂವಿ ಕ್ಷೇತ್ರ ಅಭಿವೃದ್ಧಿ ಮಾಡಬೇಕಿದೆ. ಮೂರು ಚುನಾವಣೆಯಲ್ಲಿ ಒಂದು ದಳ, ಒಂದು ಬಿಜೆಪಿ, ಒಂದು ಕಾಂಗ್ರೆಸ್ ಗೆಲ್ಲುತ್ತೆ ಅಂತ ಮಾಧ್ಯಮಗಳಲ್ಲಿ ಸಮೀಕ್ಷೆ ಬಂದಿತ್ತು. ನಾನು ಸಮೀಕ್ಷೆಗಳನ್ನು ಒಪ್ಪಲ್ಲ. ಮೂರಕ್ಕೆ ಮೂರು ಕ್ಷೇತ್ರ ಗೆದ್ದಿದ್ದೇವೆ".
"ಎಲ್ಲಾ ಧರ್ಮ ಜಾತಿ ನಮಗೆ ಒಂದೇ. ಬಸವಣ್ಣನವರು ಹುಟ್ಟಿದ ದಿನವೇ (ಬಸವ ಜಯಂತಿ) ಸಿಎಂ ಸಿದ್ದರಾಮಯ್ಯ ಅವರು ಜವಾಬ್ದಾರಿ ತೆಗೆದುಕೊಂಡರು. ಗ್ಯಾರಂಟಿ ಯಾರೂ ಮುಟ್ಟಲು ಸಾಧ್ಯವಿಲ್ಲ. ಉಳುವವನಿಗೇ ಭೂಮಿ ಕಾರ್ಯಕ್ರಮ ನಿಲ್ಲಿಸಲು ಆಯಿತಾ? ಹಾಗೆ ಕಾಂಗ್ರೆಸ್ನ 5 ಗ್ಯಾರಂಟಿಗಳನ್ನೂ ನಿಲ್ಲಿಸಲು ಆಗಲ್ಲ. 2028ರಲ್ಲೂ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ" ಎಂಬ ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ ಪರಿಶೀಲನೆಗೆ ಸಮಿತಿ ರಚನೆ, ಔಷಧ ಕಂಪನಿ ಮೇಲೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ