ಬೆಂಗಳೂರು: ಪರಿವರ್ತಿತ ಹಾಗೂ ಅಭಿವೃದ್ಧಿಗೊಳ್ಳದ ಭೂಮಿಯನ್ನು ಆರ್ಟಿಸಿ ಆಧಾರದಲ್ಲಿ ನೋಂದಣಿ ಮಾಡುವ ಹಾಗೂ ಸಂಬಂಧಿತ ಯೋಜನಾ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳಲ್ಲಿನ ರಸ್ತೆ, ಉದ್ಯಾನವನ ಹಾಗೂ ಆಟದ ಮೈದಾನಗಳಿಗೂ ಇ-ಖಾತಾ ಮಾಡಿಕೊಳ್ಳುವ ಸಂಬಂಧ ಇದ್ದ ಕೆಲ ಗೊಂದಲಗಳಿಗೆ ಪರಿಹಾರ ದೊರೆತಿದೆ.
ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ, ಪೌರಾಡಳಿತ ಇಲಾಖೆ ಒಟ್ಟಾಗಿ ಕೆಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ನಗರ ಅಭಿವೃದ್ಧಿಗೆ ಸಂಬಂಧಿಸಿ ಇ-ಖಾತಾ ಹಾಗೂ ನೋಂದಣಿಗೆ ಸಂಬಂಧಿಸಿದ ಕೆಲ ಪ್ರಮುಖ ಗೊಂದಲಗಳಿಗೆ ತೆರೆ ಎಳೆಯಲು ಯತ್ನಿಸಿದೆ.
ಪರಿವರ್ತಿತ, ಅಭಿವೃದ್ಧಿಗೊಳ್ಳದ ಭೂಮಿಯನ್ನು ಆರ್ಟಿಸಿ ಆಧಾರದಲ್ಲಿ ನೋಂದಣಿ: ಭೂಪರಿವರ್ತನೆಯ ನಂತರದಲ್ಲಿ ಭೂಪರಿವರ್ತಿತ ಜಮೀನುಗಳ ಪಹಣಿಗಳಿಗೆ ಭೂಕಂದಾಯ ಕಡಿತಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ/ನಗರ ಸ್ಥಳೀಯ ಸಂಸ್ಥೆಗಳು/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಆಸ್ತಿ ಗುರುತಿನ ಸಂಖ್ಯೆಯನ್ನು (ಇ-ಖಾತಾ) ನೀಡಬೇಕಾಗಿರುತ್ತದೆ.
ಆದರೆ ಭೂ ಪರಿವರ್ತನೆ ನಂತರ ಆಸ್ತಿ ಗುರುತಿನ ಸಂಖ್ಯೆ (ಇ-ಖಾತಾ) ನೀಡಲು ಕಾಲಾವಕಾಶ ಬೇಕಾಗಿರುತ್ತದೆ. ಹಾಗೂ ಕೆಲವೊಮ್ಮೆ ಸಾರ್ವಜನಿಕರು ಇ-ಖಾತಾ ಮಾಡಲು ಕೋರಿ ಅರ್ಜಿ ಸಲ್ಲಿಸದೇ ಹಾಗೇಯೇ ಮುಂದುವರೆಸುವ ಸಂದರ್ಭಗಳಲ್ಲಿ ಸಾರ್ವಜನಿಕರು ಪಹಣಿ ಅಥವಾ ಇ-ಖಾತಾ ಆಧಾರದ ಮೇಲೆ ಯಾವುದೇ ವಹಿವಾಟು ಮಾಡಲು ಸಾಧ್ಯವಿರುವುದಿಲ್ಲ. ಇಂತಹ ಜಮೀನುಗಳನ್ನು ಭೂಪರಿವರ್ತಿತ ಅಭಿವೃದ್ಧಿಯಾಗದೇ ಇರುವ (Converted but Undeveloped) ಜಮೀನುಗಳೆಂದು ಪರಿಗಣಿಸಲಾಗುವುದು.
ಕಾವೇರಿ 2.0 ತಂತ್ರಾಂಶ ಹಾಗೂ ಇ-ಖಾತೆ ಸಂಯೋಜನೆಗೊಂಡ ನಂತರ ನೋಂದಣಿ ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇನ್ನುಮುಂದೆ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡು ಅಭಿವೃದ್ಧಿಯಾಗದೇ ಇರುವ ಜಮೀನುಗಳ ಪಹಣಿಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಸದರಿ ಮಾಹಿತಿಯು ಲಭ್ಯವಾಗುವಂತೆ ಭೂಮಿ ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಮಾರ್ಪಾಡು ಮಾಡಲಾಗಿದೆ. ಆದರೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಿಕೊಳ್ಳುವ ಸಂದರ್ಭದಲ್ಲಿ ಕೃಷಿ ಜಮೀನೆಂದು ಪರಿಗಣಿಸದೇ ಕೃಷಿಯೇತರ ಅಭಿವೃದ್ಧಿಯಾಗದೇ ಇರುವ ಜಮೀನುಗಳಿಗೆ ನಿರ್ಧಿರಿಸುವ ಪ್ರಚಲಿತ ಮಾರುಕಟ್ಟೆ ಮೌಲ್ಯವನ್ನೇ ವಿಧಿಸಲು ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ.
ಮುಂದುವರೆದು ಭೂಮಿ ಇ-ಸ್ವತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆಯು ಅಭಿವೃದ್ಧಿ ಹಂತದಲ್ಲಿದ್ದು ಯಾವುದೇ ಒಂದು ಸರ್ವೆ ನಂಬರಿನಲ್ಲಿ ಭೂಪರಿವರ್ತನೆಯಾದ ನಂತರ ಆ ಸರ್ವೆ ನಂಬರ್ ಮೇಲೆ ಇ-ಸ್ವತ್ತು ಹಾಗೂ ಇ-ಆಸ್ತಿ ಗುರುತಿನ ಸಂಖ್ಯೆ ಸೃಜನೆಯಾಗಿದ್ದಲ್ಲಿ, ಅಂತಹ ಆಸ್ತಿ ಗುರುತಿನ ಸಂಖ್ಯೆಯ ಮಾಹಿತಿಯನ್ನು ಇ-ಸ್ವತ್ತು ಹಾಗೂ ಇ- ಆಸ್ತಿ ತಂತ್ರಾಂಶದ ಮೂಲಕ ಭೂಮಿ ತಂತ್ರಾಂಶಕ್ಕೆ ರವಾನಿಸಲಾಗುತ್ತದೆ. ಇಂತಹ ಜಮೀನುಗಳಿಗೆ ಇ-ಸ್ವತ್ತು ಹಾಗೂ ಇ-ಆಸ್ತಿ ಗುರುತಿನ ಸಂಖ್ಯೆಯ ಆಧಾರದ ಮೇಲೆ ನೋಂದಣಿ ವಹಿವಾಟು ನಡೆಸಬೇಕಾಗಿದ್ದು, ಭೂಮಿ ತಂತ್ರಾಂಶದ ಪಹಣಿ ಆಧಾರದ ಮೇಲೆ ನೋಂದಣಿ ವಹಿವಾಟು ನಡೆಸಲು ತಂತ್ರಾಂಶದಲ್ಲಿ ಅನುಮತಿಸಲಾಗುವುದಿಲ್ಲ
ಪರಿತ್ಯಾಜನಾ ಪತ್ರಗಳ ನೋಂದಣಿ: ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಆಗಿರುವ ಬಡಾವಣೆಗಳಲ್ಲಿ ರಸ್ತೆ, ಆಟದ ಮೈದಾನ, ಉದ್ಯಾನಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಪರಿತ್ಯಾಜ ಮಾಡುವುದು ಅವಶ್ಯಕ. ಆದರೆ, ಇವುಗಳಿಗೆ ಖಾತೆ ನೀಡುವ ಬಗ್ಗೆ ಗೊಂದಲವಿದ್ದರಿಂದ ಈ ಪ್ರಕ್ರಿಯೆ ಸ್ಥಗಿತವಾಗಿ, ಅನುಮೋದನೆಗೊಂಡಿರುವ ಬಡಾವಣೆಗಳಲ್ಲಿ ನಿವೇಶನಗಳ ಮಾರಾಟಕ್ಕೆ ಹಿನ್ನಡೆಯಾಗಿದ್ದನ್ನು ಸರ್ಕಾರ ಆದ್ಯತೆಯ ಮೇಲೆ ಪರಿಗಣಿಸಿ ಈ ಸಮಸ್ಯೆಗೆ ಪರಿಹಾರವನ್ನು ನೀಡುತ್ತಿದೆ.
ಇಂತಹ ಬಡಾವಣೆಗಳಲ್ಲಿ ಮೂಲ ಮಾಲೀಕರ/ಅಭಿವೃದ್ಧಿದಾರರ (Developer) ಹೆಸರಿಗೆ ರಸ್ತೆ ಉದ್ಯಾನಗಳಿಗೆ ಖಾತೆ ಸೃಜನೆ ಮಾಡಿ, ಅವರಿಂದ ಸ್ಥಳೀಯ ಸಂಸ್ಥೆಗೆ ನೋಂದಣಿ ಮುಖಾಂತರ ರಸ್ತೆ, ಉದ್ಯಾನಗಳನ್ನು ವರ್ಗಾಯಿಸಲು ಸಾಧ್ಯವಾಗುವ ರೀತಿ ಪೌರಾಡಳಿತ ನಿರ್ದೇಶನಾಲಯ (DMA) 8-11-2024 ರಂದು ಸರ್ಕಾರಿ ಆದೇಶವನ್ನು ಹೊರಡಿಸಿದೆ. ಇದೇ ರೀತಿಯಲ್ಲಿ ಬಿಬಿಎಂಪಿ ಮತ್ತು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಸಹ ಪರಿಹಾರವನ್ನು ನೀಡಲು ತೀರ್ಮಾನಿಸಲಾಗಿದೆ. ಇದಕ್ಕೆ ತಕ್ಕ ಬದಲಾವಣೆಗಳನ್ನು ಇ-ಖಾತಾ ಸಿಸ್ಟಂನಲ್ಲೂ ಮಾಡಿ ಈ ಸಮಸ್ಯೆಯನ್ನು ಪರಿಹರಿಸಲಾಗುತ್ತಿದೆ.
ಇದನ್ನೂ ಓದಿ: ಇ-ಖಾತೆ ವಿತರಣೆ ಸಮಸ್ಯೆ ಬಗ್ಗೆ ಸಚಿವರ ಸಭೆ: ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚನೆ