ಬೆಂಗಳೂರು: ವಿಧಾನಸಭೆ ಅಧಿವೇಶನದ ಕಾರ್ಯಕಲಾಪವನ್ನು ಮತ್ತೆ ಒಂದು ದಿನ ವಿಸ್ತರಣೆ ಮಾಡಲಾಗಿದೆ. ಫೆಬ್ರವರಿ 23ರ ಶುಕ್ರವಾರದಂದು ಮುಗಿಯಬೇಕಿದ್ದ ಅಧಿವೇಶನವನ್ನು ಒಂದು ದಿನ ವಿಸ್ತರಣೆ ಮಾಡಿ ಸೋಮವಾರಕ್ಕೆ ಮುಂದೂಡಲಾಗಿತ್ತು. ಆದರೆ ಭಾನುವಾರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯ್ಕ ಅವರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಇಂದು ವಿಧಾನಸಭೆಯಲ್ಲಿ ಸಂತಾಪ ಸೂಚನೆ ಸಲ್ಲಿಸಿ ಯಾವುದೇ ಕಾರ್ಯಕಲಾಪಗಳನ್ನು ನಡೆಸದೆ ಅಧಿವೇಶನವನ್ನು ಬುಧವಾರಕ್ಕೆ ಮುಂದೂಡಲಾಯಿತು.
ಅಧಿವೇಶನ ಮುಂದೂಡುವ ಮುನ್ನ ಮಾತನಾಡಿದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು, ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಬೆಳಗ್ಗೆ 9.30ಕ್ಕೆ 2024-25ನೇ ಸಾಲಿನ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ ಎಂದು ತಿಳಿಸಿ, ಸದನವನ್ನು ಬುಧವಾರ ಬೆಳಗ್ಗೆ 9.15ಕ್ಕೆ ಮುಂದೂಡುವುದಾಗಿ ಪ್ರಕಟಿಸಿದರು.
ವಿಧಾನಪರಿಷತ್ ಕಲಾಪ ಮುಂದೂಡಿಕೆ: ಹೃದಯಾಘಾತದಿಂದ ನಿಧನರಾದ ಸುರಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ವಿಧಾನ ಪರಿಷತ್ನಲ್ಲಿ ಸಂತಾಪ ಸೂಚಿಸಲಾಗಿದೆ. ಪಕ್ಷಾತೀತವಾಗಿ ವೆಂಕಟಪ್ಪ ನಾಯಕರ ಕೊಡುಗೆಯನ್ನು ಸ್ಮರಿಸಲಾಯಿತು. ನಂತರ ಕಲಾಪವನ್ನು ಫೆಬ್ರವರಿ 28ರ ಬೆಳಗ್ಗೆ 9.30ಕ್ಕೆ ಮುಂದೂಡಿಕೆ ಮಾಡಲಾಯಿತು.
ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನಕ್ಕೆ ಸಂತಾಪ ಸೂಚನೆ ಮಂಡಿಸಲಾಯಿತು. ಸಂತಾಪ ಸೂಚನೆ ಓದಿದ ಸಭಾಪತಿ ಬಸವರಾಜ್ ಹೊರಟ್ಟಿ ಅಗಲಿದ ಶಾಸಕರ ಕೊಡುಗೆಯನ್ನು ಸ್ಮರಿಸಿದರು. ನಂತರ ಸರ್ಕಾರದ ಪರವಾಗಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಸಂತಾಪ ಸೂಚನೆ ಬೆಂಬಲಿಸಿ ಮಾತನಾಡಿದರು.
"ರಾಜಾ ವೆಂಕಟಪ್ಪ ನಾಯಕ ಸಹೃದಯ ವ್ಯಕ್ತಿತ್ವ. ಸರಳ, ನಿಷ್ಠರು. ರಾಜಕಾರಣದಲ್ಲಿ ಅಷ್ಟು ನಿಷ್ಠರು ಕಡಿಮೆ. ಏನೇ ಇದ್ದರೂ ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಿದ್ದರು. ತಮ್ಮ ನಾಯಕರ ಮೇಲೆ ನಿಷ್ಠೆ ಇಟ್ಟಿದ್ದರು. ಪಾರ್ಲಿಮೆಂಟ್ ಚುನಾವಣೆಗೆ ನಿಂತಿದ್ದರು. 30 ಸಾವಿರ ಮತಗಳಿಂದ ಸೋತಿದ್ದರು. ಅದಕ್ಕೆ ಕಾರಣ ಹಲವು. ಬಡವರ ಪರವಾಗಿ ಕಾಳಜಿ ಇದ್ದವರು. ಅವರ ಮನೆಗೆ ಹೋದಾಗ ಅತಿಥಿ ಸತ್ಕಾರ ಮಾಡಿದ್ದರು. ಅತ್ಯಂತ ಶಿಸ್ತಿನಿಂದ ಕೂಡಿದವರು. ಅವರು ಡಾಕ್ಟರ್ ಕೂಡ ಹೌದು. ಎಂಬಿಬಿಎಸ್ ಮಾಡಿದ್ದರು. ಆ ಭಾಗದ ಜನಪ್ರಿಯ ನಾಯಕರು. ನಮಗೆ ಅವರ ಅಗಲಿಕೆ ನೋವು ತಂದಿದೆ. ನಮ್ಮ ಪಕ್ಷಕ್ಕೆ ಅಪಾರ ನಷ್ಟವಾಗಿದೆ" ಎಂದರು.
ಸಭಾ ನಾಯಕ ಬೋಸರಾಜು ಮಾತನಾಡಿ, "ರಾಜಾ ವೆಂಕಟಪ್ಪ ನಾಯಕ ನಾಲ್ಕು ಬಾರಿ ಶಾಸಕರಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ಜನರ ಪರವಾಗಿ ಹೋರಾಟ ಮಾಡಿದ್ದರು. ಜನತಾದಳದಿಂದಲೂ ಆಯ್ಕೆಯಾಗಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಗೆ ನಿಲ್ಲಿ ಎಂದು ನಾನು ಮತ್ತು ಶರಣಬಸಪ್ಪಗೌಡ ದರ್ಶನಾಪುರ ಹೇಳಿದ್ದೆವು. ಇವರ ಸಹೋದರರು ಕಾಂಗ್ರೆಸ್ನಲ್ಲೇ ಇದ್ದು, ಜನತಾದಳಕ್ಕೆ ಹೋಗಿದ್ದರು. ಅಲ್ಲಿ ಪರಾಭವ ಆದ ಬಳಿಕ, ವಾಪಸ್ ಕಾಂಗ್ರೆಸ್ಗೆ ಬಂದರು. ಅವರು ಕೂಡ ಈಗ ಇಲ್ಲ" ಎಂದು ಸಂತಾಪ ಸೂಚಿಸಿದರು.
ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, "ಆಸ್ಪತ್ರೆಗೆ ದಾಖಲಾಗಿದ್ದ ಅವರು, ಶೀಘ್ರವೇ ಗುಣಮುಖರಾಗಿ ಬರ್ತಾರೆ ಅನ್ನೋ ನಿರೀಕ್ಷೆ ಇತ್ತು. ಆದರೆ ಬಾರದ ಲೋಕಕ್ಕೆ ತೆರಳಿದ್ದಾರೆ. ರಾಜಕಾರಣದಲ್ಲಿ ನೇರವಾಗಿ ಹೇಳುವ ವ್ಯಕ್ತಿಗಳು ಕಡಿಮೆ. ವೆಂಕಟಪ್ಪ ಅವರು ನೇರ, ನಿಷ್ಠುರವಾದಿ. ಬಡವರ ಬಂಧು ಎಂದೇ ಗುರುತಿಸಿಕೊಂಡಿದ್ದರು. ಅವರ ಅಗಲಿಕೆ ಕ್ಷೇತ್ರದ, ಜಿಲ್ಲೆ ಜನರಿಗಷ್ಟೇ ಅಲ್ಲ, ರಾಜ್ಯಕ್ಕೆ ಆದ ನೋವು. ಸಂತಾಪ ಸೂಚನೆಗೆ ನಮ್ಮ ಅಭಿಮತ ಇದೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥನೆ ಮಾಡುತ್ತೇನೆ" ಎಂದರು.
ಸದನದಲ್ಲಿ ಕಣ್ಣೀರಿಟ್ಟ ಸದಸ್ಯೆ ಹೇಮಲತಾ ನಾಯಕ: ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಸಂತಾಪ ಸೂಚನೆ ವೇಳೆ ಕಣ್ಣೀರಿಟ್ಟ ಬಿಜೆಪಿ ಸದಸ್ಯೆ ಹೇಮಲತಾ ನಾಯಕ, ವೆಂಕಟಪ್ಪ ನಾಯಕ ಅವರು ನನಗೆ ಸಂಬಂಧದಲ್ಲಿ ಸೋದರ ಮಾವ ಆಗಬೇಕು. ಅವರು ನಾನು ಶಾಸಕಿ ಆಗಿ ಬಂದಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ರು. ಅವರು ಮೆಡಿಕಲ್ ಸ್ಟೂಡೆಂಟ್ ಆಗಿದ್ದಾಗಲೇ ರಾಜಕಾರಣದ ಬಗ್ಗೆ ಚಿಂತನೆ ಮಾಡಿದ್ರು. ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ" ಅಂತ ಕಣ್ಣೀರಿಟ್ಟರು.
ಇದನ್ನೂ ಓದಿ: ರಾಜಾ ವೆಂಕಟಪ್ಪ ನಾಯಕ ಪಾರ್ಥಿವ ಶರೀರದ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ; ಇಂದು ಕ್ಷೇತ್ರದಲ್ಲಿ ಶಾಲೆಗಳಿಗೆ ರಜೆ