ದಾವಣಗೆರೆ: ''ಲೋಕಸಭಾ ಕ್ಷೇತ್ರದ ಸಮಸ್ಯೆಗಳ ಕುರಿತು ಗೊತ್ತಿಲ್ಲದ ಮಹಿಳೆ ಅಡುಗೆ ಮಾಡಲು ಮಾತ್ರ ಸೀಮಿತ'' ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈಗಾಗಲೇ ಮಹಿಳೆಯರು ಈ ಹೇಳಿಕೆ ಖಂಡಿಸಿದ್ದಾರೆ. ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕೂಡ ಕಟುವಾಗಿ ಖಂಡಿಸಿದ್ದರು. ಇದೀಗ ಜಿಲ್ಲಾ ಬಿಜೆಪಿ ಈ ಹೇಳಿಕೆಯನ್ನು ಅಸ್ತ್ರವಾಗಿಟ್ಟುಕೊಂಡು ಚುನಾವಣಾ ಪ್ರಚಾರಕ್ಕೀಳಿದಿದೆ.
ಮಹಿಳಾ ಮೋರ್ಚಾದಿಂದ ಪ್ರತಿಭಟನೆ: ಶಾಮನೂರು ಹೇಳಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು. ನಗರದ ಜಯದೇವ ವೃತ್ತದಲ್ಲಿ ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಜಯದೇವ ವೃತ್ತದಲ್ಲಿ ಶಾಮಿಯಾನ ಹಾಕಿ ಒಲೆ ಹಚ್ಚಿ ಅಡುಗೆ ಮಾಡಲು ಬದ್ಧ, ಜನಸೇವೆ ಮಾಡಲೂ ಸಿದ್ಧ ಎಂಬ ಘೋಷಣೆದೊಂದಿಗೆ ಪ್ರತಿಭಟಿಸಿದರು.
ಬಿಜೆಪಿಯ ಮಹಿಳಾ ಮಣಿಗಳು ಉಪ್ಪಿಟ್ಟು, ಚಹಾ ತಯಾರು ಮಾಡಿದರು. ಬಳಿಕ ಅದನ್ನೇ ಸೇವಿಸಿ ಶಾಮನೂರು ಶಿವಶಂಕರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷ ಮಂಜುಳಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾಕಷ್ಟು ಜನ ಮಹಿಳೆಯರು ಭಾಗಿಯಾಗಿ ಅವರ ಹೇಳಿಕೆ ಖಂಡಿಸಿದರು.
ಮಹಿಳಾ ಮೋರ್ಚದ ಜಿಲ್ಲಾಧ್ಯಕ್ಷೆ ಆಕ್ರೋಶ: ''ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರು ಅಡುಗೆ ಮಾಡಲು ಸೀಮಿತ ಎಂದು ಹೇಳಿಕೆ ಕೊಟ್ಟಿದ್ದರು. ಅದನ್ನು ಖಂಡಿಸಿ ಇಂದು ಅಡುಗೆ ಮಾಡಿ ಖಂಡನೆ ಮಾಡಿದ್ದೇವೆ. ಹೆಣ್ಣು ಮಕ್ಕಳು, ಪುರುಷರ ಸರಿಸಮಾನರು. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳಾ ಮಣಿಗಳು ಮೇಲುಗೈ ಸಾಧಿಸಿದ್ದಾರೆ. ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ" ಎಂದು ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಮಂಜುಳಾ ಕಿಡಿಕಾರಿದರು.
ಇದನ್ನೂ ಓದಿ: ಮಹಿಳೆಯರು ಅಡುಗೆ ಮನೆಗೆ ಸೀಮಿತ ವಿಚಾರ: ಹೇಳಿಕೆ ತಿರುಚಲಾಗಿದೆ ಎಂದು ಶಿವಶಂಕರಪ್ಪ ಸ್ಪಷ್ಟನೆ - Shamanur Shivashankarappa
ಇನ್ನು ತಮ್ಮ ಹೇಳಿಕೆ ಬಗ್ಗೆ ಶಾಸಕ ಶಾಮನೂರು ಶಿವಶಂಕರಪ್ಪನವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಸ್ಪಷ್ಟ ಪಡಿಸಿದ್ದಾರೆ. "ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಬಗ್ಗೆ ನಾನು ದ್ವೇಷದಿಂದ ಈ ರೀತಿ ಹೇಳಿಕೆ ಕೊಟ್ಟಿದ್ದೇನೆ ಎಂದು ನನಗೆ ಆಗದವರು ಸುಳ್ಳು ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾರೆ, ಮಹಿಳೆಯರು ಅಡುಗೆ ಮನೆಗೆ ಸೀಮಿತವಲ್ಲ ಎಂಬುದನ್ನು ನಮ್ಮ ಪಕ್ಷದ ದಿವಂಗತ ಇಂದಿರಾಗಾಂಧಿಯವರು ಸಾಬೀತುಪಡಿಸಿದ್ದಾರೆ. ಅದೇ ರೀತಿ, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೂ ಮಹಿಳೆಯರೇ ಸ್ಪರ್ಧಿಸಿದ್ದು, ನಿಮ್ಮ ಸಮಸ್ಯೆಯನ್ನು ದೆಹಲಿಯವರೆಗೆ ತಲುಪಿಸುವವರಿಗೆ ಮತ ನೀಡಿ" ಎಂದು ಹೇಳಿದ್ದೇನೆ. ಆದರೆ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.