ಬೆಂಗಳೂರು: ತಾನು ಸಾಕುತ್ತಿದ್ದ ಬೆಕ್ಕಿನ ಮರಿಯನ್ನು ಕಾಲಿನಿಂದ ಒದ್ದು, ಗಾಯಗೊಳಿಸಿದ ಆರೋಪದ ಮೇಲೆ ಯುವಕನ ವಿರುದ್ಧ ವ್ಯಕ್ತಿಯೊಬ್ಬ ನಗರದ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ಮೊಹಮ್ಮದ್ ಅಫ್ತಾಬ್ ಎಂಬಾತ ನೀಡಿರುವ ದೂರಿನನ್ವಯ ಮನೀಶ್ ರತ್ನಾಕರ್ ಎಂಬಾತನ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 325ರಡಿ ಎಫ್‌ಐಆರ್ ದಾಖಲಾಗಿದೆ.
ಏನಿದು ಘಟನೆ?: ದೂರುದಾರ ಮೊಹಮ್ಮದ್ ಅಫ್ತಾಬ್ ಹಾಗೂ ಆರೋಪಿ ಮನೀಶ್ ರತ್ನಾಕರ್ ಬಿಟಿಎಂ ಲೇಔಟ್ 2ನೇ ಹಂತದಲ್ಲಿ ಒಂದೇ ಮನೆಯಲ್ಲಿ ವಾಸವಿದ್ದರು. ನವೆಂಬರ್ 26ರಂದು ಮನೀಶ್ ರತ್ನಾಕರ್ ಮನೆಯಲ್ಲಿದ್ದಾಗ ಬೆಕ್ಕು ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡಿದೆ. ಇದರಿಂದ ಸಿಟ್ಟಿಗೆದ್ದ ಮನೀಶ್, ಬೆಕ್ಕಿಗೆ ಕಾಲಿನಿಂದ ಒದ್ದು ಗಾಯಗೊಳಿಸಿದ್ದಾನೆ. ಬಳಿಕ ಮೊಹಮ್ಮದ್ ಅಫ್ತಾಬ್‌ಗೆ ಕರೆ ಮಾಡಿ, "ನಿನ್ನ ಬೆಕ್ಕು ಮನೆಯಲ್ಲಿ ಗಲೀಜು ಮಾಡಿದೆ, ಅದನ್ನು ಹೊರಗೆಸೆದು ಬಾ" ಎಂದು ತಿಳಿಸಿದ್ದಾನೆ. ಮೊಹಮ್ಮದ್ ಅಫ್ತಾಬ್ ಮನೆಗೆ ಬಂದು ನೋಡಿದಾಗ ಬೆಕ್ಕು ಬಕೆಟ್‌ನಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
''ಮನೀಶ್ ಮದ್ಯಪಾನ ಮಾಡಲಾರಂಭಿಸಿದ ಬಳಿಕ ಬೆಕ್ಕಿನ ಮರಿ ಕಂಡರೆ ಆಗುತ್ತಿರಲಿಲ್ಲ. ನನ್ನ ಬೆಕ್ಕು ಸಹ ಆತನ ಸುತ್ತ ಸುಳಿಯುತ್ತಿರಲಿಲ್ಲ. ನಾನು ಬರುವವರೆಗೂ ರೂಮ್‌ನಲ್ಲಿ ಅಡಗಿರುತ್ತಿತ್ತು. ಚಳಿ ಇದ್ದುದರಿಂದ ಹೊರಗೆ ಹೋಗಲಾರದೆ ಬೆಕ್ಕು ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡಿದೆ. ಅಷ್ಟಕ್ಕೆ ನನ್ನ ಬೆಕ್ಕಿನ ಮೇಲೆ ಮೃಗೀಯವಾಗಿ ಹಲ್ಲೆ ಮಾಡಿದ್ದಾರೆ'' ಎಂದು ಸಾಮಾಜಿಕ ಜಾಲತಾಣದಲ್ಲಿ ಮೊಹಮ್ಮದ್ ಅಫ್ತಾಬ್ ತಿಳಿಸಿದ್ದಾರೆ.
ಅಫ್ತಾಬ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಮೈಕೋಲೇಔಟ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಐದು ದಿನದಿಂದ ಉಪವಾಸ; ಹಸಿವಿನಿಂದ ಕಂಗೆಟ್ಟು ಬೆಕ್ಕಿನ ಹಸಿ ಮಾಂಸ ತಿಂದ ಯುವಕ!