ಕಾರವಾರ (ಉತ್ತರ ಕನ್ನಡ): ಸೀಟ್ ವಿಚಾರಕ್ಕೆ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಹಾಗೂ ಯುವತಿ ನಡುವೆ ವಾಗ್ವಾದ ನಡೆದು, ಪ್ರಕರಣವು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಬಗ್ಗೆ ದೂರು ಹಾಗೂ ಪ್ರತಿದೂರು ದಾಖಲಾದ ಘಟನೆ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ಡಿಪೋಗೆ ಸೇರಿದ ಹಿರೇಕೆರೂರು - ಭಟ್ಕಳ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ. ಯುವತಿಯೊರ್ವರು ಸಿದ್ದಾಪುರದಿಂದ ಪುತ್ತೂರಿಗೆ ಪ್ರಯಾಣಿಸಲು ಹೊನ್ನಾವರಕ್ಕೆ ಟಿಕೆಟ್ ಪಡೆದಿದ್ದರು. ಆದರೆ, ಬಸ್ ಫುಲ್ ಆಗಿದ್ದರಿಂದ ಕುಳಿತುಕೊಳ್ಳಲು ಸೀಟ್ ಸಿಕ್ಕಿರಲಿಲ್ಲವಂತೆ.
ಹೊನ್ನಾವರ ಮಾರ್ಗದಲ್ಲಿನ ಮಾವಿನಗುಂಡಿ ಸಮೀಪ ಬಸ್ ಬರುವಾಗ ಸೀಟ್ ಇರದ ಕಾರಣ ಹಿಂಬದಿ ಬರುತ್ತಿದ್ದ ಧರ್ಮಸ್ಥಳ ಬಸ್ ಗಮನಿಸಿ, ತಾನು ಇಳಿಯುವುದಾಗಿ ನಿರ್ವಾಹಕರ ಬಳಿ ಯುವತಿ ಕೇಳಿಕೊಂಡಿದ್ದಾಳೆ. ಆದರೆ, ಹೊನ್ನಾವರದ ಟಿಕೆಟ್ ಪಡೆದಿರುವ ನೀವು ಇಲ್ಲಿ ಇಳಿಯಲು ಸಾಧ್ಯವಿಲ್ಲ ಎಂದು ನಿರ್ವಾಹಕ ಹೇಳಿದ್ದಾರೆ. ಅಲ್ಲದೆ, ಟಿಕೆಟ್ ಹಾಗೂ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ. ಈ ವೇಳೆ ತನಗೆ ಕಂಡಕ್ಟರ್ ನಿಂದಿಸಿದ್ದಾರೆ. ಬಳಿಕ ಮುಂದಿನ ನಿರ್ಜನ ಪ್ರದೇಶದ ನೆಟ್ವರ್ಕ್ ಇಲ್ಲದಂತಹ ಸ್ಥಳದಲ್ಲಿ ಇಳಿಸಿ ಹೋಗಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.
ನಿರ್ವಾಹಕನ ಪ್ರತಿದೂರು: ಈ ಸಂಬಂಧ ನಿರ್ವಾಹಕ ಕೂಡ ಪ್ರತಿದೂರು ನೀಡಿದ್ದಾರೆ. ಯುವತಿಯು ಬಸ್ ಇಳಿಯುತ್ತೇನೆ ಎಂದು ಹೇಳಿದಾಗ ಶಕ್ತಿ ಯೋಜನೆ ನಿಯಮ ಹೇಳಿದರೂ ಕೇಳದೆ, ಮುಂದಿನ ನಿಲುಗಡೆಯಲ್ಲಿ ಇಳಿದಿದ್ದಾರೆ. ನಂತರ ಯುವತಿಯು ತನ್ನ ತಂದೆಯೊಂದಿಗೆ ಕಾರಿನಲ್ಲಿ ಆಗಮಿಸಿ ಬಸ್ ಅಡ್ಡಗಟ್ಟಿ ನಿಲ್ಲಿಸಿದ್ದಲ್ಲದೆ, ನಿಂದಿಸಿ, ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ನಿರ್ವಾಹಕ ದೂರು ನೀಡಿದ್ದಾರೆ. ಎರಡೂ ದೂರುಗಳನ್ನು ದಾಖಲಿಸಿಕೊಂಡ ಹೊನ್ನಾವರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಬಗ್ಗೆ ಘಟನೆಯ ವಿಡಿಯೋಗಳನ್ನು ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕರವೇ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗೌಡ, ಮಾವಿನಗುಂಡಿಯ ಕಾಡಿನಲ್ಲಿ ಯುವತಿಯನ್ನು ಬಸ್ನಿಂದ ಇಳಿಸಿರುವುದು ಅಮಾನವೀಯ. ಈ ರೀತಿಯ ವರ್ತನೆ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಬಸ್‌ನಲ್ಲಿ ಹಲ್ಲೆ ಪ್ರಕರಣ: ಮಹಿಳೆ ವಿರುದ್ಧ ಪ್ರತಿ ದೂರು ದಾಖಲಿಸಿದ ನಿರ್ವಾಹಕ - Bengaluru Assault Case