ಮೈಸೂರು: ಮೈಸೂರು ಮಹಾನಗರ ಪಾಲಿಕೆ ಸ್ವಚ್ಛತೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ನೀಡುವ ಬೆಳಗಿನ ಉಪಹಾರವು ಕಳಪೆಯಾಗಿದ್ದು, ಕೂಡಲೇ ಒಳ್ಳೆಯ ಉಪಹಾರ ಪೂರೈಸಬೇಕು. ಕಳಪೆ ಆಹಾರ ನೀಡುತ್ತಿರುವ ಟೆಂಡರ್ ದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಆಗ್ರಹಿಸಿದ್ದಾರೆ.
ಬೆಳಗ್ಗೆ ಎದ್ದು ಮೈಸೂರು ನಗರವನ್ನು ಪ್ರತಿನಿತ್ಯವೂ ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ವಿಜಯನಗರದ ಪಾಯಿಂಟ್ ನಲ್ಲಿ ಇರಿಸಿದ್ದ ಉಪ್ಪಿಟ್ಟಿನಲ್ಲಿ ಜಿರಳೆ ಕಾಣಿಸಿಕೊಂಡಿತ್ತು. ಇದು ಪೌರಕಾರ್ಮಿಕರ ಆಕ್ರೋಶ ಭುಗಿಲೇಳಲು ಕಾರಣವಾಗಿದೆ. ಈ ಹಿನ್ನೆಲೆ ಕಳಪೆ ಆಹಾರ ನೀಡುತ್ತಿರುವ ಟೆಂಡರ್ದಾರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪೌರ ಕಾರ್ಮಿಕರು ಒತ್ತಾಯಿಸಿದ್ದಾರೆ.
ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಮಾದರಿಯಂತೆ ಮೈಸೂರು ಮಹಾನಗರ ಪಾಲಿಕೆಯಲ್ಲೂ ಪೌರಕಾರ್ಮಿಕರಿಗೆ ಉಪಹಾರ ನೀಡಲಾಗುತ್ತಿದೆ. ಇದಕ್ಕಾಗಿ ಟೆಂಡರ್ ಸಹ ಕರೆಯಲಾಗಿದೆ. ವಾರ್ಷಿಕ 2.5 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ನಗರದ ಒಂದೊಂದು ವಾರ್ಡ್ಗಳಲ್ಲೂ ಮೂರು ಉಪಹಾರದ ಪಾಯಿಂಟ್ಗಳನ್ನು ತೆರೆಯಲಾಗಿದೆ. ಇಷ್ಟೆಲ್ಲಾ ವೆಚ್ಚ ಆದರೂ ಈ ರೀತಿ ಮಾಡುತ್ತಿರುವುದು ಎಷ್ಟು ಸರಿ ಎಂದು ಪೌರ ಕಾರ್ಮಿಕರು ಪ್ರಶ್ನಿಸಿದರು.
ಪಾರ್ಕ್, ಇಂದಿರಾ ಕ್ಯಾಂಟೀನ್, ಸಮುದಾಯ ಭವನ ಸೇರಿದಂತೆ ನಗರದ ವಿವಿಧೆಡೆ ಕಾರ್ಮಿಕರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಪೌರ ಕಾರ್ಮಿಕರು ತಮಗೆ ನಿಗದಿ ಪಡಿಸಿದ ಪ್ರದೇಶಕ್ಕೆ ಹೋಗಿ, ಉಪಹಾರ ಸೇವಿಸಿ ಮತ್ತೆ ಕೆಲಸಕ್ಕೆ ಹೊರಡುತ್ತಾರೆ.
ಹೀಗಿರುವಾಗ ಕಳಪೆ ಆಹಾರ ನೀಡುವುದರ ಜೊತೆಗೆ ಸರಿಯಾದ ಪ್ರಮಾಣದಲ್ಲಿ ನೀರಿನ ಪೂರೈಕೆ ಮಾಡುತ್ತಿಲ್ಲ, ನೀರಿನ ಕೊರತೆ ಇದೆ, ಜೊತೆಗೆ ಪ್ಲೇಟ್ಗಳ ಸಮಸ್ಯೆಯೂ ಸಹ ಇದೆ. ನಿಗದಿ ಪಡಿಸಿದ ಜಾಗದಲ್ಲಿ ಟೆಂಡರ್ ದಾರರು ಆಹಾರ ಇಟ್ಟು ಹೊರಟು ಹೋಗುತ್ತಾರೆ. ಪೌರ ಕಾರ್ಮಿಕರು ಬರುವವರೆಗೂ ಉಪಹಾರದ ಬಳಿ ಯಾರು ಇರುವುದಿಲ್ಲ. ಕೆಲವೊಮ್ಮೆ ಇದರಿಂದ ಆಹಾರ ಬೆಕ್ಕು, ಇಲಿ, ಹೆಗ್ಗಣಗಳ ಪಾಲಾಗುತ್ತಿದೆ ಎಂದು ದೂರಿದ್ದಾರೆ.
ಕಾರ್ಮಿಕರ ಸಂಘದ ಅಧ್ಯಕ್ಷರು ಹೇಳಿದ್ದೇನು: ನಗರದ ಎಷ್ಟೋ ಉಪಹಾರದ ಪಾಯಿಂಟ್ ಗಳಲ್ಲಿ ಪೌರ ಕಾರ್ಮಿಕರು ಉಪಹಾರ ಮಾಡಿದ ನಂತರ ಕುಡಿಯಲು ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಉಪಹಾರ ಹಾಕಿಕೊಳ್ಳಲು ಸಹ ಪ್ಲೇಟ್ಗಳ ಕೊರತೆಯೂ ಇದೆ. ಈ ರೀತಿ ನಿರ್ಲಕ್ಷ್ಯ ವಹಿಸಿದರೆ ಹೇಗೆ ? ರುಚಿ-ಶುಚಿಯಾಗಿ ಆಹಾರ ಇರಬೇಕು ಎಂಬ ನಿಯಮಗಳನ್ನು ಟೆಂಡರದಾರರು ಪಾಲಿಸುತ್ತಿಲ್ಲ. ಹೀಗಾದರೆ ಕಾರ್ಮಿಕರ ಆರೋಗ್ಯ ಕ್ಷೀಣಿಸುತ್ತದೆ ಎಂದು ಕಾರ್ಮಿಕರ ಸಂಘದ ಅಧ್ಯಕ್ಷ ಮಂಚಯ್ಯ ಎಂದು ತಿಳಿಸಿದ್ದಾರೆ.
ಇದನ್ನೂಓದಿ:ಸಿಗರೇಟು ಸೇದುವ ವಯೋಮಿತಿ 21ಕ್ಕೆ ಹೆಚ್ಚಿಸುವ ವಿಧೇಯಕ ಅಂಗೀಕಾರ: ನಿಯಮ ಮೀರಿದ್ರೆ 1000 ರೂ. ದಂಡ