ಬೆಂಗಳೂರು: ರಾಜ್ಯದಲ್ಲಿ 1.40 ಕೋಟಿ ಎಕರೆ ಸರ್ಕಾರಿ ಜಮೀನು ಇದ್ದು, ಲ್ಯಾಂಡ್ ಬೀಟ್ ಮೊಬೈಲ್ ತಂತ್ರಾಂಶದ ಮೂಲಕ ಒಟ್ಟು 91,000 ಎಕರೆ ಜಮೀನುಗಳು ಒತ್ತುವರಿಯಾಗಿರುವುದನ್ನು ಗುರುತಿಸಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಜೊತೆಗಿನ ಸಭೆಯಲ್ಲಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ಬಗ್ಗೆ ಮಾಹಿತಿ ನೀಡಿದರು.
14.32 ಲಕ್ಷ ಸರ್ಕಾರಿ ಜಮೀನುಗಳ ಸ್ಥಳ ಪರಿಶೀಲನೆಗೆ ಸೂಚಿಸಲಾಗಿದೆ. ಈ ಪೈಕಿ 10.78 ಲಕ್ಷ ಜಮೀನುಗಳಿಗೆ ಗ್ರಾಮಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದರಲ್ಲಿ ಕಂದಾಯ ಇಲಾಖೆಯ 1.93 ಲಕ್ಷ ಜಮೀನುಗಳು ಇದ್ದು, ವಿವಿಧ 20 ಇಲಾಖೆಗಳ ಜಮೀನುಗಳನ್ನೂ ಗುರುತಿಸಲಾಗಿದೆ. ಕೆರೆ ಮತ್ತು ಸ್ಮಶಾನಗಳ ಹೆಚ್ಚುವರಿ ಜವಾಬ್ದಾರಿ ತೆಗೆದುಕೊಂಡು, ಸಮೀಕ್ಷೆ ನಡೆಸಲಾಗಿದೆ. ಆಗಸ್ಟ್ ತಿಂಗಳಿನಿಂದ ಸರ್ವೇಯರುಗಳ ಲಭ್ಯತೆ ನೋಡಿಕೊಂಡು ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು. ಇತರ ಇಲಾಖೆಯವರೂ ಸಹ ತಮ್ಮ ಜಮೀನು ಎಲ್ಲಿದೆ ಹಾಗೂ ಒತ್ತುವರಿಯಾಗಿದೆಯೇ ಎಂಬ ಕುರಿತು ಪರಿಶೀಲಿಸಲು ಅವಕಾಶವಿದೆ ಎಂದು ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಶೀಘ್ರ ಆಧಾರ್ ಜೋಡಣೆಗೆ ಸಿಎಂ ಸೂಚನೆ: ವಿವಿಧ ಇಲಾಖೆಗಳ ಆಸ್ತಿ ರಕ್ಷಣೆಗೆ ಎಸ್ಟೇಟ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ತಮ್ಮ ಇಲಾಖೆಗೆ ಹಂಚಿಕೆಯಾದ ಭೂಮಿಯ ಮಾಹಿತಿಯನ್ನು ಆರ್.ಟಿ.ಸಿ.ಯಲ್ಲಿ ಇಂದೀಕರಣ ಮಾಡಬೇಕು. ಹಾಗೂ ಒತ್ತುವರಿ ತೆರವುಗೊಳಿಸಿ, ತಮ್ಮ ಆಸ್ತಿಯನ್ನು ಸಂರಕ್ಷಿಸಬೇಕು. ಸರ್ಕಾರಿ ಜಮೀನು ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು. ಜಮೀನು ಮಾರಾಟದಲ್ಲಿ ವಂಚನೆ ತಡೆಯಲು ಪಹಣಿ-ಆಧಾರ್ ಜೋಡಣೆ ಕೈಗೊಳ್ಳಲಾಗುತ್ತಿದೆ. ಇದನ್ನು ಶೀಘ್ರವೇ ಪೂರ್ಣಗೊಳಿಸಲು ಸಭೆಯಲ್ಲಿ ಸಿಎಂ ಸೂಚಿಸಿದರು.
ಒಬ್ಬರು ಮೂರ್ನಾಲ್ಕು ದಶಕಗಳಿಂದ ಜಮೀನು ಸಾಗುವಳಿ ಮಾಡುತ್ತಿದ್ದು, ಅದಕ್ಕೆ ಬೇರೆ ವ್ಯಕ್ತಿಗಳು ಭೂ ಮಂಜೂರಾತಿ ಮಾಡಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂತಹ ಸ್ಥಳಕ್ಕೆ ಭೇಟಿ ನೀಡಿ, ಮಹಜರು ನಡೆಸಿ, ಭೂಮಂಜೂರಾತಿ ರದ್ದುಪಡಿಸಬೇಕು. ಭೂಮಿಯ ಸ್ವಾಧೀನ ಹೊಂದಿರುವವರಿಗೆ ಮಂಜೂರು ಮಾಡಬೇಕು ಎಂದು ಸೂಚನೆ ನೀಡಿದರು.
ಪೋಡಿ ಮತ್ತು ದುರುಸ್ತ್ ಪ್ರಕರಣಗಳು ಬಹಳ ಸಂಖ್ಯೆಯಲ್ಲಿ ಬಾಕಿ ಇರುವುದರಿಂದ, ಅಭಿಯಾನ ಮಾದರಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಿಎಂ ಸೂಚಿಸಿದರು. ಇದಕ್ಕೆ ಹೆಚ್ಚುವರಿ ಸರ್ವೇಯರುಗಳ ಅಗತ್ಯವಿದೆ. 737 ಹುದ್ದೆಗಳಿಗೆ ಅನುಮತಿ ದೊರೆತಿದ್ದು, ಶೀಘ್ರವೇ ನೇಮಕ ಮಾಡಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಭೂ ಸುರಕ್ಷಾ ಕಾರ್ಯಕ್ರಮದಡಿ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಇಂಡೆಕ್ಸ್ ಮಾಡಿ ಡಿಜಿಟಲೀಕರಣ ಮಾಡಲಾಗಿದೆ. ಈ ವರೆಗೆ 3.28 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. 31 ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದ್ದು, ಆಗಸ್ಟ್‌ನಲ್ಲಿ ಎಲ್ಲ ತಾಲೂಕುಗಳಲ್ಲಿ ಕೈಗೊಳ್ಳಲಾಗುವುದು. ಮುಂದಿನ ಒಂದು ವರ್ಷದೊಳಗೆ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ದಾಖಲೆಗಳನ್ನು ಒದಗಿಸುವುದರ ಜೊತೆಗೆ, ದಾಖಲೆಗಳ ತಿರುಚುವಿಕೆ, ದಾಖಲೆಗಳ ನಾಪತ್ತೆ ಮೊದಲಾದವುಗಳನ್ನು ತಡೆಯಬಹುದಾಗಿದೆ ಎಂದು ಸೂಚಿಸಿದರು.