ಮೈಸೂರು: ನಮ್ಮ ನಾಡಿಗೆ ಪ್ರವಾಹ ಬಂದಾಗ ಮೋದಿ ಬರಲಿಲ್ಲ. ಬರಗಾಲ ಬಂದಾಗಲೂ ಬರಲಿಲ್ಲ. ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗಲೂ ಬರಲಿಲ್ಲ. ಈಗ ಚುನಾವಣೆ ಬಂತು ನೋಡಿ ಅದಕ್ಕೆ ರಾಜ್ಯಕ್ಕೆ ಬಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಇಂದು ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಜನರ ಧ್ವನಿ, ಸಂವಿಧಾನ ರಕ್ಷಣೆಯ ಧ್ವನಿ, ರಾಜ್ಯದ ಪರವಾದ ಧ್ವನಿ, ಸಾಮಾಜಿಕ ನ್ಯಾಯದ ಧ್ವನಿಯಾಗಿದ್ದಾರೆ. ಇವರು ನಮ್ಮ-ನಿಮ್ಮೆಲ್ಲರ ಧ್ವನಿಯಾಗಿ ಸಂಸತ್ತಿಗೆ ಹೋಗ್ತಾರೆ. ಒಗ್ಗಟ್ಟಾಗಿ ಕೆಲಸ ಮಾಡಿ ಅವರನ್ನು ಗೆಲ್ಲಿಸಿ ಕಳಿಸೋಣ ಎಂದು ಮನವಿ ಮಾಡಿದರು.
ನಮ್ಮ ಅಭ್ಯರ್ಥಿ ಸಾಮಾನ್ಯ ಒಕ್ಕಲಿಗ ಕುಟುಂಬದಿಂದ ಸ್ವಂತ ಪರಿಶ್ರಮದಿಂದ ಮೇಲೆ ಬಂದವರು. ಇವರು ಒಕ್ಕಲಿಗರೇ ಅಲ್ಲ ಎನ್ನುವ ಅಪಪ್ರಚಾರವನ್ನು ವ್ಯಾಪಕವಾಗಿ ಮಾಡುತ್ತಿದ್ದಾರೆ. ಆದರೆ ಅವರು ಅಪ್ಪಟ ಒಕ್ಕಲಿಗರು. ಬಿಜೆಪಿ ಒಕ್ಕಲಿಗರಿಗೆ ಟಿಕೆಟ್ ತಪ್ಪಿಸಿದೆ ಎನ್ನುವ ಅಸಮಾಧಾನ ಹಲವರಲ್ಲಿದೆ. ಆ ಕಾರಣಕ್ಕೆ ಲಕ್ಷ್ಮಣ್ ಒಕ್ಕಲಿಗರೇ ಅಲ್ಲ ಎನ್ನುವ ಅಪಪ್ರಚಾರ ಮಾಡುತ್ತಿದ್ದಾರೆ. ಈ ಸುಳ್ಳು ಮತ್ತು ಅಪಪ್ರಚಾರವನ್ನು ನಂಬಬೇಡಿ ಎಂದರು.
ಮೋದಿಯವರು ಈ ಹತ್ತು ವರ್ಷದಲ್ಲಿ ಸುಳ್ಳು ಹೇಳಿ ಭಾರತೀಯರನ್ನು ಮರಳು ಮಾಡಿದ್ದು ಬಿಟ್ಟರೆ, ಭಾರತೀಯರ ಬದುಕು ಸುಧಾರಿಸುವ ಒಂದೇ ಒಂದು ಕಾರ್ಯಕ್ರಮವನ್ನೂ ಮಾಡಲಿಲ್ಲ. ಹತ್ತು ವರ್ಷದಲ್ಲಿ ಜನರ, ರಾಜ್ಯದ ಸಮಸ್ಯೆಗಳಲ್ಲಿ ಒಂದೇ ಒಂದನ್ನಾದರೂ ಬಗೆಹರಿಸಿದರಾ? ಯಾವುದನ್ನೂ ಮಾಡದೆ ಹತ್ತು ವರ್ಷ ಮಾತಾಡ್ಕೊಂಡು ಕಾಲ ಕಳೆದರಲ್ಲ. ಇದು ಸರಿನಾ ಎಂದು ಪ್ರಶ್ನಿಸಿದರು.
ವಿದೇಶದಿಂದ ಕಪ್ಪು ಹಣ ತಂದು ನಿಮ್ಮ ಖಾತೆಗೆ 15 ಲಕ್ಷ ರೂಪಾಯಿ ಹಾಕ್ತೀನಿ ಅಂದ್ರು, ಹಾಕಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರು, ಹೊಸ ಉದ್ಯೋಗ ಬರುವುದಿರಲಿ, ಹಳೆ ಉದ್ಯೋಗಗಳೇ ನಷ್ಟ ಆದವು. ಇದೇನಾ ಅಚ್ಛೇ ದಿನ್? ಎಂದು ವ್ಯಂಗ್ಯವಾಡಿದರು.
ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಬೀಳಿಸಿದ್ದೇ ಬಿಜೆಪಿ. ಹಾಗಂತ ಇದೇ ಕುಮಾರಸ್ವಾಮಿ ಬಯ್ಯುತ್ತಿದ್ದರು. ಈಗ ದೇವೇಗೌಡರು ಮತ್ತು ಕುಮಾರಸ್ವಾಮಿ ಇಬ್ಬರೂ ಬಿಜೆಪಿ ಜತೆ ಸೇರಿಕೊಂಡಿದ್ದಾರೆ. ಆದ್ದರಿಂದ ಇವರು ತಮ್ಮ ಪಕ್ಷದ ಹೆಸರಿನಲ್ಲಿರುವ ಸೆಕ್ಯುಲರ್ ಪದವನ್ನು ಕಿತ್ತು ಹಾಕೋದು ಉತ್ತಮ ಎಂದೆ. ಇಷ್ಟು ಹೇಳಿದ್ದಕ್ಕೇ ಸಿದ್ದರಾಮಯ್ಯರಿಗೆ ಗರ್ವ ಎನ್ನುತ್ತಿದ್ದಾರೆ ದೇವೇಗೌಡರು. ದೇವೇಗೌಡರ ಕುರಿತು ನಮಗಿರುವುದು ರಾಜಕೀಯ ವಿರೋಧ ಮಾತ್ರ. ನಿಮ್ಮ ರಾಜಕೀಯ ನಿಲುವುಗಳಿಗೆ ಮಾಡುವ ವಿರೋಧ. ಯಾವುದೇ ಕಾರಣಕ್ಕೂ ನಮ್ಮದು ದೇವೇಗೌಡರ ಬಗ್ಗೆ ವೈಯಕ್ತಿಕ ವಿರೋಧ ಇಲ್ಲವೇ ಇಲ್ಲ ಎಂದರು.
ಇದನ್ನೂ ಓದಿ: ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದ ಸಿಎಂ; ರಾಜಕೀಯ ನಿವೃತ್ತಿ ಬಗ್ಗೆ ಸಿದ್ದರಾಮಯ್ಯ ಸುಳಿವು - CM Siddaramaiah