ಹುಬ್ಬಳ್ಳಿ: ''ವಿದ್ಯಾರ್ಥಿನಿ ನೇಹಾ ಹಿರೇಮಠ ಕುಟುಂಬದೊಂದಿಗೆ ನಾವು ಇದ್ದೇವೆ. ಎಲ್ಲ ಮಗ್ಗಲುಗಳಲ್ಲೂ ತನಿಖೆ ಮಾಡಲು ಸೂಚನೆ ನೀಡಿದ್ದೇನೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹುಬ್ಬಳ್ಳಿಯಲ್ಲಿನ ನೇಹಾ ನಿವಾಸಕ್ಕೆ ಗುರುವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ಸಿಎಂ, ನೇಹಾ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ''ಇದೊಂದು ದುರಾದೃಷ್ಟಕರ ಘಟನೆ. ಈ ಪ್ರಕರಣವನ್ನು ಈಗಾಗಲೇ ನಾವು ಸಿಐಡಿಗೆ ಕೊಟ್ಟಿದ್ದೇವೆ. ಆರೋಪಿಯನ್ನು ಬಂಧಿಸಲಾಗಿದೆ. ಸಿಐಡಿ ತನಿಖೆ ಆರಂಭಗೊಂಡಿದೆ'' ಎಂದರು.
ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಬಿಜೆಪಿ ನಾಯಕರ ಆಗ್ರಹದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ''ನೇಹಾ ಹತ್ಯೆಯಲ್ಲಿ ಬಿಜೆಪಿಯು ರಾಜಕೀಯ ಮಾಡುತ್ತಿದೆ. ಇಲ್ಲಿಯವರೆಗೆ ಅವರು ಒಂದು ಪ್ರಕರಣವನ್ನಾದರೂ ಸಿಬಿಐಗೆ ಕೊಟ್ಟಿದ್ದಾರಾ? ನಮ್ಮ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿದ್ದೇವೆ'' ಎಂದು ತಿರುಗೇಟು ನೀಡಿದರು.
''ನೇಹಾ ಕುಟುಂಬದ ಜೊತೆಗೆ ನಾವು ಇರುತ್ತೇವೆ. ಅವರಿಗೆ ರಕ್ಷಣೆ ಬೇಕಿದ್ದರೂ ಕೊಡುತ್ತೇವೆ. ಸಿಐಡಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ವಿಶೇಷ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸುತ್ತಾರೆ. ನಂತರ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಆದಷ್ಟು ಬೇಗ ನ್ಯಾಯಾಲಯದಲ್ಲಿ ಆರೋಪಿಗೆ ಗರಿಷ್ಠ ಶಿಕ್ಷೆ ಆಗುತ್ತದೆ. ಧೈರ್ಯವಾಗಿರಿ, 120 ದಿನಗಳೊಳಗೆ ನ್ಯಾಯ ಕೊಡಿಸೋಣ'' ಎಂದು ಸಿಎಂ ಸಿದ್ದರಾಮಯ್ಯ ನೇಹಾ ತಂದೆಯ ಬೆನ್ನು ತಟ್ಟಿದರು.
ಸಿಎಂ ಎದುರು ನಿರಂಜನ ಹಿರೇಮಠ ಬೇಡಿಕೆ: ಇದೇ ವೇಳೆ ಮಗಳ ಸಾವಿಗೆ ನ್ಯಾಯ ಬೇಕೆಂದು ನೇಹಾ ತಂದೆ ನಿರಂಜನ ಹಿರೇಮಠ ಸಿಎಂ ಬಳಿ ಕೋರಿದರು. ಇದೇ ವೇಳೆ ಮಾತನಾಡಿದ ಅವರು, ''ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ವಿಶೇಷ ನ್ಯಾಯಾಲಯದಲ್ಲಿ 90-120 ದಿನಗಳ ಒಳಗಾಗಿ ನ್ಯಾಯ ಸಿಗಬೇಕು. ಸಾವಿಗೆ ಸಾವೇ ಶಿಕ್ಷೆ ಆಗಬೇಕು'' ಎಂದು ಬೇಡಿಕೆ ಇಟ್ಟರು.
''ಫಯಾಜ್ನನ್ನು ಗಲ್ಲಿಗೇರಿದ ಮೇಲೆಯೇ ನಮಗೆ ಸಮಾಧಾನ, ಅಲ್ಲಿಯವರೆಗೆ ಹೋರಾಟ ಮಾಡುತ್ತೇವೆ. ಸರ್ಕಾರ ನಮ್ಮ ಜೊತೆಗೆ ಇರಬೇಕು. ಸಿಎಂ ನಮ್ಮ ಜೊತೆಗೆ ಇದ್ದು ನ್ಯಾಯ ಒದಗಿಸಬೇಕೆಂದು ಮನವಿ ಮಾಡುತ್ತೇನೆ. ಸಿಐಡಿ ತನಿಖೆಗೆ ಒಪ್ಪಿಸಿದ್ದು ಸಂತೋಷ ತಂದಿದೆ. ಕಾಂಗ್ರೆಸ್ ಮುಖಂಡರು ನಮ್ಮ ಬೆನ್ನಿಗೆ ನಿಂತಿದ್ದಾರೆ. ಕೋಪದಲ್ಲಿ ಯಾರಿಗಾದರೂ ನೋವು ತರುವ ಹಾಗೆ ಮಾತನಾಡಿದರೆ ಕ್ಷಮೆ ಕೋರುತ್ತೇನೆ'' ಎಂದು ಭಾವುಕರಾದರು.
ಈ ಸಂದರ್ಭದಲ್ಲಿ ಸಚಿವರಾದ ಹೆಚ್.ಕೆ.ಪಾಟೀಲ್, ಸಂತೋಷ ಲಾಡ್, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಶಾಸಕ ಪ್ರಸಾದ್ ಅಬ್ಬಯ್ಯ, ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ನೇಹಾ ಹಿರೇಮಠ ಮನೆಗೆ ಸಿಐಡಿ ಅಧಿಕಾರಿಗಳ ಭೇಟಿ, ಪರಿಶೀಲನೆ; ಪೋಷಕರಿಂದ ಮಾಹಿತಿ ಸಂಗ್ರಹ - Neha Hiremath Case