ಬೆಳಗಾವಿ: ಅತಿವೃಷ್ಟಿ, ಪ್ರವಾಹ ಬಾಧಿತ ಗೋಕಾಕ ನಗರದ ವಿವಿಧ ಪ್ರದೇಶಗಳು ಮತ್ತು ಕಾಳಜಿ ಕೇಂದ್ರಕ್ಕೆ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರೊಂದಿಗೆ ಮಾತನಾಡುತ್ತಾ, ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ವಿಶೇಷ ವಿಮಾನದ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ, ಬಳಿಕ ರಸ್ತೆ ಮಾರ್ಗವಾಗಿ ಗೋಕಾಕ ನಗರಕ್ಕೆ ಆಗಮಿಸಿದರು. ಅತಿವೃಷ್ಟಿಯಿಂದ ತುಂಬಿ ಹರಿಯುತ್ತಿದ್ದ ಘಟಪ್ರಭಾ ನದಿಯಿಂದ ಮುಳುಗಡೆಯಾಗಿದ್ದ ಲೋಳಸೂರ ಸೇತುವೆಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಹೊಸ ಸೇತುವೆ ನಿರ್ಮಾಣಕ್ಕೆ ಮನವಿ ಮಾಡಿದರು.
ಸಿಎಂ ಜೊತೆ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ, ವಿಧಾನಪರಿಷತ್ ಸದಸ್ಯರಾದ ಲಖನ್ ಜಾರಕಿಹೊಳಿ ಮತ್ತಿತರರು ಇದ್ದರು.
ಲೋಳಸೂರ ಸೇತುವೆಯ ಬಳಿ ಹಿನ್ನೀರಿನಿಂದ ಒಂದು ವಾರದಿಂದ ಮುಳುಗಡೆಯಾಗಿದ್ದ ಗೋಕಾಕ ನಗರದ ಹಳೆ ದನಗಳ ಪೇಟೆ, ಮಟನ್ ಮಾರ್ಕೆಟ್, ಕುಂಬಾರಗಲ್ಲಿ, ಉಪ್ಪಾರಗಲ್ಲಿ, ಭೋಜಗಾರ ಗಲ್ಲಿ ಸೇರಿದಂತೆ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಹಾನಿ ಪರಿಶೀಲಿಸಿದರು. ಮಳೆಯಿಂದ ಉಂಟಾಗಿರುವ ಹಾನಿಯನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ, ಸಂಕೇಶ್ವರ-ಯರಗಟ್ಟಿ ರಾಜ್ಯ ಹೆದ್ದಾರಿಯಲ್ಲಿರುವ ಲೋಳಸೂರ ಸೇತುವೆ ತುಂಬಾ ಹಳೆಯದಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಎತ್ತರದ ಲೋಳಸೂರ ಸೇತುವೆಯ ನಿರ್ಮಿಸುವ ಅಗತ್ಯವಿದೆ ಎಂದು ಹೇಳಿದರು.
ನಂತರ ಮುಳಗಡೆಯಿಂದ ಸಂತ್ರಸ್ತಗೊಂಡಿರುವ ಕುಟುಂಬಗಳಿಗೆ ವಸತಿ ಕಲ್ಪಿಸಲು ಗೋಕಾಕ ನಗರದ ಸರ್ಕಾರಿ ಮುನ್ಸಿಪಲ್ ಕಾಲೇಜಿನಲ್ಲಿ ಆರಂಭಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಸಂತ್ರಸ್ತರ ಜೊತೆ ಚರ್ಚಿಸಿದರು. ಊಟೋಪಹಾರ ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ, ಆಸೀಫ್ ಸೇಠ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಗೋಕಾಕ್ ನಗರದ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಬೆಳಗಾವಿ ಜಿಲ್ಲೆಯಲ್ಲಿ ಶೇ.62ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿದೆ. 6 ಜನ ಮಳೆಯಿಂದ ಮೃತಪಟ್ಟಿದ್ದಾರೆ. ಎಲ್ಲರಿಗೂ 5 ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ. 12 ಜಾನುವಾರು ಮೃತಪಟ್ಟಿವೆ. ಅವಕ್ಕೂ ಕೂಡ ಪರಿಹಾರ ಕೊಟ್ಟಿದ್ದೇವೆ. 48 ಮನೆಗಳು ಪೂರ್ಣ, 918 ಮನೆಗಳು ಭಾಗಷ ಹಾನಿ ಆಗಿವೆ. ಬಿದ್ದ ಮನೆಗಳಿಗೆ ಯಡಿಯೂರಪ್ಪ ಐದು ಲಕ್ಷ ರೂ. ಕೊಟ್ಟಿದ್ದರು. ಆದರೆ, ಅದು ದುರುಪಯೋಗವಾಗಿದ್ದು ಹಾಗೂ ಸರಿಯಾಗಿ ವಿತರಣೆ ಆಗಲಿಲ್ಲ. ದುರುಪಯೋಗ ಆಗಬಾರದು ಎನ್ನುವ ಕಾರಣಕ್ಕೆ 1.20 ಲಕ್ಷ ಹಣ ಹಾಗೂ ಮನೆ ನಿರ್ಮಾಣ ಮಾಡಿ ಕೊಡುತ್ತೇವೆ. ಸಂತ್ರಸ್ತರು ಇದ್ದ ಜಾಗದಲ್ಲಿ ಬೇಕಾದರೂ ಮನೆ ಕಟ್ಟಿ ಕೊಡುತ್ತೇವೆ. ಬೇರೆಡೆ ಆದರೂ ಮನೆ ಕಟ್ಟಿ ಕೊಡುತ್ತೇವೆ" ಎಂದು ಭರವಸೆ ನೀಡಿದರು.
"ಎನ್ಡಿಆರ್ಎಫ್ ಜೊತೆಗೆ ರಾಜ್ಯ ಸರ್ಕಾರದ ಬೇರೆ ಪರಿಹಾರ ಕೊಡುತ್ತೇವೆ. ಈಗಾಗಲೇ 17 ಜನರಿಗೆ ಮನೆ ಪರಿಹಾರ ವಿತರಿಸಿದ್ದೇವೆ. ಕೃಷಿ ಬೆಳೆ 41 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. ವಿದ್ಯುತ್ ಕಂಬಗಳನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ. ಮಳೆ ನಿಂತ ಮೇಲೆ ಎಲ್ಲ ಕೆಲಸ ಮಾಡುತ್ತೇವೆ. ಬೆಳೆ ಹಾನಿ ಬಗ್ಗೆ ಸರ್ವೇ ಮಾಡಿಸುತ್ತೇನೆ. ತಾಂತ್ರಿಕ ವರದಿ ಪಡೆದು ಲೋಳಸೂರ ಸೇತುವೆ ಎತ್ತರ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ, ದುಡ್ಡು ಇಲ್ಲ ಅಂದರೆ ಇದೆಲ್ಲಾ ಹೇಗೆ ಮಾಡಲು ಸಾಧ್ಯ?. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಆರ್ಎಸ್ಎಸ್ನವರು ಇದನ್ನೇ ಮಾಡಿದ್ದಾರೆ" ಎಂದು ಟೀಕಿಸಿದರು.
ಪಾದಯಾತ್ರೆ ಮುಗಿಯೋ ಒಳಗೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂಬ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಉತ್ತರಿಸಿ, "ಯಡಿಯೂರಪ್ಪ ಫೋಕ್ಸೋ ಕೇಸ್ನಲ್ಲಿ ಸಿಕ್ಕಿದ್ದಾರೆ. ಅವರು ರಾಜಕೀಯದಲ್ಲಿ ಇರಲು ಲಾಯಕ್ಕಾ?. ಅವರ ಮೇಲೆ ಎಷ್ಟು ಕೇಸ್ ಇದ್ದಾವೆ ಗೊತ್ತಾ?. ನನ್ನ ರಾಜೀನಾಮೆ ಕೇಳಲು ಏನು ನೈತಿಕತೆ ಇದೆ?. ಕೋರ್ಟ್ ಜಾಮೀನು ನೀಡಿದೆ ಅಂತಾ ಹೊರಗಡೆ ಇದ್ದಾರೆ. ಅವರ ತಟ್ಟೆಯಲ್ಲಿ ಹೆಗ್ಗಣ ಅಲ್ಲಾ, ಕತ್ತೆ ಬಿದ್ದಿದೆ. 21 ಪ್ರಕರಣಗಳ ಕುರಿತು ಅಸೆಂಬ್ಲಿಯಲ್ಲಿ ಪ್ರಸ್ತಾಪ ಮಾಡಿದ್ದೇನೆ. ಕೆಲವು ಸಿಐಡಿ ವಿಚಾರಣೆ ನಡೆಯುತ್ತಿದೆ" ಎಂದು ಗುಡುಗಿದರು.
ಸಿಎಂ ಕಾರ್ಗೆ ಅಡ್ಡ ಬಂದ ಗೂಳಿ: ಗೋಕಾಕ್ ನಗರದ ಮಾರ್ಕೇಟ್ನಲ್ಲಿ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿ ವಾಪಸ್ ತೆರಳುವ ವೇಳೆ ಸಿದ್ದರಾಮಯ್ಯ ಬೆಂಗಾವಲು ವಾಹನಕ್ಕೆ ಗೂಳಿಯೊಂದು ಅಡ್ಡ ಬಂತು. ಬೆಂಗಾಲು ವಾಹನ ನೋಡಿ ಹೆದರಿದ ಗೂಳಿ ಅಡ್ಡಾದಿಡ್ಡಿ ಓಡಿತು. ಇದರಿಂದ ಕೆಲಕಾಲ ಆತಂಕ ಉಂಟಾಗಿತ್ತು.