ಬೆಳಗಾವಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು ಮತ್ತು ಶಾಸಕರು ಇಂದು ಶಕ್ತಿ ಪೀಠದ ಸವದತ್ತಿ ಯಲ್ಲಮ್ಮದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಸವದತ್ತಿಯ ಯಲ್ಲಮ್ಮ ಗುಡ್ಡಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ವಾದ್ಯ ಮೇಳಗಳೊಂದಿಗೆ ಸ್ವಾಗತಿಸಲಾಯಿತು. ಮಂತ್ರ ಘೋಷಗಳೊಂದಿಗೆ ದೇವಿ ದರ್ಶನಕ್ಕೆ ಅರ್ಚಕರು ಆಹ್ವಾನಿಸಿದರು. ಇದೇ ವೇಳೆ ದೇವಸ್ಥಾನದ ಅರ್ಚಕ ಕೊಟ್ಟ ಎರಡು ಲಿಂಬೆಹಣ್ಣುಗಳನ್ನು ಕೈಯಲ್ಲಿ ಹಿಡಿದುಕೊಂಡು ದೇವಸ್ಥಾನ ಪ್ರವೇಶಿಸಿದ ಸಿದ್ದರಾಮಯ್ಯ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪತ್ನಿ ಹೆಸರಲ್ಲಿ ಸಿಎಂ ಪೂಜೆ: ಪತ್ನಿ ಪಾರ್ವತಿ ಹೆಸರಲ್ಲಿ ಸಿದ್ದರಾಮಯ್ಯ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅರ್ಚಕರು ಅವರ ಹೆಸರಲ್ಲಿ ಪೂಜೆ ಸಲ್ಲಿಸಿ, ಮಂಗಳಾರತಿ ನೀಡಿ, ನಾಗಮೂರ್ತಿ ದೇವಿಯ ಬೆಳ್ಳಿ ಕಿರೀಟವನ್ನು ಸಿದ್ದರಾಮಯ್ಯ ಅವರ ತಲೆಗೆ ಮುಟ್ಟಿಸಿ ಆಶೀರ್ವಾದ ಮಾಡಿದರು. ದೇವಿಯ ಆರತಿ ಆಗುವವರೆಗೂ ದೇವಿ ಸನ್ನಿಧಾನದಲ್ಲಿ ನಿಂತು ದರ್ಶನ ಪಡೆದ ಸಿಎಂ, ತಾವೇ ಕುಂಕುಮ ಹಚ್ಚಿಕೊಂಡರು. ಬಳಿಕ ಆರತಿ ತಟ್ಟೆಗೆ 500 ರೂ. ಹಾಕಿದರು.
ದೇವಿ ಮುಂದೆ 10 ನಿಮಿಷ ಕುಳಿತು ಡಿಸಿಎಂ ಡಿ.ಕೆ. ಶಿವಕುಮಾರ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಹೊರಗೆ ಡಿಕೆಶಿ ಬರೋವರೆಗೆ ಸಿಎಂ ಸಿದ್ದರಾಮಯ್ಯ ಕಾದು ನಿಂತಿದ್ದರು. ಈ ವೇಳೆ ಸಚಿವರಾದ ಹೆಚ್.ಕೆ. ಪಾಟೀಲ, ರಾಮಲಿಂಗಾರೆಡ್ಡಿ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ಭರಮಗೌಡ ಕಾಗೆ, ಆಸೀಫ್ ಸೇಠ್, ಎನ್.ಹೆಚ್. ಕೋನರೆಡ್ಡಿ, ಚನ್ನರಾಜ ಹಟ್ಟಿಹೊಳಿ ಸೇರಿ ಮತ್ತಿತರರು ಸಿಎಂ ಸಿದ್ದರಾಮಯ್ಯ ಅವರಿಗೆ ಸಾಥ್ ಕೊಟ್ಟರು.
ದೇವಿ ದರ್ಶನ ಪಡೆದು ವಾಪಸ್ ಆಗುವಾಗ ಸಿಎಂ ಸಿದ್ದರಾಮಯ್ಯ ಅವರಿಗೆ ಸವದತ್ತಿ ಯಲ್ಲಮ್ಮ ದೇವಿಯ ಅರ್ಚಕರು ರಾಜ್ಯದಲ್ಲಿರುವ ಅರ್ಚಕರ ವೇತನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ವೇತನ ಬಿಡುಗಡೆ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು. ದೇವಸ್ಥಾನದಿಂದ ಹೊರ ಬಂದ ಸಿದ್ದರಾಮಯ್ಯ ಜನರತ್ತ ಕೈ ಬೀಸಿದರು.
ಇದನ್ನೂ ಓದಿ: ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; 5ನೇ ಬಾರಿಗೆ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು
ಉತ್ತಮ ವಸತಿ ಹಾಗೂ ಸುಗಮ ದರ್ಶನಕ್ಕೆ ವ್ಯವಸ್ಥೆ: ದೇವಿ ದರ್ಶನ ಬಳಿಕ ಸಿಎಂ ಅವರು ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮತ್ತು ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಪ್ರಥಮ ಸಭೆ ನಡೆಸಿದರು. ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಪ್ರತಿವರ್ಷ ಕೋಟ್ಯಂತರ ಭಕ್ತರು ಭೇಟಿ ನೀಡುವುದರಿಂದ ಉತ್ತಮ ವಸತಿ ಹಾಗೂ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಇತರೆ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಬೇಕು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಉತ್ತಮ ವಸತಿ ಹಾಗೂ ದರ್ಶನಕ್ಕೆ ಅನುಕೂಲ ಕಲ್ಪಿಸಬೇಕು ಎಂದರು.
ತಿರುಪತಿ ಮಾದರಿ ಅಭಿವೃದ್ಧಿ: ತಿರುಪತಿ ಮಾದರಿಯನ್ನು ಅಧ್ಯಯನ ಮಾಡಿಕೊಂಡು ಅದೇ ಮಾದರಿಯಲ್ಲಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸಿಎಂ ಸೂಚನೆ ನೀಡಿದರು. 45 ಕೋಟಿ ಬ್ಯಾಂಕಿನಲ್ಲಿದ್ದು, ವಾರ್ಷಿಕ ಅಂದಾಜು 25 ಕೋಟಿ ಆದಾಯ ಬರುತ್ತಿದೆ. ಉತ್ತಮ ಸೌಲಭ್ಯ ಒದಗಿಸುವ ಮೂಲಕ ಭಕ್ತರ ಭೇಟಿಯ ಪ್ರಮಾಣ ಹೆಚ್ಚಿಸಬೇಕು. ಹುಣ್ಣಿಮೆ ಸಂದರ್ಭದಲ್ಲಿ ಚಕ್ಕಡಿಗಳಲ್ಲಿ ಜನರು ಬರುತ್ತಾರೆ. ಅಂತಹ ವೇಳೆ ಜಾನುವಾರುಗಳಿಗೆ ಮೇವು ಬ್ಯಾಂಕ್ ಸ್ಥಾಪಿಸಬೇಕು. ದೇವಸ್ಥಾನ ಹಾಗೂ ಸುತ್ತಮುಲಿನಲ್ಲಿರುವ ಸರ್ಕಾರದ ಜಮೀನು ಒತ್ತುವರಿ ಆಗದಂತೆ ತಡೆಯಲು ಕಂಪೌಂಡ್ ಹಾಕಬೇಕು. ಸದ್ಯಕ್ಕೆ ವ್ಯಾಪಾರ ವಹಿವಾಟು ಮಾಡುವ ಜನರಿಗೆ ಪ್ರತ್ಯೇಕ ಜಾಗ ಗುರುತಿಸಿ, ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಸಿಎಂ ಸೂಚನೆ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಸೋಲಾರ್ ಪಾರ್ಕ್, ರೋಪ್ ವೇ ಮತ್ತಿತರ ಯೋಜನೆಗಳನ್ನು ಜಾರಿಗೊಳಿಸಬೇಕು. ಪಿಪಿಪಿ ಮಾದರಿ ಯೋಜನೆಗಳಡಿ ಬಂಡವಾಳ ಹೂಡಿಕೆಗೆ ಮುಂದಾಗುವಂತವರಿಗೆ ಕನಿಷ್ಠ 60 ವರ್ಷ ಗುತ್ತಿಗೆ ನೀಡಬೇಕು ಎಂದರು.
ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಪ್ರವಾಸೋದ್ಯಮ ಮತ್ತು ದೇವಸ್ಥಾನ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು. ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ಸರ್ಕಾರದ ವತಿಯಿಂದ 25 ಕೋಟಿ ರೂಪಾಯಿ ನೀಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಸುಕ್ಷೇತ್ರ ಯಲ್ಲಮ್ಮನ ಗುಡ್ಡದ ಸಮಗ್ರ ಅಭಿವೃದ್ಧಿ ಯೋಜನೆಯ ರೂಪುರೇಷೆಗಳನ್ನು ಸಭೆಯಲ್ಲಿ ವಿವರಿಸಿದರು. ಸುಗಮ ದರ್ಶನ ಹಾಗೂ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಯೋಜನೆ ರೂಪಿಸಲಾಗಿದೆ. ಎಣ್ಣೆಹೊಂಡದಲ್ಲಿ ಸರದಿ ವ್ಯವಸ್ಥೆ, ರಾಮೇಶ್ವರಂ ಮಾದರಿಯಲ್ಲಿ ಮೇಲಿನಿಂದ ನೀರಿನ ಸಿಂಪರಣೆ ಹಾಗೂ ಸ್ನಾನದ ಬಳಿಕ ಬಟ್ಟೆ ಬದಲಾಯಿಸಲು ಕೂಡ ವ್ಯವಸ್ಥೆ ಮಾಡುವ ಯೋಜನೆಯನ್ನು ವಿವರಿಸಿದರು. ಮುಜರಾಯಿ ಹಾಗೂ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ವಿಜಯೇಂದ್ರ ಏನು ಜ್ಯೋತಿಷಿನಾ..? ಸಿಎಂ ಸಿದ್ದರಾಮಯ್ಯ ತಿರುಗೇಟು:
ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಬೆಳಗಾವಿ ಅಧಿವೇಶನಕ್ಕೆ ಹೊಸ ಸಿಎಂ ಇರುತ್ತಾರೆ ಎಂದು ಹೇಳಿಕೆ ನೀಡಿದ್ದ ಬಿ.ವೈ.ವಿಜಯೇಂದ್ರಗೆ ತಿರುಗೇಟು ನೀಡಿದರು. ವಿಜಯೇಂದ್ರ ಏನು ಪುರೋಹಿತನಾ..? ಜ್ಯೋತಿಷಿನಾ ಎಂದು ಪ್ರಶ್ನಿಸಿದರು. ವಿಜಯೇಂದ್ರಗೆ ನನ್ನ ರಾಜೀನಾಮೆ ಕೇಳುವ ನೈತಿಕತೆ ಏನಿದೆ? ಪೋಕ್ಸೋ ಕೇಸ್ನಲ್ಲಿ ಅವರ ತಂದೆ ಯಡಿಯೂರಪ್ಪ ಬೇಲ್ ಮೇಲೆ ಹೊರಗೆ ಇದ್ದಾರೆ. ಮೊದಲು ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕಿಡಿಕಾರಿದರು.
ಇದನ್ನೂ ಓದಿ: ಪ್ರಲ್ಹಾದ್ ಜೋಶಿಯವರೇ ಭಯೋತ್ಪಾದಕರು: ಸಿಎಂ ಸಿದ್ದರಾಮಯ್ಯ