ಹಾವೇರಿ: ನನ್ನ ಮೇಲೆ ಹೊಟ್ಟೆ ಉರಿ, ಸಿದ್ದರಾಮಯ್ಯ ಎರಡನೇ ಸಲ ಸಿಎಂ ಆಗಿಬಿಟ್ಟನಲ್ಲಾ ಎಂದು ಅಸೂಯೆ ಪಡ್ತಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಟೀಕಿಸಿದರು. ರಾಣೆಬೆನ್ನೂರು ತಾಲೂಕು ದೇವರಗುಡ್ಡ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಬಳಿಕ ಸಿಎಂ ಮಾತನಾಡಿದರು. ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಹಿಡಿದು ಕೊಟ್ಟವರು ನಮ್ಮವರೇ. ದ್ವೇಷ ರಾಜಕೀಯ ಮಾಡುವವರು ಎಲ್ಲ ಕಾಲದಲ್ಲೂ ಇರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಹಿಂದುಳಿದ ಜಾತಿಗೆ ಸೇರಿದ ಸಿದ್ದರಾಮಯ್ಯ ಸಿಎಂ ಆಗಿಬಿಟ್ಟ ಅಂತ ಅವರಿಗೆ ಹೊಟ್ಟೆ ಉರಿ. ಜನರ ಆಶೀರ್ವಾದ ಇರುವವರೆಗೆ ನನ್ನ ಅಲ್ಲಾಡಿಸಲು ಆಗಲ್ಲ. ಎಷ್ಟೇ ದ್ವೇಷ , ಹೊಟ್ಟೆ ಕಿಚ್ಚು ಪಟ್ಟರೂ ನಾಶ ಆಗ್ತಾರೆ. ನಾನು ನಾಶ ಆಗಲ್ಲ. ನಾನು ಮಾತ್ರ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಸಿಎಂ ತಿಳಿಸಿದರು.
ಮಾಲತೇಶ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯುವ ಅವಕಾಶ ಸಿಕ್ಕಿದೆ. ಮಾಲತೇಶ ಸ್ವಾಮಿ ಎಲ್ಲರಿಗೂ ಒಳ್ಳೆದು ಮಾಡಲಿ. ನಾಡಿಗೆ ಒಳ್ಳೆದು ಮಾಡಲಿ. ನನಗೆ ಒಳ್ಳೆದು ಮಾಡಲಿ ಎಂದರು.
ಜನರಿಗೆ ನಂಬಿಕೆ ದ್ರೋಹ ಮಾಡಬಾರದು: ರಾಜಕಾರಣದಲ್ಲಿ ಜನರ ಆಶೀರ್ವಾದ ಇಲ್ಲದೇ ಏನೂ ಮಾಡಲು ಆಗಲ್ಲ. ನಿಮ್ಮ ಆಶೀರ್ವಾದದ ಕಾರಣ ನಾನು ಸಿಎಂ ಆಗಿದ್ದೇನೆ. ಜನರ ಆಶೀರ್ವಾದ ಸಿಕ್ಕ ಮೇಲೆ ಜನರಿಗೆ ನಂಬಿಕೆ ದ್ರೋಹ ಮಾಡಬಾರದು. ಮಾತು ಕೊಟ್ಟಂತೆ ಕಾರ್ಯಗತ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಕಷ್ಟ ದೂರ ಮಾಡಿಸಲು ಮಾಲತೇಶ ದೇವರ ದರ್ಶನ ಮಾಡಿಸಿ, ಪೂಜೆ ಮಾಡಿಸಿದ್ದೇವೆ. ಸಂಕಷ್ಟ ದೂರವಾಗಲಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ 136 ಸೀಟು ಕೊಟ್ಟಿದ್ದೀರಿ. ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿ, ಜನರಿಗೆ ಅನುಕೂಲ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಟ ಮಾಡಿ ಬರಗಾಲದಲ್ಲಿ ಹಣ ತಂದವರು ಸಿಎಂ ಸಿದ್ದರಾಮಯ್ಯ. ಈಗ ಸಿದ್ದರಾಮಯ್ಯ ಕಾಲು ಜಗ್ಗುವ ಕೆಲಸ ಮಾಡುತ್ತಿದ್ದಾರೆ. ಜನರ ಆಶೀರ್ವಾದ, ಶಾಸಕರ ಬೆಂಬಲ ಮತ್ತು ಹೈಕಮಾಂಡ್ ಆಶೀರ್ವಾದ ಸಿದ್ದರಾಮಯ್ಯ ಮೇಲಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ಆಗುತ್ತದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಿಂಥಿಣಿ ಕನಕ ಶಾಖಾಮಠದ ಸಿದ್ದರಾಮಾನಂದ ಸ್ವಾಮೀಜಿ, ಸಿದ್ದರಾಮಯ್ಯ ನಡಿಗೆ ಮಾಲತೇಶ ಕಡೆ ಅಂತಿದ್ದರು. ಅರ್ಧ ಭಾರತವನ್ನೇ ಭಕ್ತರನ್ನ ಮಾಡಿಸಿಕೊಂಡ ಕ್ಷೇತ್ರ ದೇವರಗುಡ್ಡ. ಯಾವುದೇ ಜಾತಿ, ಭೇದ ಇಲ್ಲದೆ ಭಕ್ತರು ದರ್ಶನ ಪಡೆಯುತ್ತಿದ್ದ ಶ್ರೀ ಕ್ಷೇತ್ರ. ಕುರುಬರ ನಾಲಿಗೆ ಕರಿ ನಾಲಿಗೆ ಅಂತಾರೆ. ಕುರುಬರು ಹೇಳುವ ಮಾತು ಸತ್ಯ. ಗುರು ಪರಂಪರೆ ಅಂದರೆ ಗೊರವಯ್ಯ. ಮಲ್ಲಯ್ಯ ಆರ್ಶೀವಾದ ಇರಲಿ ಅಂತಾ ಈಗ ಕರೆದುಕೊಂಡು ಬಂದಿದ್ದಾರೆ. ಸಮಸ್ಯೆ ಇಲ್ಲ, ಸಮಸ್ಯೆಯನ್ನ ಸೃಷ್ಟಿ ಮಾಡಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಜಾತಿ ಕಾರಣಕ್ಕೆ ದ್ವೇಷ ಮಾಡಬಹುದು. ಆದರೆ ಜಾತ್ಯಾತೀತ ನಾಯಕ ಸಿದ್ದರಾಮಯ್ಯ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ : ವಿಜಯೇಂದ್ರ ಕೇಳಿದ ಕೂಡಲೇ ನಾನು ರಾಜೀನಾಮೆ ಕೊಡಬೇಕಾ?: ಸಿಎಂ ಸಿದ್ದರಾಮಯ್ಯ - CM Siddaramaiah