ಬೆಂಗಳೂರು : ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಹೈಕಮಾಂಡ್ ಪಟ್ಟಿ ಬಿಡುಗಡೆ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ವಿಧಾನಸೌಧದ ಆವರಣದಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಾಸಕರ ನೇಮಕಾತಿ ಪೂರ್ಣಗೊಂಡಿದೆ. ಆದರೆ, ಪಕ್ಷದ ಕಾರ್ಯಕರ್ತರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಗೊಂದಲವಿತ್ತು. ಈ ವಿಚಾರದ ಬಗ್ಗೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಜೊತೆ ಚರ್ಚಿಸಿ ಅಂತಿಮ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರಿಗೆ ಕಳುಹಿಸಿದ್ದೇವೆ. ಈ ಅಂತಿಮ ಪಟ್ಟಿಗೆ ಕಾಂಗ್ರೆಸ್ ಮುಖಂಡ ಕೆ. ಸಿ ವೇಣುಗೋಪಾಲ್ ಅಂಕಿತ ಹಾಕಬೇಕಿದೆ ಎಂದು ತಿಳಿಸಿದರು.
ನಿಗಮ ಮಂಡಳಿ ಅಧ್ಯಕ್ಷ ನೇಮಕ ಕುರಿತಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಜೊತೆ ಚರ್ಚೆ ನಡೆಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಎಲ್ಲರ ಜೊತೆಗೂ ಚರ್ಚೆ ಮಾಡಲು ಸಾಧ್ಯವಿಲ್ಲ. ಈ ಮೊದಲು ಅವರ ಜೊತೆಗೂ ಚರ್ಚಿಸಿದ್ದೇವೆ ಎಂದು ಹೇಳಿದರು.
ರಾಜಕೀಯ : ರಾಮಲಲ್ಲಾ ಉದ್ಘಾಟನೆ ವಿಷಯವನ್ನು ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದ್ದಾರೆ. ರಾಜ್ಯದಲ್ಲೂ ರಾಮಮಂದಿರ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ದೇವಾಲಯಗಳು ಇಲ್ಲವೇ?. ಕೇವಲ ಅಯೋಧ್ಯೆಯಲ್ಲಿ ಮಾತ್ರ ರಾಮ ದೇವಾಲಯವಿದೆಯೇ? ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಅವರು ಕೈಗೊಂಡಿರುವ ಭಾರತ ನ್ಯಾಯಯಾತ್ರೆ ಅಸ್ಸೋಂನಲ್ಲಿ ಅಡ್ಡಿಪಡಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ, ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ ಎಂದು ಕಿಡಿಕಾರಿದರು. ದೇಶದ ಹಾಗೂ ಜನರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಯಾವುದೇ ಪಕ್ಷದ ನಾಯಕನಿಗೆ ಯಾತ್ರೆ ಕೈಗೊಳ್ಳಲು ಅವಕಾಶವಿದೆ. ಆದರೆ, ಬಿಜೆಪಿ ಇದಕ್ಕೆ ಅಡ್ಡಿಪಡಿಸುತ್ತಿದೆ. ಈ ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು ಎಂದು ಹೇಳಿದರು.
ಸುಭಾಷ್ ಚಂದ್ರ ಬೋಸ್ ಅಪ್ರತಿಮ ದೇಶಪ್ರೇಮಿ : ಸುಭಾಷ್ ಚಂದ್ರ ಬೋಸ್ ಅಪ್ರತಿಮ ದೇಶಪ್ರೇಮಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸುಭಾಷ್ ಚಂದ್ರ ಬೋಸ್ ಅವರ 127 ನೇ ಜಯಂತಿಯನ್ನು ಆಚರಿಸುತ್ತಿದ್ದು, ಇಂದು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ಮರಿಸಿ, ಗೌರವಿಸಿದ್ದೇವೆ. ಕಾಂಗ್ರೆಸ್ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು ಎಂದರು.
ಗಾಂಧೀಜಿ ಹಾಗೂ ಸುಭಾಷ್ ಚಂದ್ರ ಬೋಸ್ ನಡುವೆ ಸ್ವಾತಂತ್ರ್ಯ ಹೋರಾಟದ ಹಾದಿಯ ಬಗ್ಗೆ ಭಿನ್ನಾಭಿಪ್ರಾಯ ಮೂಡಿತ್ತು. ಮಹಾತ್ಮ ಗಾಂಧೀಜಿ ಶಾಂತಿ, ಅಹಿಂಸೆ ಮೂಲಕ ಸ್ವಾತಂತ್ರ್ಯ ಗಳಿಸಬೇಕು ಎಂದರೆ, ಸುಭಾಷ್ ಚಂದ್ರ ಬೋಸ್ ಅವರಿಗೆ ಅದರ ತದ್ವಿರುದ್ಧವಾದ ನಿಲುವು ಇತ್ತು. ಬೇರೆ ವಿಚಾರಗಳಲ್ಲಿ ಗಾಂಧೀಜಿ ಯವರ ಬಗ್ಗೆ ಅಪಾರವಾದ ಗೌರವವಿತ್ತು. ಈ ವಿಚಾರದಲ್ಲಿ ಮಾತ್ರ ಆಲೋಚನೆಗಳಲ್ಲಿ ಭಿನ್ನಾಭಿಪ್ರಾಯ ಇತ್ತು. ಭಾರತೀಯ ರಾಷ್ಟ್ರೀಯ ಸೇನೆಯನ್ನು ಸ್ಥಾಪಿಸಿ ಅದರ ಮುಖ್ಯಸ್ಥರಾಗಿದ್ದರು ಎಂದರು.
ತತ್ವಾದರ್ಶಗಳು ನಮಗೆ ದಾರಿದೀಪವಾಗಲಿ : ಜಪಾನ್ ದೇಶದಲ್ಲಿ ಅವರು ವಿಮಾನ ದುರಂತದಲ್ಲಿ ಸಾವಿಗೀಡಾದರು. ಅಪ್ರತಿಮ ಸ್ವಾತಂತ್ರ್ಯ ಪ್ರೇಮಿ, ದೇಶಪ್ರೇಮಿಯಾಗಿದ್ದರು. ಸುಭಾಷ್ ಚಂದ್ರ ಬೋಸ್ ಅವರು ನಮಗೆಲ್ಲಾ ಆದರ್ಶ. ಅವರ ಆದರ್ಶಗಳನ್ನು ನಾವೆಲ್ಲರೂ ಅನುಸರಿಸುವುದೇ ಅವರಿಗೆ ಸಲ್ಲಿಸುವ ಗೌರವ. ಅವರ ತತ್ವಾದರ್ಶಗಳು ನಮಗೆ ದಾರಿದೀಪವಾಗಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಶ್ರೀರಾಮನ ವಿರುದ್ಧವೆಂಬ ಅಪಪ್ರಚಾರವನ್ನು ಖಂಡಿಸುತ್ತೇನೆ: ಸಿಎಂ ಸಿದ್ದರಾಮಯ್ಯ