ಬೆಂಗಳೂರು: ಹಳ್ಳಿಕಾರ ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಬಗ್ಗೆ ವರದಿ ತರಿಸಿಕೊಂಡು ನಂತರ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ರಾಜ್ಯ ಹಳ್ಳಿಕಾರರ ಸಂಘದ ವತಿಯಿಂದ ಪೂರ್ಣಿಮಾ ಪ್ಯಾಲೇಸ್ನಲ್ಲಿ ಆಯೋಜಿಸಿದ್ದ ಹಳ್ಳಿಕಾರ ಸಮುದಾಯದ ಸಮಾವೇಶ ಉದ್ಘಾಟಿಸಿ ಹಳ್ಳಿಕಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದ ಬಳಿಕ ಅವರು ಮಾತನಾಡಿದರು. ನನಗೆ ಹಳ್ಳಿಕಾರ ಸಮುದಾಯದ ಬಗ್ಗೆ ಸಹಾನುಭೂತಿ ಇದೆ. ಖಂಡಿತ ಸಹಾಯ ಮಾಡ್ತೀನಿ. ಹಳ್ಳಿಕಾರ ಸಮುದಾಯವನ್ನು ಪ್ರವರ್ಗ 3ಎಗೆ ಸೇರಿಸಿದ್ದು ಸರಿಯಲ್ಲ. ಪ್ರವರ್ಗ 1ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಬಗ್ಗೆ ವರದಿ ತರಿಸಿಕೊಂಡು ನಂತರ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ನಮ್ಮ ಸರ್ಕಾರ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದೆ : ಜಾತಿ ತಾರತಮ್ಯದ ವ್ಯವಸ್ಥೆಯಲ್ಲಿ ಶಿಕ್ಷಣ ಇಲ್ಲದಿದ್ದರೆ ಸಮಾಜದ ಮುಖ್ಯವಾಹಿನಿಯಲ್ಲಿ ಸಮರ್ಥವಾಗಿರುವುದು ಕಷ್ಟ. ಹಳ್ಳಿಕಾರ ಸಮುದಾಯವನ್ನು ಪ್ರವರ್ಗ 3A ಯಿಂದ ಪ್ರವರ್ಗ 1ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಇದೆ. ಸಮಾಜದಲ್ಲಿ ಯಾವ್ಯಾವ ಜಾತಿಯ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯಲು ಜಾತಿ ಸಮೀಕ್ಷಾ ವರದಿಗಳು ಮುಖ್ಯ. 2011ರಲ್ಲಿ ಜನಗಣತಿಯೇ ಕೊನೆ ಗಣತಿ. ಈಗ ನಮ್ಮ ಸರ್ಕಾರ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದೆ ಎಂದರು.
ಸಮುದಾಯವನ್ನು ಪ್ರವರ್ಗ 3ಎಗೆ ಸೇರಿಸಿರುವುದು ಸರಿಯಲ್ಲ: ಕೇಂದ್ರದ ಮೋದಿ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ನೀಡಿದೆ. ಈ ವ್ಯಾಪ್ತಿಯೊಳಗೆ ಹಳ್ಳಿಕಾರ ಸಮುದಾಯ ಬರುತ್ತದೆಯಾ ಎನ್ನುವುದನ್ನ ಪರಿಶೀಲಿಸಬೇಕಿದೆ. ಈ ಸಮುದಾಯವನ್ನು ಪ್ರವರ್ಗ 3ಎಗೆ ಸೇರಿಸಿರುವುದು ಸರಿಯಲ್ಲ. ಆದ್ದರಿಂದ ಶಾಶ್ವತ ಹಿಂದುಳಿದ ಆಯೋಗಕ್ಕೆ ನಿಮ್ಮ ಬೇಡಿಕೆ ಕಳುಹಿಸಿ ಅಧ್ಯಯನ ಮಾಡಿಸಿ, ವರದಿ ಪಡೆಯಲಾಗುವುದು. ಆ ಬಳಿಕ ಸಮುದಾಯಕ್ಕೆ ನ್ಯಾಯಯುತವಾಗಿ ಏನು ಸಲ್ಲಬೇಕು ಎನ್ನುವುದನ್ನು ಪರಿಶೀಲಿಸಲಾಗುವುದು ಎಂದು ಸಿಎಂ ಹೇಳಿದರು.
ಹಳ್ಳಿಕಾರರ ಸಂಘದ ಉಪಾಧ್ಯಕ್ಷರಾದ ಕೆ. ಎಂ ನಾಗರಾಜು ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಡಿಸಿಎಂ ಡಿ. ಕೆ ಶಿವಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್. ಎಂ ರೇವಣ್ಣ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ. ಬಿ ಜಯಚಂದ್ರ, ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ಸಚಿವರುಗಳಾದ ರಾಮಲಿಂಗ ರೆಡ್ಡಿ, ಡಿ. ಸುಧಾಕರ್, ಮಾಜಿ ಸಚಿವರಾದ ಶಾಸಕ ಎಸ್. ಟಿ ಸೋಮಶೇಖರ್, ಬೆಂ. ಕೃಷ್ಣಪ್ಪ, ಪ್ರಿಯಕೃಷ್ಣ, ಹಳ್ಳಿಕಾರ ಸಮುದಾಯದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ : ಜಾತಿ ಗಣತಿ, ಉಪ ಚುನಾವಣೆ, ಒಳ ಮೀಸಲಾತಿ ಚರ್ಚೆಗೆ ಇಂದು ಸಚಿವರೊಂದಿಗೆ ಸಿಎಂ ಸಭೆ