ಬಳ್ಳಾರಿ: ’’ಜನಾರ್ದನ ರೆಡ್ಡಿ ಜುಜುಬಿ ರಾಜಕಾರಣಿ, ಅವನು ಎಷ್ಟು ವರ್ಷ ಜೈಲಿಗೆ ಹೋಗಿದ್ದಾನೆ. ಬಳ್ಳಾರಿ ಜಿಲ್ಲೆಯಲ್ಲಿ ಎಷ್ಟು ಅಕ್ರಮ ಗಣಿಗಾರಿಕೆ ಮಾಡಿದ್ದಾನೆ. ಅವನಿಗೆ ನಾಚಿಕೆ ಆಗಬೇಕು. ಮಾನ ಮರ್ಯಾದೆ ಇದೆಯಾ ಅವನಿಗೆ?‘‘ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸಂಡೂರಿನ ವಿಠಲಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ ಜನಾರ್ದನರೆಡ್ಡಿ ಅಟ್ಟಹಾಸ ಮುರಿದಿದ್ದು ಇದೇ ಸಿದ್ದರಾಮಯ್ಯ. ಬಳ್ಳಾರಿ ಬೈ ಎಲೆಕ್ಷನ್ ಗೆ ಬಂದಿದ್ದ ನನಗೆ ಒಂದು ಮನೆಯಲ್ಲಿ ಕುಡಿಯಲು ನೀರು ಕೊಡಲಿಲ್ಲ. ಬಳ್ಳಾರಿಯಲ್ಲಿ ಅಷ್ಟೊಂದು ಭಯದ ವಾತಾವರಣ ಇತ್ತು, ನನಗೆ ಭಾಷಣ ಮಾಡಲು ಬಳ್ಳಾರಿಯಲ್ಲಿ ಜಾಗ ಕೊಡಲಿಲ್ಲ. ನಾವು ಅಧಿಕಾರದಲ್ಲಿದ್ದಾಗ ಹಾಗೆ ಮಾಡಿದ್ವಾ?, ಯಡಿಯೂರಪ್ಪ ಜನಾರ್ದನರೆಡ್ಡಿಗೆ ನಾವು ಹಾಗೆ ಮಾಡುತ್ತೀವಾ?. ಜನಾರ್ದನರೆಡ್ಡಿಗೆ ಪ್ರಜಾಪ್ರಭುತ್ವ ಅಂದ್ರೆ ಗೊತ್ತಿಲ್ಲ ಎಂದು ಟೀಕಿಸಿದರು.
ನಾನು 40 ವರ್ಷದಿಂದ ರಾಜಕಾರಣ ಮಾಡುತ್ತಿರುವೆ, ಜನಾರ್ದನರೆಡ್ಡಿ ರಾಜ್ಯಕ್ಕೆ ನಿನ್ನ ಕೊಡುಗೆ ಏನು?, ಅಕ್ರಮ ಗಣಿಗಾರಿಕೆ ಬಗ್ಗೆ ಪ್ರಸ್ತಾಪ ಮಾಡಿದ್ರೆ ಬಾಯಿಗೆ ಬಂದಂಗೆ ಮಾತನಾಡ್ತೀಯಾ?, ಜನಾರ್ದನರೆಡ್ಡಿಗೆ ಅಹಂ ಇದೆ ತಕ್ಕಪಾಠ ಕಲಿಸಬೇಕು. ಗಂಗಾವತಿಯಲ್ಲಿ ಇವರು ಸೋಲುತ್ತಿದ್ರು, ನಮ್ಮ ಅಭ್ಯರ್ಥಿ ಸರಿಯಾಗಿ ಪ್ರಚಾರ ಮಾಡಲಿಲ್ಲ, ನಾನು ಕೂಡ ಗಂಗಾವತಿಗೆ ಪ್ರಚಾರಕ್ಕೆ ಹೋಗಿರಲಿಲ್ಲ ಎಂದರು.
ಜನರ ಕೆಲಸ ಮಾಡದೇ ವೋಟ್ ಕೇಳ್ತೀರಾ?, ಬಿಜೆಪಿ ಅವರಿಗೆ ವೋಟ್ ಕೇಳಲು ನೈತಿಕತೆ ಇಲ್ಲ. ನಾವು ಕೆಲಸ ಮಾಡಿದ್ದೀವಿ, ವೋಟ್ ಕೇಳ್ತೀವಿ, ನಾವು ಕೆಲಸ ಮಾಡಲಿಲ್ಲ ಅಂದ್ರೆ ವೋಟ್ ಕೊಡಬೇಡಿ. ಅನ್ನಭಾಗ್ಯ ಯೋಜನೆ ಕೊಟ್ಟಿದ್ದು ಈ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದು ಯಾರು?. ಯಡಿಯೂರಪ್ಪ, ಜನಾರ್ದನರೆಡ್ಡಿ ಮಾಡಿದ್ರಾ?, ಬಿಜೆಪಿ ಅವರು ಯಾವ ಮುಖ ಇಟ್ಟುಕೊಂಡು ವೋಟ್ ಕೇಳ್ತಾರೆ, ಬಿಜೆಪಿ ಅವರಿಗೆ ನಾಚಿಕೆ ಆಗಬೇಕು ಮಾನಮರ್ಯಾದೆ ಇಲ್ಲ. ಇಂಥವರು ರಾಜಕಾರಣದಲ್ಲಿ ಇರಬಾರದು. ಪ್ರಜಾಪ್ರಭುತ್ವ ಹಾಳಾಗಿ ಹೋಗುತ್ತೆ ಎಂದು ಹರಿಹಾಯ್ದರು.
ರಾಜ್ಯದಲ್ಲಿ ನಾನು ಎರಡನೇ ಬಾರಿ ಸಿಎಂ ಆಗಿದ್ದೇನೆ, ರಾಜ್ಯದ ಎಲ್ಲ ಬಡವರಿಗೆ ವಿಶೇಷ ಕಾರ್ಯಕ್ರಮ ಕೊಟ್ಟಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಬಿಜೆಪಿ ಅವರಂತೆ ಸುಳ್ಳು ಭರವಸೆ ನೀಡಿ ದ್ರೋಹ ಮಾಡಿಲ್ಲ, ಕಳೆದ ನಮ್ಮ ಸರ್ಕಾರದಲ್ಲಿ 165 ಭರವಸೆ ನೀಡಿ 158 ಭರವಸೆ ಈಡೇರಿಸಿದ್ದೇವೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಅದೆಷ್ಟೇ ಟೋಕನ್, ಹಣ ಹಂಚಿದರೂ ಗೆಲ್ಲೋದು ನಾವೇ: ಪ್ರಲ್ಹಾದ್ ಜೋಶಿ