ಬೆಳಗಾವಿ: "ಮಹದಾಯಿ ಯೋಜನೆಯನ್ನು ನಾವು ಶೀಘ್ರವಾಗಿ ಅನುಷ್ಠಾನ ಮಾಡಲು ಉದ್ದೇಶಿದ್ದೇವೆ. ಆದರೆ, ಕೇಂದ್ರದ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಈ ಯೋಜನೆಗೆ ಒಪ್ಪಿಗೆ ನೀಡದೇ ಸತಾಯಿಸುತ್ತಿದೆ. ಆದ್ದರಿಂದ, ಕೇಂದ್ರ ಸರ್ಕಾರವು ಈ ಕೂಡಲೇ ಒಪ್ಪಿಗೆ ನೀಡಬೇಕೆಂದು ಈ ಸದನದ ಪರವಾಗಿ ನಾನು ಒತ್ತಾಯಿಸುತ್ತೇನೆ" ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಚರ್ಚೆಗೆ ಉತ್ತರಿಸಿದ ಅವರು, "ಗೋವಿಂದ ರಾವ್ ಅವರು ವರದಿ ಕೊಟ್ಟ ಕೂಡಲೇ ಅದನ್ನು ಅನುಷ್ಠಾನ ಮಾಡಲು ಕ್ರಮವಹಿಸಲಾಗುವುದು. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಆಲಮಟ್ಟಿ ಜಲಾಶಯವನ್ನು 519 ಮೀಟರ್‌ಗಳಿಂದ 524.256 ಮೀಟರ್‌ಗಳಿಗೆ ಎತ್ತರಿಸುವುದರಿಂದ ಮುಳುಗಡೆಯಾಗುವ ಸುಮಾರು 73 ಸಾವಿರ ಎಕರೆ ಭೂಮಿಯನ್ನು ಕನ್ಸೆಂಟ್ ಅವಾರ್ಡಿನ ಮೂಲಕ ಒಂದೇ ಹಂತದಲ್ಲಿ ರೈತರ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳಲು ಕ್ರಮವಹಿಸಲಾಗುವುದು. ಈ ಭಾಗದಲ್ಲಿ ಮಳೆ ಮುಂತಾದ ಕಾರಣಗಳಿಂದ ಹಾನಿಯಾಗಿರುವ ರಸ್ತೆಗಳ ಅಭಿವೃದ್ಧಿಯ ಕುರಿತು ಕ್ರಮವಹಿಸಲಾಗುವುದು. ಈ ಭಾಗದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಕ್ರಮವಹಿಸಲಾಗುವುದು" ಎಂದರು.
"ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳಲ್ಲಿ ಒಟ್ಟು 14 ಜಿಲ್ಲೆಗಳು, 101 ತಾಲೂಕುಗಳು, 321 ಹೋಬಳಿಗಳಿವೆ. ಈಗ ಸುಮಾರು 2.96 ಕೋಟಿ ಜನಸಂಖ್ಯೆ ಈ ಭಾಗದಲ್ಲಿ ವಾಸವಿದೆ. 59.04 ಕುಟುಂಬಗಳ ಬಳಿ ಬಿಪಿಎಲ್ ಕಾರ್ಡ್ಗಳಿವೆ. 2011ರ ಜನಗಣತಿಯಲ್ಲಿ ಸಂಗ್ರಹಿಸಿದ ಮಾಹಿತಿ ಪ್ರಕಾರ ರಾಜ್ಯದ ಪುರುಷರ ಸರಾಸರಿ ಸಾಕ್ಷರತೆಯ ಪ್ರಮಾಣ ಶೇ. 81.30, ಮಹಿಳೆಯರ ಸಾಕ್ಷರತೆಯ ಪ್ರಮಾಣ ಶೇ.65.72 ಒಟ್ಟಾರೆ ಶೇ.73.58" ಎಂದು ಮಾಹಿತಿ ನೀಡಿದರು.
ಬಜೆಟ್‌ನಲ್ಲಿ 19,878 ಕೋಟಿ ರೂ ನಿಗದಿ: "ಕೆ.ಕೆ.ಆ.ರ್.ಡಿ.ಬಿ. ಗೆ 2013-14 ರಿಂದ ಇದುವರೆಗೆ 19,878 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ. 13,229 ಕೊಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದುವರೆಗೆ 11,500 ಕೋಟಿ ಖರ್ಚು ಮಾಡಲಾಗಿದೆ. ವಿವರ ಈ ರೀತಿ ಇದೆ. ಮಂಡಳಿಯು ಬಿಡುಗಡೆಯಾದ ಅನುದಾನಕ್ಕೆ ಶೇ.85ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ. ಒಟ್ಟಾರೆ 35,885 ಕಾಮಗಾರಿಗಳು ಕೈಗೆತ್ತಿಕೊಂಡಿದ್ದು, 27,264 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. 8,621 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ" ಎಂದು ತಿಳಿಸಿದರು.
79,985 ಹುದ್ದೆಗಳು ಭರ್ತಿ: "ಕಾಯ್ದೆ ಆರಂಭದಿಂದ ಇದುವರೆಗೆ ವಿವಿಧ ಇಲಾಖೆಗಳಲ್ಲಿ ಈ ಭಾಗದವರಿಗೆ 1,09,416 ಹುದ್ದೆಗಳನ್ನು ನೇರ ನೇಮಕಾತಿಗೆ ಗುರುತಿಸಿದ್ದು, 79,985 ಹುದ್ದೆಗಳು ಭರ್ತಿಯಾಗಿವೆ. ಮುಂಬಡ್ತಿ ಮೀಸಲಿಗೆ ಗುರುತಿಸಿದ 38,705 ಹುದ್ದೆಗಳ ಪೈಕಿ 29,793 ಜನರಿಗೆ ಮುಂಬಡ್ತಿ ಭಾಗ್ಯ ನೀಡಲಾಗಿದೆ. ಇನ್ನು ಖಾಲಿ ಉಳಿದ ನೇರ ನೇಮಕಾತಿ ಮತ್ತು ಮುಂಬಡ್ತಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸಕ್ತ 2024-25ನೇ ಸಾಲಿನ ಆಯವ್ಯಯದಲ್ಲಿ ದಾಖಲೆ ಪ್ರಮಾಣದಲ್ಲಿ 5,000 ಕೋಟಿ ರೂ. ಘೋಷಿಸಿ ಅನುದಾನ ಹಂಚಿಕೆ ಮಾಡಲಾಗಿದೆ".
"ಆದರೆ, ನೀರಾವರಿಯ ಬಗ್ಗೆ ಬಹಳ ಮಾತನಾಡುತ್ತಿದ್ದ ಬಸವರಾಜ ಬೊಮ್ಮಾಯಿ ಮತ್ತು ಗೋವಿಂದ ಕಾರಜೋಳರು ಮುಳುಗಡೆಯಾಗುವ ಭೂ ಪ್ರದೇಶವನ್ನು ಎರಡು ಹಂತಗಳಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳಲು ತೀರ್ಮಾನಿಸಿದ್ದರು. ಈ ಕುರಿತು ಸಭೆಗಳನ್ನೂ ಮಾಡಿದ್ದರು. ಇಷ್ಟೆಲ್ಲ ಮಾಡಿ ಗೋವಿಂದ ಕಾರಜೋಳರು ಇತ್ತೀಚೆಗೆ ಸಿದ್ದರಾಮಯ್ಯನವರ ಸರ್ಕಾರ ಎರಡು ಹಂತಗಳಲ್ಲಿ ಯೋಜನೆ ಜಾರಿ ಮಾಡಲು ಹೊರಟಿದೆ ಎಂದು ಸುಳ್ಳು ಹೇಳಿದ್ದರು. ಆದರೆ, ವಾಸ್ತವವಾಗಿ ದಿನಾಂಕ 13/9/2022 ರಂದು ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಭೂ ಪರಿಹಾರ ನೀಡಲು ಮುಖ್ಯಮಂತ್ರಿಗಳಾಗಿದ್ದ ಬಸವರಾಜ್ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗಿತ್ತು. ಈ ಉಪ ಸಮಿತಿಯು ಈ ರೀತಿ ತೀರ್ಮಾನಿಸಿದೆ" ಎಂದರು.
ಪರಿಷ್ಕೃತ ಯೋಜನೆಗೆ ಅನುಮೋದನೆ: "ಹುಬ್ಬಳ್ಳಿ- ಧಾರವಾಡ ಸೇರಿದಂತೆ ಹಲವು ನಗರ ಮತ್ತು ಪಟ್ಟಣ ಪ್ರದೇಶಗಳ ಜನರ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಹದಾಯಿ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಗಾಗಿ ನಮಗೆ ನೀರಿನ ಹಂಚಿಕೆಯನ್ನೂ ಸಹ ಮಾಡಲಾಗಿದೆ. ರಾಜ್ಯ ಸರ್ಕಾರ ಪರಿಷ್ಕೃತ ಯೋಜನೆಗೂ ಅನುಮೋದನೆ ನೀಡಿದೆ. ಟೆಂಡರುಗಳನ್ನೂ ಆಹ್ವಾನಿಸಲಾಗಿದೆ. ಈ ಯೋಜನೆಗೆ ಚುನಾವಣಾ ದೃಷ್ಟಿಯಿಂದ ಜಲ ಆಯೋಗವು ತೀರುವಳಿ ನೀಡಿದೆ. ಆದರೆ ಕೇಂದ್ರ ಸರ್ಕಾರದ ಅಧೀನದ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಈ ಯೋಜನೆಗೆ ಅನುಮೋದನೆ ನೀಡದೆ ಸತಾಯಿಸುತ್ತಿದೆ. ಕರ್ನಾಟಕಕ್ಕೆ ದ್ರೋಹ ಮಾಡುತ್ತಿದೆ. ಈ ಯೋಜನೆಗೆ ಅನುಮೋದನೆ ನೀಡಿದ ಕೂಡಲೆ ನಾವು ಕಾಮಗಾರಿ ಪ್ರಾರಂಭಿಸುತ್ತೇವೆ" ಎಂದು ಭರವಸೆ ನೀಡಿದರು.
"ನೀರಾವರಿ ಯೋಜನೆಗಳ ಅನುಷ್ಠಾನದ ವಿಚಾರದಲ್ಲಿ ನಮ್ಮ ಬದ್ಧತೆ ಪ್ರಶ್ನಾತೀತ. ಕರ್ನಾಟಕ ನೀರಾವರಿ ನಿಗಮವೊಂದರಲ್ಲೆ ಉತ್ತರ ಕರ್ನಾಟಕದ ಭಾಗಗಳಲ್ಲಿ 6,890 ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಮುನ್ನಡೆಸುತ್ತಿದ್ದೇವೆ. ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ 2013 ರಿಂದ 2018 ವರೆಗೆ ನಮ್ಮ ಸರ್ಕಾರ 56,298 ಕಿ.ಮೀ. ರಸ್ತೆಗಳನ್ನು ನಿರ್ಮಿಸಿತ್ತು. ಆದರೆ ಬಿಜೆಪಿ ಸರ್ಕಾರ ಕೇವಲ 33,566 ಕಿ.ಮೀ ಮಾತ್ರ ನಿರ್ಮಿಸಿದೆ. ನಮ್ಮ ಸರ್ಕಾರದ ಈ ಅವಧಿಯಲ್ಲಿ 7,633 ಕಿ.ಮೀ ರಸ್ತೆ ನಿಮಾಣವಾಗಿದೆ. ಕಲ್ಯಾಣ ಪಥ ಮತ್ತು ಪ್ರಗತಿ ಪಥ ಯೋಜನೆಗಳನ್ನು ಈ ಆರ್ಥಿಕ ವರ್ಷದಲ್ಲೆ ಪ್ರಾರಂಭಿಸುತ್ತಿದ್ದೇವೆ. ಈ ಯೋಜನೆಗಳಿಂದ ಮುಂದಿನ ದಿನಗಳಲ್ಲಿ ತಿಂಗಳುಗಳಲ್ಲಿ 6,000 ಕೋಟಿ ರೂಗಳನ್ನು ವೆಚ್ಚ ಮಾಡಿ 8,260 ಕಿಮೀ ರಸ್ತೆಯನ್ನು ನಿರ್ಮಿಸುತ್ತೇವೆ" ಎಂದು ತಿಳಿಸಿದರು.
ಮನೆಗಳ ನಿರ್ಮಾಣಕ್ಕೆ ನೆರವು: "2013 ರಿಂದ 2018 ರವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ 14.55 ಲಕ್ಷ ಮನೆಗಳನ್ನು ನಿರ್ಮಿಸಿದ್ದೆವು. ಅದರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ 7.86 ಲಕ್ಷ ಮನೆಗಳನ್ನು ನಿರ್ಮಿಸಿತ್ತು. ಬಿಜೆಪಿಯವರು 2019 ರಿಂದ 2023ರ ಮಾರ್ಚ್ ವರೆಗೆ 3 ಲಕ್ಷ ಮನೆಗಳನ್ನು ಮಾತ್ರ ನಿರ್ಮಿಸಿದ್ದಾರೆ. 2023 ರಿಂದ ಇಲ್ಲಿಯವರೆಗೆ ನಮ್ಮ ಸರ್ಕಾರ 3.03 ಲಕ್ಷ ಮನೆಗಳನ್ನು ನಿರ್ಮಿಸಿದೆ. ಅದರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ 1.45 ಲಕ್ಷ ಮನೆಗಳನ್ನು ನಿರ್ಮಿಸಿದೆ" ಎಂದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೆ ತೆರೆ: 64 ತಾಸುಗಳ ಕಾಲ ಕಾರ್ಯಕಲಾಪ; 16 ಮಸೂದೆ ಅಂಗೀಕಾರ